ಸಾರಾಂಶ
- ಟಿಕೆಟ್ ಮೌಲ್ಯದ ಶೇ. 34ರಷ್ಟು ನೀಡುರುವುದು ಬಾಕಿಯುಳಿದಿದೆ
- ಈ ವರೆಗೆ ಖರ್ಚಾದ ಟಿಕೆಟ್ ₹631 ಕೋಟಿಗೂ ಅಧಿಕ- ಬಂದಿರುವುದು ₹417 ಕೋಟಿ ಮಾತ್ರ
ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಶಕ್ತಿ ಯೋಜನೆಗೆ ರಾಜ್ಯದಲ್ಲಿ ಅತ್ಯುತ್ತಮ ಸ್ಪಂದನೆ ದೊರೆತಿದೆ. ಆದರೆ, ಸಾರಿಗೆ ಸಂಸ್ಥೆಗಳಿಗೆ ಬರಬೇಕಾದ ದುಡ್ಡು ಮಾತ್ರ ಪೂರ್ಣವಾಗಿ ಬಂದಿಲ್ಲ. ಸಂಸ್ಥೆಗೆ ಬರೋಬ್ಬರಿ ಶೇ. 34ರಷ್ಟು ಶಕ್ತಿ ಯೋಜನೆಯ ದುಡ್ಡು ಬರಬೇಕಿದೆ. ಈ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸುತ್ತಿರುವ ನೌಕರರ ವರ್ಗ, ಹಣ ಕೊಡದಿದ್ದಲ್ಲಿ ಹೋರಾಟಕ್ಕೆ ಇಳಿಯಲು ಅಣಿಯಾಗುತ್ತಿದೆ.
ಜೂ.11ರಂದು ರಾಜ್ಯದಲ್ಲಿ ಶಕ್ತಿ ಯೋಜನೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಶುರು ಮಾಡಿತ್ತು. ಆಗಿನಿಂದ ಪ್ರತಿದಿನ ಬಸ್‌ಗಳು ರಶ್ಶೋ ರಶ್. ಪ್ರತಿ ಬಸ್ ಕೂಡ ತುಂಬಿ ತುಳುಕುತ್ತಿವೆ. ಯೋಜನೆ ಆರಂಭದಲ್ಲಿ ಪ್ರಯಾಣಿಕರು ಪ್ರಯಾಣಿಸುವ ಟಿಕೆಟ್ ದರವನ್ನು ಆಯಾ ತಿಂಗಳೇ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು.ಹಾಗಂತ ಪ್ರತಿ ತಿಂಗಳು ದುಡ್ಡು ಕೊಡುತ್ತಿಲ್ಲ ಅಂತೇನೂ ಇಲ್ಲ. ಕೊಡುತ್ತಿದೆ. ಆದರೆ ಸ್ವಲ್ಪ ಹಣವನ್ನು ಉಳಿಸಿಕೊಂಡು ಬರುತ್ತಿದೆ. ಪ್ರತಿ ತಿಂಗಳು ಹೀಗೆ ಹಣ ಉಳಿಸಿಕೊಂಡು ಬರುತ್ತಿರುವುದರಿಂದ ವಾಯವ್ಯ ಸಾರಿಗೆ ಸಂಸ್ಥೆಗೆ ಇನ್ನೂ ₹213.80 ಕೋಟಿ ಕೊಡುವುದು ಬಾಕಿಯುಳಿದಿದೆ. ಮುಂದಿನ ತಿಂಗಳಿಗೆ ಇದು ಮತ್ತಷ್ಟು ಏರಿಕೆಯಾಗುತ್ತದೆ.
ಎಷ್ಟೆಷ್ಟು?ಜೂ.11ರಿಂದ ನವೆಂಬರ್ 30ರ ವರೆಗೆ 24.57 ಕೋಟಿಗೂ ಅಧಿಕ ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯಾಣಿಸಿದ್ದಾರೆ. ಇದರ ಟಿಕೆಟ್ ಮೌಲ್ಯ ₹631.26 ಕೋಟಿಗೂ ಅಧಿಕವಾಗಿದೆ. ಆದರೆ ಈ ವರೆಗೆ ಕೊಟ್ಟಿರುವುದು ₹417.46 ಕೋಟಿ. ಇನ್ನೂ ₹213.80 ಕೋಟಿ ಕೊಡುವುದು ಬಾಕಿಯುಳಿದಿದೆ. ಇದರಿಂದ ಟಿಕೆಟ್ ಮೌಲ್ಯದ ಶೇ. 66ರಷ್ಟು ಮಾತ್ರ ದುಡ್ಡನ್ನು ಕೊಟ್ಟಂತಾಗಿದೆ. ಇನ್ನು ಶೇ. 34ರಷ್ಟು ಕೊಡುವುದು ಬಾಕಿಯುಳಿದಿದೆ ಎಂದು ಮೂಲಗಳು ತಿಳಿಸುತ್ತವೆ.
ನಮಗೇಕೆ ಕಡಿಮೆ:ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ ವೇಳೆ ಸಾರಿಗೆ ಸಂಸ್ಥೆಯ ನೌಕರರು, ಅಧಿಕಾರಿವರ್ಗವೆಲ್ಲ ಸಂತಸವಾಗಿತ್ತು. ನಷ್ಟದಲ್ಲಿರುವ ಸಂಸ್ಥೆಗೆ ಬೂಸ್ಟ್ ನೀಡಿದಂತಾಗುತ್ತದೆ ಎಂದು ಭಾವಿಸಿದ್ದರು. ಆದರೆ ಇದೀಗ ಮಹಿಳಾ ಪ್ರಯಾಣದ ಟಿಕೆಟ್ ಮೌಲ್ಯಕ್ಕಿಂತ ಕಡಿಮೆ ಕೊಡುತ್ತಿರುವುದೇಕೆ? ಟಿಕೆಟ್ ಮೌಲ್ಯದ ಎಲ್ಲ ಹಣವನ್ನು ಕೊಡಿ ಎಂದು ಈಗಾಗಲೇ ಮನವಿ ಕೊಟ್ಟಿದ್ದೇವೆ. ಸಚಿವರು ಸಿಎಂ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಈ ವರೆಗೂ ಆಗಿಲ್ಲ. ಜ.1,2 ಮತ್ತು 3ರಂದು ನೌಕರರ ಫೆಡರೇಷನ್‌ನ ಮೀಟಿಂಗ್ ಇದೆ. ಅಲ್ಲಿ ಚರ್ಚಿಸುತ್ತೇವೆ. ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಆಗಲೂ ಕೊಡದಿದ್ದರೆ ಹೋರಾಟ ನಡೆಸುತ್ತೇವೆ. ಅದಕ್ಕೆ ಅವಕಾಶ ಕೊಡದೇ ಬರಬೇಕಾದ ದುಡ್ಡನ್ನೆಲ್ಲ ಕೊಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂಬುದು ನೌಕರರ ವರ್ಗದ ಅಂಬೋಣ.
ಶಕ್ತಿ ಯೋಜನೆ ಪ್ರಾರಂಭವಾದಾಗ ನಷ್ಟದಲ್ಲಿರುವ ಸಂಸ್ಥೆಯನ್ನು ಮೇಲೆತ್ತಲು ಈ ಯೋಜನೆ ಸಹಕಾರಿಯಾಗುತ್ತದೆ ಎಂದು ಭಾವಿಸಿದ್ದೇವು. ಆದರೆ, ಸರ್ಕಾರ ಇದೀಗ ಟಿಕೆಟ್ ಮೌಲ್ಯದ ಶೇ. 66ರಷ್ಟು ಮಾತ್ರ ನೀಡುತ್ತಿದೆ. ಯೋಜನೆಯಡಿ ಖರ್ಚಾದ ಟಿಕೆಟ್ ಮೌಲ್ಯದ ಎಲ್ಲ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ಕಾರ್ಯಾಧ್ಯಕ್ಷ ಆರ್.ಎಫ್ ಕವಳಿಕಾಯಿ ತಿಳಿಸಿದ್ದಾರೆ.