ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ನಿರ್ವಾಹಕರು ಮಹಿಳಾ ಪ್ರಯಾಣಿಕರಿಲ್ಲದಿದ್ದರೂ ಶೂನ್ಯ ಮೌಲ್ಯದ ಟಿಕೆಟ್‌ಗಳನ್ನು ವಿತರಣೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಈವರೆಗೆ ನಾಲ್ಕೂ ನಿಗಮಗಳ 108 ನಿರ್ವಾಹಕರ ವಿರುದ್ಧ ಇಲಾಖಾ ಪ್ರಕರಣ ದಾಖಲಿಸಲಾಗಿದೆ.ಶಕ್ತಿ ಯೋಜನೆ ಜಾರಿ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಬಸ್‌ಗಳಲ್ಲಿ ನಿರ್ವಾಹಕರು ನೀಡುವ ಟಿಕೆಟ್ ಆಧರಿಸಿ ಪ್ರಯಾಣಿಕರ ಲೆಕ್ಕ ಹಾಕಲಾಗುತ್ತದೆ. ಆದರೆ, ಹೀಗೆ ಟಿಕೆಟ್ ನೀಡುವಲ್ಲಿ ಲೋಪವಾಗುತ್ತಿದ್ದು, ನಿರ್ವಾಹಕರು ಮಹಿಳಾ ಪ್ರಯಾಣಿಕರಿಲ್ಲದಿದ್ದರೂ ಶೂನ್ಯ ಮೌಲ್ಯದ ಟಿಕೆಟ್‌ಗಳನ್ನು ಹರಿದು, ಎಸೆಯಲಾಗುತ್ತಿದೆ ಎಂಬ ಆರೋಪಗಳಿವೆ. ಅದಕ್ಕೆ ಪುಷ್ಠಿ ನೀಡುವಂತೆ ಈ ಹಿಂದೆ ಬಿಎಂಟಿಸಿ ಬಸ್ ನಿರ್ವಾಹಕರೊಬ್ಬರು ಟಿಕೆಟ್‌ಗಳನ್ನು ಹರಿದು ಹೊರಗೆ ಎಸೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದರಂತೆ ರಾಜ್ಯದಲ್ಲಿ 108 ನಿರ್ವಾಹಕರ ವಿರುದ್ಧ ಅನಗತ್ಯವಾಗಿ ಶೂನ್ಯ ಟಿಕೆಟ್‌ಗಳನ್ನು ಹರಿದ ಕುರಿತು ಪ್ರಕರಣ ದಾಖಲಿಸಲಾಗಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್‌ನಲ್ಲಿ ನೀಡಿರುವ ಮಾಹಿತಿಯಂತೆ ಕೆಎಸ್ಸಾರ್ಟಿಸಿ ನಿರ್ವಾಹಕರು ಹೆಚ್ಚಾಗಿ ಯೋಜನೆಯ ದುರುಪಯೋಗಪಡಿಸಿಕೊಂಡಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ತನಿಖಾ ತಂಡಗಳು ಬಸ್‌ಗಳ ತಪಾಸಣೆ ನಡೆಸಿದ ಸಂದರ್ಭದಲ್ಲಿ ನಿರ್ವಾಹಕರು ಶೂನ್ಯ ಟಿಕೆಟ್ ಅನ್ನು ನಿಯಮ ಮೀರಿ ವಿತರಿಸಿರುವುದನ್ನು ಪತ್ತೆ ಮಾಡಿದ್ದಾರೆ.ಅದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುವ 108 ನಿರ್ವಾಹಕರಲ್ಲಿ ಕೆಎಸ್ಸಾರ್ಟಿಸಿಯ 53 ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಾಗಿದೆ. ಉಳಿದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 36, ಬಿಎಂಟಿಸಿ 12 ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ 7 ಮಂದಿ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಹಾಗೂ ಅವರೆಲ್ಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ತನಿಖಾ ತಂಡಗಳು ನಿಗಮಗಳ ಕೇಂದ್ರ ಕಚೇರಿಗೆ ಶಿಫಾರಸು ಮಾಡಿವೆ.