ರಾಜಕಾರಣದಲ್ಲಿ ಸತತ 7 ಬಾರಿ ಗೆಲ್ಲುವುದರ ಮೂಲಕ ಭಾರತದಲ್ಲಿಯೇ ಅತ್ಯಂತ ಹಿರಿಯ ಶಾಸಕ ಸೋಲಿಲ್ಲದ ಸರದಾರ ಎನ್ನುವುದನ್ನು ಅವರೊಬ್ಬರೇ ಅಲ್ಲ ಅವರ ಕುಟುಂಬವೇ ನಿರೂಪಿಸಿದೆ ಎನ್ನುವುದಕ್ಕೆ ಅವರ ಮಕ್ಕಳು ಮತ್ತು ಸೊಸೆ ರಾಜ್ಯ ಮತ್ತು ಸಂಸತ್ ಸದಸ್ಯರಾಗಿರುವುದೇ ಪ್ರತ್ಯಕ್ಷ ಸಾಕ್ಷಿಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪರಿಶ್ರಮ, ಛಲವಿದ್ದರೆ ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ಶಾಮನೂರು ಶಿವಶಂಕರಪ್ಪನವರ ಬದುಕೇ ಸಾಕ್ಷಿ ಎಂದು ಶ್ರೀ ಗುರು ಮಲ್ಲೇಶ್ವರ ಪದವೀಧರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಲ್ಮಳ್ಳಿ ನಟರಾಜು ಅಭಿಪ್ರಾಯಪಟ್ಟರು.

ನಗರದ ಅಗ್ರಹಾರದ ಕುದೇರು ಮಠದಲ್ಲಿ ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಶಾಮನೂರು ಶಿವಶಂಕರಪ್ಪನವರ ನುಡಿ ನಮನ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಪ್ರಯತ್ನ ಪಡದೆ ಹಣೆ ಬರಹ ನಂಬಿ ಬದುಕಿದ್ದರೆ ಇತಿಹಾಸ ನಿರ್ಮಾಣ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಅವರ ಜೀವನ ಸಾಧನೆ ಇತರರಿಗೆ ಸ್ಪೂರ್ತಿಯಾಗುತ್ತಿರಲಿಲ್ಲ, ಆಗಂತ ಅವರೇನು ದೇವ ಮಾನವರಲ್ಲ, ಮಂತ್ರ ತಂತ್ರಗಳಿಂದ ಮೇಲಕ್ಕೇರಲಿಲ್ಲ, ಪ್ರತಿ ಕ್ಷಣದ ಸವಾಲು ಎದುರಾದ ಅಡ್ಡಿ ಆತಂಕ ಎಲ್ಲವನ್ನೂ ಧೃತಿಗೆಡದೇ ಎದುರಿಸಿ ಕೈ ಹಾಕಿದ ರಾಜಕಾರಣ ಶಿಕ್ಷಣ ಉದ್ಯಮ, ಸಮಾಜ ಸೇವೆ ಹೀಗೆ ಹತ್ತು ಹಲವು ಸ್ತರಗಳಲ್ಲಿ ಯಶಸ್ಸು ಕಾಣಲು ಸಾಧ್ಯವಾಯಿತು, ಅದರಲ್ಲಿಯೂ ವಾಣಿಜ್ಯ ನಗರಿ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆ ಎಂದಿಗೂ ಯಾರಿಂದಲೂ ಮರೆಯಲು ಸಾಧ್ಯವಿಲ್ಲ ಎಂದರು.

ರಾಜಕಾರಣದಲ್ಲಿ ಸತತ 7 ಬಾರಿ ಗೆಲ್ಲುವುದರ ಮೂಲಕ ಭಾರತದಲ್ಲಿಯೇ ಅತ್ಯಂತ ಹಿರಿಯ ಶಾಸಕ ಸೋಲಿಲ್ಲದ ಸರದಾರ ಎನ್ನುವುದನ್ನು ಅವರೊಬ್ಬರೇ ಅಲ್ಲ ಅವರ ಕುಟುಂಬವೇ ನಿರೂಪಿಸಿದೆ ಎನ್ನುವುದಕ್ಕೆ ಅವರ ಮಕ್ಕಳು ಮತ್ತು ಸೊಸೆ ರಾಜ್ಯ ಮತ್ತು ಸಂಸತ್ ಸದಸ್ಯರಾಗಿರುವುದೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ಮೈಸೂರಿನ ಕೊಡುಗೆ ಹೇಳುವುದಾದರೆ ಬಳ್ಳಾರಿಯಿಂದ ಬಂದು ಹುಲ್ಲಹಳ್ಳಿ ಹತ್ತಿರದ ಸಂಗಮ ಕ್ಷೇತ್ರದಲ್ಲಿ ನೆಲೆಸಿದ ಯೋಗಿ ಸದ್ಗುರುಮಹಾ ದೇವ ತಾತ ಐಕ್ಯ ಸ್ಥಳ ಸಂಗಮ ಕ್ಷೇತ್ರದಲ್ಲಿ ಬರುವ ಭಕ್ತರಿಗಾಗಿ ಅತಿಥಿ ಗೃಹ ನಿರ್ಮಾಣ ಟ್ರಸ್ಟ್ ನ ಕೋರಿಕೆ ಮೇರೆಗೆ ಮತ್ತಿತರ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುವುದರ ಮೂಲಕ ಶ್ರಮಿಸಿದ್ದರು ಎಂದರು.

ಸುತ್ತೂರು ಶ್ರೀಕ್ಷೇತ್ರದಲ್ಲಿ ಬರುವ ಸಾವಿರಾರು ಭಕ್ತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸುಮಾರು ಮೂರು ಕೋಟಿ ರುಪಾಯಿ ವೆಚ್ಚದಲ್ಲಿ ಸುಸಜ್ಜಿತ ತಂಗುದಾಣ ನಿರ್ಮಾಣ ಮಾಡಿ, ಕಳೆದ ವರ್ಷ ತಾವೇ ಖುದ್ದಾಗಿ ಬಂದು ಶ್ರೀಗಳ ಸಾನಿಧ್ಯದಲ್ಲಿ ನಡೆದ ಕಟ್ಟಡ ಲೋಕಾರ್ಪಣೆ ಮಾಡಿದ್ದರು.

ಅಷ್ಟೇ ಅಲ್ಲದೆ ಉದಾರ ಮನಸ್ಸಿನಿಂದ ಎರಡು ಬಾರಿ ವೀರಶೈವ ಲಿಂಗಾಯತ ಸಮುದಾಯ ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ರಾಜಕೀಯ ಮೇಲಾಟಗಳು ನಡೆದಾಗ ಸಮುದಾಯದ ಪರ ನಿಂತ ಅನೇಕ ಘಟನೆಗಳನ್ನು ಈ ರಾಜ್ಯದ ಜನರು ಪ್ರತ್ಯಕ್ಷವಾಗಿ ನೋಡಿದ್ದಾರೆ ಎಂದರು. ಅವರ ಜೀವನ ಸಾಧನೆ ಮುಂದಿನ ಪೀಳಿಗೆಗೆ ಆದರ್ಶ ಸ್ಪೂರ್ತಿಯಾಗಿ ಮಾಡಿ ಕೊಂಡರೆ ಅದೇ ಅವರಿಗೆ ಸಲ್ಲುವ ನಿಜವಾದ ಗೌರವ ಎಂದರು.

ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಬಿ.ಆರ್. ಶಿವಕುಮಾರ್, ಕಾರ್ಯದರ್ಶಿ ಮಹದೇವಪ್ರಸಾದ್, ಖಜಾಂಚಿ ಬಾಗಳಿ ಮಹೇಶ್, ನಿಕಟ ಪೂರ್ವ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ಪ್ರಭುಸ್ವಾಮಿ, ಎಂ.ಕೆ. ಸ್ವಾಮಿ, ರಾಜ್ಯ ಸಂಘದ ಉಪಾಧ್ಯಕ್ಷ ರಾಜಶೇಖರ್, ರವೀಶ್, ಕೆ.ಆರ್.ನಗರದ ಅಧ್ಯಕ್ಷ ಚಂದ್ರ ಶೇಖರ್, ಗಂಗಾಧರ, ಪುಟ್ಟರಾಜು, ಹುಣಸೂರು ಸಂಘದ ಅಧ್ಯಕ್ಷ ಹರೀಶ್, ಎಚ್.ಡಿ.ಕೋಟೆ ಮತ್ತು ಮೈಸೂರು ಜಿಲ್ಲೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ನಂತರ ಮೈಸೂರು ಜಿಲ್ಲಾ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.