ಸಾರಾಂಶ
ರೋಣ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಉಚಿತ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆ ಮಹಿಳೆ ಸ್ವಾವಲಂಬಿಯಾಗಿ ಬದುಕು ಸಾಗಿಸಲು ಪ್ರಬಲ ಶಕ್ತಿ ನೀಡಿದೆ ಎಂದು ರೋಣ ಶಾಸಕ ಹಾಗೂ ಖನಿಜ ನಿಗಮದ ಅಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು.
ಅವರು ಪಟ್ಟಣದ ಬಸ್ ನಿಲ್ದಾಣದಲ್ಲಿ 500 ಕೋಟಿ ಟಿಕೆಟ್‌ನಷ್ಟು ಮಹಿಳೆಯರು ಬಸ್ ಪ್ರಯಾಣ ಮಾಡಿದ ಹಿನ್ನೆಲೆಯಲ್ಲಿ ಜರುಗಿದ ವಿಶೇಷ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಪಂಚ ಉಚಿತ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೇವಲ 5 ತಿಂಗಳಲ್ಲಿ ನೀಡಿದ ಭರವಸೆ ಅನುಷ್ಠಾನಕ್ಕೆ ತಂದು ಮಹಿಳೆಯರಿಗೆ ಹಾಗೂ ಮತದಾರರಿಗೆ ನುಡಿದಂತೆ ನಡೆಯುವ ಸರ್ಕಾರ ಎಂಬ ಮಾತನ್ನು ಉಳಿಸಿಕೊಂಡಿದೆ. ಅದರಂತೆ ಇಂದು ಶಕ್ತಿ ಯೋಜನೆಯಿಂದ ರಾಜ್ಯದಲ್ಲಿ ಇಲ್ಲಿವರೆಗೆ 500 ಕೋಟಿ ಟಿಕೆಟ್ ನೀಡಲಾಗಿದ್ದು, ಮಹಿಳೆಯರು ಉಚಿತ ಪ್ರಯಾಣ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಪಂಚ ಉಚಿತ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಈ ವರ್ಷದ ಆಯವ್ಯಯದಲ್ಲಿ ₹ 58 ಸಾವಿರ ಕೋಟಿ ಮೀಸಲಿಡಲಾಗಿದೆ. ಶಕ್ತಿ ಯೋಜನೆಯ ಸಮರ್ಪಕ ಅನುಷ್ಠಾನ ರಾಜ್ಯ ಸರ್ಕಾರದ ಹೆಮ್ಮೆಯಾಗಿದೆ. ರೋಣ ತಾಲೂಕಿನಲ್ಲಿ ಇಲ್ಲಿಯವರಗೆ 1 ಕೋಟಿ 72 ಲಕ್ಷ ಟಿಕೆಟ್ ನೀಡಲಾಗಿದ್ದು, ತಾಲೂಕಿನ ಮಹಿಳೆಯರು ಉತ್ಸಾಹದಿಂದ ಪ್ರಯಾಣ ಮಾಡಿದ್ದಾರೆ ಹಾಗೂ ಸಿದ್ದರಾಮಯ್ಯನವರು ಮುಂದಿನ ದಿನಗಳಲ್ಲಿ ಶಾಲೆಗೆ ತೆರಳುವ ಗಂಡು ಮಕ್ಕಳಿಗೂ ಉಚಿತ ಬಸ್ ವ್ಯವಸ್ಥೆ ನೀಡುವ ಗುರಿ ಹೊಂದಿದ್ದು ಆದಷ್ಟು ಬೇಗ ಅನುಷ್ಠಾನಕ್ಕೆ ತರಲು ಸಕಲ ಸಿದ್ಧತೆ ಮಾಡುತ್ತಿದ್ದಾರೆ ಎಂದರು.
ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಮಿಥುನ ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಮೇಶ ಪಲ್ಲೇದ, ನಾಜಬೇಗಂ ಯಲಿಗಾರ, ಗೀತಾ ಕೊಪ್ಪದ, ಲಕ್ಷ್ಮೀ ಗಡಗಿ, ಬಸಮ್ಮ ಹಿರೇಮಠ, ಗದಿಗೆಪ್ಪ ಕಿರೇಸೂರ, ನಾಗಪ್ಪ ದೇಶಣ್ಣವರ, ಅಸ್ಲಾಂ ಕೊಪ್ಪಳ, ಮಲ್ಕಿಕ ಯಲಿಗಾರ, ಬಸವರಾಜ ತಳವಾರ, ರೋಣ ಸಾರಿಗೆ ಘಟಕದ ವ್ಯವಸ್ಥಾಪಕ ಎಸ್.ವೈ. ಯಕ್ಸಂಬಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.