ಶಾಮನೂರು, ಸಿದ್ದೇಶ್ವರ ಕುಟುಂಬಕ್ಕೆ ಅಧಿಕಾರ ದಾಹ: ವಿನಯಕುಮಾರ ಆರೋಪ

| Published : May 06 2024, 12:32 AM IST

ಸಾರಾಂಶ

ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ್‌ ಅವರು ಜಿಲ್ಲೆಗೆ ನೀಡಿದ ಕೊಡುಗೆಗಿಂತಲೂ ಈ ಎರಡೂ ಕುಟುಂಬದವರು ಆಸ್ತಿ, ಅಂತಸ್ತು ಮಾಡಿಕೊಂಡಿರುವುದೇ ಹೆಚ್ಚು ಎಂಬ ಮಾತುಗಳು ಕ್ಷೇತ್ರಾದ್ಯಂತ ಪ್ರಚಾರಕ್ಕೆ ಹೋದಲ್ಲೆಲ್ಲಾ ಕೇಳಿಬರುತ್ತಿದೆ. ಈ ಹಿನ್ನೆಲೆ ಜನಸೇವೆಗಾಗಿ ಕ್ಷೇತ್ರದಲ್ಲಿ ಬದಲಾವಣೆಗಾಗಿ ತಮಗೊಂದು ಅ‍ವಕಾಶ ನೀಡುವಂತೆ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ್‌ ಅವರು ಜಿಲ್ಲೆಗೆ ನೀಡಿದ ಕೊಡುಗೆಗಿಂತಲೂ ಈ ಎರಡೂ ಕುಟುಂಬದವರು ಆಸ್ತಿ, ಅಂತಸ್ತು ಮಾಡಿಕೊಂಡಿರುವುದೇ ಹೆಚ್ಚು ಎಂಬ ಮಾತುಗಳು ಕ್ಷೇತ್ರಾದ್ಯಂತ ಪ್ರಚಾರಕ್ಕೆ ಹೋದಲ್ಲೆಲ್ಲಾ ಕೇಳಿಬರುತ್ತಿದೆ. ಈ ಹಿನ್ನೆಲೆ ಜನಸೇವೆಗಾಗಿ ಕ್ಷೇತ್ರದಲ್ಲಿ ಬದಲಾವಣೆಗಾಗಿ ತಮಗೊಂದು ಅ‍ವಕಾಶ ನೀಡುವಂತೆ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಮನವಿ ಮಾಡಿದರು.

ನಗರದ ಭಗತ್ ಸಿಂಗ್ ನಗರದಿಂದ ಹಲವಾರು ಬೀದಿ ಬೀದಿಗಳಲ್ಲಿ ಮತಯಾಚಿಸಿ ಮಾತನಾಡಿದ ಅವರು, ಎರಡೂ ಕುಟುಂಬಗಳ ರಾಜಕಾರಣ ನೋಡಿ ಜನರು ಸಾಕಾಗಿದ್ದಾರೆ. ಮಾವ ಶಾಸಕ, ಪತಿ ಸಚಿವ ಸ್ಥಾನ ಇದ್ದರೂ ಅದೇ ಮನೆಯವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದರು.

ಸಿದ್ದೇಶ್ವರರ ತಂದೆ ಸಂಸದರಾಗಿದ್ದರು. ನಂತರ ಸಿದ್ದೇಶ್ವರ ಸಂಸದರಾಗಿದ್ದಾರೆ. ಈಗ ಅದೇ ಸಿದ್ದೇಶ್ವರರ ಪತ್ನಿಗೆ ಟಿಕೆಟನ್ನು ಬಿಜೆಪಿ ನೀಡಿದೆ. ಎರಡೂ ಕುಟುಂಬಕ್ಕಷ್ಟೇ ಅಧಿಕಾರ ಸೀಮಿತವಾಗಿದೆ. ಚುನಾವಣೆ ಭರವಸೆಗಳ ಮಹಾಪೂರವನ್ನೇ ಹರಿಸುವ ಎರಡೂ ಕುಟುಂಬದವರು ನಂತರ ಯಾರ ಕೈಗೂ ಸಿಗುವುದಿಲ್ಲ. ಜನರು ಇಂತಹವರ ಮನೆ ಮುಂದೆ ಹೋಗಿ, ಕಾಯುವ ಸ್ಥಿತಿ ಇದೆ. ಈ ಬಗ್ಗೆ ಜನರಿಗೆ ಬೇಸರ ಮತ್ತು ಆಕ್ರೋಶ ಒಳಗೊಳಗೆ ಇದೆ. ಮೇ 7ರಂದು ತಮಗೆ ಮತ ನೀಡುವ ಮೂಲಕ ಬದಲಾವಣೆಗೆ ಮತದಾರರು ಮುನ್ನುಡಿ ಬರೆಯಲಿದ್ದಾರೆ ಎಂದು ಅವರು ತಿಳಿಸಿದರು.

ಸ್ವಾಭಿಮಾನಿ ಯುವಕ ಸ್ಪರ್ಧೆ ಮಾಡಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಬೇಕು. ದಾವಣಗೆರೆಯಲ್ಲಿ ದೊಡ್ಡ ಕೈಗಾರಿಕೆ, ಶಿಕ್ಷಣ ಸಂಸ್ಥೆ, ಉದ್ಯೋಗ ಸೃಷ್ಟಿಸುವಂಥ ಅನೇಕ ಯೋಜನೆ ತರುವೆ. ಬದಲಾವಣೆಯ ಗಾಳಿ ಜಿಲ್ಲೆಯಲ್ಲಿ ಬೀಸುತ್ತಿದೆ. ಗ್ರಾಮ ಗ್ರಾಮಗಳಲ್ಲೂ ಸಿಲಿಂಡರ್ ಸದ್ದು ಮಾಡುತ್ತಿದೆ. ನಗರ ಪ್ರದೇಶದ ಜನರು ಸಹ ಹೋದ ಕಡೆಗಳಲ್ಲಿ ನಿಮ್ಮ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲ ಇದೆ. ನನ್ನದು ಅಭಿವೃದ್ಧಿಗಾಗಿ ಕಟ್ಟಿಕೊಂಡಿರುವ ಕನಸು. ಈ ಕನಸು ನನಸಾಗಬೇಕಾದರೆ ಲೋಕಸಭೆಗೆ ಕಳುಹಿಸಿಕೊಡಿ. ನನ್ನ ಕ್ರಮ ಸಂಖ್ಯೆ 28, ಚಿಹ್ನೆ ಗ್ಯಾಸ್ ಸಿಲಿಂಡರ್. ಪ್ರತಿ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಬಳಕೆ ಮಾಡಲಾಗುತ್ತಿದೆ. ಮಹಿಳೆಯರು, ಯುವತಿಯರು ತೋರುತ್ತಿರುವ ಬೆಂಬಲ ಆತ್ಮವಿಶ್ವಾಸ ಮತ್ತಷ್ಟು ಇಮ್ಮಡಿಗೊಳಿಸುವ ಜೊತೆಗೆ ನನಗೆ ಮತ ನೀಡುತ್ತಾರೆಂಬ ಭರವಸೆ ಇದೆ. ಪ್ರಜಾಪ್ರಭುತ್ವ, ಸಂವಿಧಾನ ಗೆಲ್ಲಲು ನಿಂತಿರುವ ಚುನಾವಣೆ ಎಂದು ವಿನಯಕುಮಾರ ತಿಳಿಸಿದರು.

ಮಹಿಳೆಯರು, ಯುವಕರು, ಯುವತಿಯರು ಸೇರಿದಂತೆ ನೂರಾರು ಜನರ ಜೊತೆ ಬೃಹತ್ ಮೆರವಣಿಗೆಯುದ್ದಕ್ಕೂ ಕಾಲ್ನಡಿಗೆಯಲ್ಲಿ ತೆರಳಿದ ವಿನಯಕುಮಾರಗೆ ಜನರು ಸಹ ಬೆಂಬಲ ಸೂಚಿಸಿದರು.

- - - -5ಕೆಡಿವಿಜಿ5, 6, 7:

ದಾವಣಗೆರೆ ಭಗತ್ ಸಿಂಗ್ ನಗರದಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿದರು.