ಶಾಲ್ಯಾಗ ದನ ಕಟ್ತಾರ, ಸಗಣಿ ಕಸ ಹಾಕ್ತಾರ

| Published : Nov 19 2025, 01:00 AM IST

ಶಾಲ್ಯಾಗ ದನ ಕಟ್ತಾರ, ಸಗಣಿ ಕಸ ಹಾಕ್ತಾರ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಶಾಲೆಯಲ್ಲಿ ಗಣಿತ, ವಿಜ್ಞಾನ ವಿಷಯಕ್ಕೆ ಪ್ರಯೋಗ ಶಾಲೆ, ಗ್ರಂಥಾಲಯಗಳ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಡಲು ಸ್ಫೂರ್ತಿ ವಿ. ಮಟಗೊಡ್ಲಿ, ಚಿತ್ರಕಲೆ, ಕರಕುಶಲ ಕಲೆಗೆ, ದೈಹಿಕ, ಗಣಕಯಂತ್ರ ಶಿಕ್ಷಕರನ್ನು ನೇಮಿಸಲು ಲಕ್ಷ್ಮಿ ವೀರಭದ್ರಪ್ಪನವರ ಮನವಿ ಮಾಡಿದರು.

ಧಾರವಾಡ:

ನಮ್ಮ ಶಾಲಿ ಮೈದಾನದಾಗ ದನಾ ಕಟತಾರಿ. ಅವು ಒದರುದಕ್‌ ಪಾಠ ಸರಿಯಾಗಿ ಕೇಳೋದಿಲ್ರಿ.. ತಿಪ್ಪಿನೂ ಮೈದಾನದಾಗ ಮಾಡಿದ್ದು ಕೆಟ್ಟ ವಾಸನಿ ಬರತೈತ್ರಿ. ಶಾಲಿ ಬಿಟ್‌ ಮ್ಯಾಲ ಶಾಲಿ ಕಟ್ಟಿ ಮ್ಯಾಲ ಕುಂತ ಸೆರೆ ಕುಡಿತಾರಿ, ಸಿಗರೇಟ್‌ ಸೇದಿ ಅಲ್ಲೆ ಒಗದ ಹೋಗ್ತಾರ್ರಿ. ಶಾಲಿಗೆ ಬರು ದಾರಿನ ಸರಿ ಇಲ್ರಿ. ದಾರಿಯೊಳಗ ಮೂತ್ರ ವಿಸರ್ಜನೆ ಮಾಡತಾರಿ. ನಮಗಂತೂ ಅಸಹ್ಯ ಅನಸೈತಿ, ಏನರ ಮಾಡಿ ಇಂತಾ ಸಮಸ್ಯೆಗೆ ಪರಿಹಾರ ಕೊಡ್ರಿ!

ತಾಲೂಕಿನ ಮಾದನಭಾವಿ ಗ್ರಾಪಂ ವತಿಯಿಂದ ಗ್ರಾಮದ ಸರ್ಕಾರಿ ಶಾಲಾ ಆವರಣಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಜಿಲ್ಲಾಧಿಕಾರಿ ಎದುರು ಧೈರ್ಯದಿಂದ ಮಕ್ಕಳು ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಏನೇನು ದೂರು:

ಎಸ್ಸೆಸ್ಸೆಲ್ಸಿ ಹೆಚ್ಚುವರಿ ತರಗತಿ ನಡೆಯುತ್ತಿದ್ದು ಬೋಗೂರಿನಿಂದ ಬರಲು ಬಸ್‌ ಸೌಲಭ್ಯ ಬೇಕು ಎಂದು ಮಾದನಬಾವಿ ವಿದ್ಯಾರ್ಥಿನಿ ಸೌಂದರ್ಯ ಕಲ್ಲೇದ ಬೇಡಿಕೆ ಇಟ್ಟರೆ, ಕಾಂಪೌಂಡ್‌ ಇಲ್ಲದ ಕಾರಣ ನಮ್ಮ ಶಾಲೆಯೊಳಗ ದನಕರುಗಳ ಪ್ರವೇಶ, ತಿಪ್ಪೆ ಮಾಡಿರುವ ಬಗ್ಗೆ ಮಹೇಶ್ವರಿ ಜೋಗಿ ಗಮನ ಸೆಳೆದಳು. ಅದೇ ರೀತಿ ಶಾಲೆ ಆವರಣದಲ್ಲಿ ಸಸಿ ನೆಟ್ಟಿದ್ದು ಹಾಳಾಗುತ್ತಿವೆ. ಕಾಂಪೌಂಡ್‌ ಮಾಡಿಸಿಕೊಡಿ ಎಂದು ಸಹನಾ ಚಿನಗುಡಿ ಹೇಳಿದರೆ, ಶಾಲೆಯ ವಸ್ತುಗಳು ಕಳ್ಳತನವಾಗುತ್ತಿದ್ದು ಸಿಸಿ ಕ್ಯಾಮೆರಾ ವ್ಯವಸ್ಥೆಗೆ ವಿಠ್ಠಲ ಒಡೆಯರ ಬೇಡಿಕೆ ಇಟ್ಟನು. ಶಾಲಾ ಆವರಣದಲ್ಲಿ ಮದ್ಯಪಾನ ಮಾಡುತ್ತಾರೆ. ಗೊತ್ತಾಗಬಾರದು ಎಂದು ಸಿಸಿ ಕ್ಯಾಮೆರಾ ಸಹ ಒಡೆದಿದ್ದಾರೆ. ಇದನ್ನು ತಡೆಗಟ್ಟಿ ಎಂದು ನಿಖಿತಾ ಕೇರಾಳಿ ಮನವಿ ಮಾಡಿದಳು.

ಸಿಸಿ ಕ್ಯಾಮೆರಾ ಬೇಕು:

ನಮ್ಮ ಶಾಲೆಯಲ್ಲಿ ಗಣಿತ, ವಿಜ್ಞಾನ ವಿಷಯಕ್ಕೆ ಪ್ರಯೋಗ ಶಾಲೆ, ಗ್ರಂಥಾಲಯಗಳ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಡಲು ಸ್ಫೂರ್ತಿ ವಿ. ಮಟಗೊಡ್ಲಿ, ಚಿತ್ರಕಲೆ, ಕರಕುಶಲ ಕಲೆಗೆ, ದೈಹಿಕ, ಗಣಕಯಂತ್ರ ಶಿಕ್ಷಕರನ್ನು ನೇಮಿಸಲು ಲಕ್ಷ್ಮಿ ವೀರಭದ್ರಪ್ಪನವರ ಮನವಿ ಮಾಡಿದರು. ಹೀಗೆ ಶಾಲೆಯಲ್ಲಿ ಶೌಚಾಲಯ ಕೊರತೆ, ಮೈದಾನ ಸಮತಟ್ಟು, ಚಿತ್ರಕಲೆ, ದೈಹಿಕ ಶಿಕ್ಷಕರ ನೇಮಕಾತಿ, ಗ್ರಂಥಾಲಯ ಕಟ್ಟಡ ಹಾಗೂ ಭೋಜನಾಲಯ ನಿರ್ಮಿಸುವ ಕುರಿತು ಮಾದನಬಾವಿ ಸೇರಿದಂತೆ ಹೊಸಟ್ಟಿ ಹಾಗೂ ಮುಗಳಿ ಸರ್ಕಾರಿ ಶಾಲಾ ಮಕ್ಕಳು ಮನವಿ ಮಾಡಿದರು.

ಸೌಲಭ್ಯ ನೀಡುವುದು ನಮ್ಮ ಜವಾಬ್ದಾರಿ:

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಭವಿಷ್ಯತ್ತಿನ ಬೆಳಕಾಗಿರುವ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಸೌಲಭ್ಯ ಹಾಗೂ ಸೂಕ್ತ ಪರಿಸರ ಸೃಷ್ಟಿಸುವುದು ನಮ್ಮ ಜವಾಬ್ದಾರಿ. ಮಕ್ಕಳ ಹಕ್ಕು ಮತ್ತು ಕರ್ತವ್ಯ ಕಾಪಾಡುವುದರೊಂದಿಗೆ ಅವರ ಬೇಕು-ಬೇಡಿಕೆಗಳಿಗೆ ಸ್ಪಂದಿಸಿದರೆ ಗ್ರಾಮದ ಅಭಿವೃದ್ಧಿಗೆ ಪೂರಕ ಕಾರ್ಯವಾಗುತ್ತದೆ. ಶಾಲೆಯಲ್ಲಿ ಪೋಷಕಾಂಶಯುಕ್ತ ಬಿಸಿಯೂಟ, ಶುದ್ಧ ಕುಡಿಯುವ ನೀರು, ಶೌಚಾಲಯಗಳ ಸ್ವಚ್ಛತೆ, ಕ್ರೀಡಾ ಚಟುವಟಿಕೆಗಳು ಇವು ಅತಿ ಅವಶ್ಯಕ. ಇದರ ಜತೆಗೆ ಪೋಷಕರು ಮತ್ತು ಸಾರ್ವಜನಿಕರೂ ಸಹ ಸಮಾನವಾಗಿ ಕೈಜೋಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಕ್ಕಳ ಮನಸ್ಸು ಮುಗ್ಧ:

ಮಕ್ಕಳಿಗೆ ತಮ್ಮ ಹಕ್ಕು, ಅಗತ್ಯ ಸೌಲಭ್ಯ ಕೇಳುವ ಮುಕ್ತ ವಾತಾವರಣ ಇರಬೇಕು. ಇದರಿಂದ ಅವರಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಯುತ್ತದೆ. ಪ್ರಶ್ನೆ ಕೇಳುವ ಮನೋಭಾವ ಬೆಳೆಸಬೇಕು. ಇಂದಿನ ಸಭೆಯಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳು ಸಹಜ ನ್ಯಾಯಯುತ ಬೇಡಿಕೆಗಳಾಗಿವೆ. ಅಧಿಕಾರಿಗಳು ಸೀಮಿತ ಕಾಲಾವಧಿಯಲ್ಲಿ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಶಾಲಾ ಮಕ್ಕಳ ಸಮಸ್ಯೆ ಪರಿಹರಿಸುವುದು ಗ್ರಾಪಂ ಕರ್ತವ್ಯ. ಲಭ್ಯ ಅನುದಾನ ಬಳಸಿಕೊಂಡು, ಸಮಸ್ಯೆ ಪರಿಹರಿಸಬೇಕು. ಮತ್ತು ಕ್ರಿಯಾಯೋಜನೆಯಲ್ಲಿ ಶಾಲಾ ಸುಧಾರಣೆ ಹಾಗೂ ಮಕ್ಕಳ ಮೂಲಭೂತ ಸೌಕರ್ಯಗಳ ಬಗ್ಗೆ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಮಕ್ಕಳ ಗ್ರಾಮಸಭೆ ಅವರ ಸಮಗ್ರ ಅಭಿವೃದ್ಧಿಗೆ ಮಹತ್ವದ ವೇದಿಕೆ. ಅವರ ಪ್ರತಿಭೆ, ಅಗತ್ಯಗಳು, ಶಾಲೆಯ ಪ್ರಗತಿ ಮತ್ತು ಗ್ರಾಮದಲ್ಲಿ ಮಕ್ಕಳ ಸಂಬಂಧಿತ ಸೌಕರ್ಯಗಳ ಬಗ್ಗೆ ಚರ್ಚಿಸುವುದು ಈ ಸಭೆಯ ಉದ್ದೇಶ. ಮಕ್ಕಳಲ್ಲಿ ನಾಯಕತ್ವ ಗುಣ, ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುವ ಧೈರ್ಯ ಮತ್ತು ತಮ್ಮ ಹಕ್ಕುಗಳ ಅರಿವು ಮೂಡಿಸುತ್ತವೆ ಎಂದರು.

ಐಎಎಸ್ ಪ್ರೊಬೆಷನರಿ ಅಧಿಕಾರಿ ರಿತೀಕಾ ವರ್ಮಾ, ಮಾದನಭಾವಿ ಗ್ರಾಪಂ ಅಧ್ಯಕ್ಷ ಹಾಲಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಬಿಇಒ ರಾಮಕೃಷ್ಣ ಸದಲಗಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಭಾಗಿ ಹಾಗೂ ಮಾದನಭಾವಿ, ಹೊಸಟ್ಟಿ, ಮುಗಳಿ ಶಾಲೆಯ ಮುಖ್ಯ ಶಿಕ್ಷಕರು ಇದ್ದರು. ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿ ದಿವ್ಯಪ್ರಭು ಹಾಗೂ ಇತರರು ವಿದ್ಯಾರ್ಥಿಗಳೊಂದಿಗೆ ನೆಲಹಾಸಿನ ಮೇಲೆ ಕುಳಿತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಮಧ್ಯಾಹ್ನ ಬಿಸಿಯೂಟ ಸೇವಿಸಿದರು.

ವ್ಯಾಪ್ತಿಯ ಮಾದನಭಾವಿ, ಹೊಸಟ್ಟಿ, ಮುಗಳಿ ಗ್ರಾಮಗಳ ಅನೇಕ ಮೂಲಭೂತ ಸೌಕರ್ಯಗಳ ಬಗ್ಗೆ ಮತ್ತು ಶಾಲಾ ಶಿಕ್ಷಣದ ಬಗ್ಗೆ ವಾಸ್ತವ ಬೆಳಕು ಚೆಲ್ಲಿದ್ದಾರೆ. ಅವರ ಬೇಡಿಕೆಗಳಿಗೆ ಸ್ಪಂದಿಸಿ, ಆಶಯ ಈಡೇರಿಸಿದರೆ ಗ್ರಾಮದ ಸಾಕಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ.

ದಿವ್ಯಪ್ರಭು, ಜಿಲ್ಲಾಧಿಕಾರಿ