ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಂಬೇಡ್ಕರ್ ಶಿಕ್ಷಣಕ್ಕೆ ಒತ್ತು ಕೊಡಬೇಕೆಂದು ಹೇಳಿದ್ದರು. ದಲಿತರು ಶಿಕ್ಷಣ ಪಡೆಯಲಿಲ್ಲ ಎಂದರೆ ಅಂಬೇಡ್ಕರ್‌ಗೆ ಅವಮಾನ ಮಾಡಿದಂತೆ ಎಂದು ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.ನಗರದ ಪೇಸ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರ ಭಕ್ತರ ಬಳಗದ ವತಿಯಿಂದ ಕೆ.ಎಸ್.ಈಶ್ವರಪ್ಪ ಬೆಂಬಲಿಸಿ ದಲಿತರ ಸಮಾವೇಶದಲ್ಲಿ ಅವರು ಮಾತನಾಡಿ, ದಲಿತ ಸಮಾಜದ ಮಕ್ಕಳು ವಿದ್ಯಾವಂತರಾಗಬೇಕು. ಬಡತನ ನಿವಾರಣೆಗೆ ವಿದ್ಯಾಭ್ಯಾಸ ಬಹಳ ಮುಖ್ಯ. ನಮ್ಮ ತಾಯಿ ಅಡಕೆ ಸುಲಿದು ಕೂಲಿ ಕೆಲಸ ಮಾಡಿ ಕಷ್ಟಪಟ್ಟು ನನಗೆ ವಿದ್ಯಾಭ್ಯಾಸ ಮಾಡಿಸಿದ್ದಾರೆ. ಎಸ್ಸೆಸ್ಸೆಲ್ಸಿ ನಂತರ ನಾನು ಕೆಲಸಕ್ಕೆ ಹೋಗುವುದಾಗಿ ಹೇಳಿದೆ ಅವರು ಕಪಾಳಕ್ಕೆ ಹೊಡೆದು ವಿದ್ಯಾಭ್ಯಾಸ ಮುಂದುವರೆಸಲು ಹೇಳಿದ್ದರು. ನಂತರ ಡಿಗ್ರಿ ಮಾಡಿ ಇವತ್ತು ನಿಮ್ಮ ಮುಂದೆ ಶಾಸಕ, ಮಂತ್ರಿ, ಉಪ ಮುಖ್ಯಮಂತ್ರಿಯಾಗಿ ನಿಂತಿದ್ದೇನೆ. ಅದಕ್ಕೆ ನಿಮ್ಮ ಹಾಗೆ ಇದ್ದ ನನ್ನ ತಾಯಿ ಕಾರಣ ಎಂದರು.
ನನ್ನ ತಾಯಿ ಎರಡು ಹೊತ್ತು ಊಟ ಮಾಡಿದ್ದು ನೋಡಿಲ್ಲ. ಹೊಸ ಸೀರೆ ಉಟ್ಟಿದ್ದು ನೋಡಿಲ್ಲ. ನೀವು ಎಷ್ಟಾದರೂ ಕಷ್ಟ ಪಟ್ಟು ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ. ನೀವು ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಿಸುವುದಾಗಿ ಪ್ರತಿಜ್ಞೆ ಮಾಡಿ. ನಿಮ್ಮಲ್ಲಿ ವಿದ್ಯಾವಂತರು ಇಲ್ಲವೆಂದರೆ ಯಾವ ಸರ್ಕಾರ ನಿಮಗೆ ಏನು ಮಾಡಿದರೂ ಪ್ರಯೋಜನವಾಗಲ್ಲ. ಸರ್ಕಾರ ಕೊಡುವ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ನಿಮ್ಮನ್ನು ತಲುಪಲು ನೀವೆಲ್ಲಾ ವಿದ್ಯಾವಂತರಾಗಬೇಕು ಎಂದು ಕರೆ ನೀಡಿದರು.ಇಲ್ಲಿಂದ ತೆರಳುವಾಗ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ತೀರ್ಮಾನ ತೆಗೆದುಕೊಂಡು ಹೋಗಿ. ವಿದ್ಯಾಭ್ಯಾಸಕ್ಕೆ ತೊಂದರೆಯಾದರೆ ನನ್ನನ್ನು ಸಂಪರ್ಕಿಸಿ. ನಿಮಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡಲು ನಾನು ಸಿದ್ಧ. ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತೇವೆ ಎಂದು ಅಂಬೇಡ್ಕರ್ ಹಾಗೂ ಮೋದಿ ಮೇಲೆ ಪ್ರಮಾಣ ಮಾಡಿ ಎಂದರು.
ದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಹಣ ಪಡೆದು ವೋಟು ಹಾಕಿದರೆ ಚುನಾವಣೆ ನಂತರ ನೀವು ಏನು ಕೆಲಸ ಮಾಡಿಸಿಕೊಳ್ಳಲು ಆಗಲ್ಲ. ಆದ್ದರಿಂದ ಹಣಕ್ಕಾಗಿ ಮತ ಹಾಕಬೇಡಿ. ಈ ಚುನಾವಣೆಯಲ್ಲಿ ನನ್ನನ್ನು ಸೋಲಿಸಬೇಕು ಎಂದು ವಿರೋಧಿಗಳು ಇನ್ನೊಬ್ಬ ಈಶ್ವರಪ್ಪ ತಂದು ನಿಲ್ಲಿಸಿದ್ದಾರೆ. ಹೀಗಾಗಿ ಯಾರು ಕೂಡ ಗೊಂದಲ ಮಾಡಿಕೊಳ್ಳದೇ ಎಚ್ಚರಿಕೆಯಿಂದ ಕೆ.ಎಸ್.ಈಶ್ವರಪ್ಪ ಕ್ರಮ ಸಂಖ್ಯೆ 8 ಕಬ್ಬಿನ ಜೊತೆ ಇರುವ ರೈತ ಚಿಹ್ನೆಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್, ಮಲೆನಾಡು ರೈತ ಸಮಿತಿ ಅಧ್ಯಕ್ಷ ತಿ.ನ.ಶ್ರೀನಿವಾಸ್, ದಲಿತ ಸಮಾಜದ ಮುಖಂಡಾರದ ಎಚ್.ಶಿವಾಜಿ, ಮಾಜಿ ಮೇಯರ್ ಲತಾ ಗಣೇಶ್, ಎಂ.ರಾಜು, ಹನುಮ ನಾಯ್ಕ್ , ಯೋಗೀಶ್, ಕೆಂಪಮ್ಮ, ಮೀನಾಕ್ಷಮ್ಮ ಮತ್ತಿತರರು ಇದ್ದರು. ರಾಹುಲ್ ಆಗಮನದಿಂದಲೇ ಗೀತಾ ಸೋಲು ಖಚಿತ: ಈಶ್ವರಪ್ಪ ವ್ಯಂಗ್ಯ
ಶಿವಮೊಗ್ಗ: ನಗರಕ್ಕೆ ರಾಹುಲ್ ಗಾಂಧಿ ಬಂದಿದ್ದು ಬಹಳ ಸಂತೋಷವಾಗಿದೆ. ರಾಹುಲ್ ಗಾಂಧಿ ಹೋದ ಕಡೆಯೆಲ್ಲಾ ಕಾಂಗ್ರೆಸ್ ಸೋತಿದೆ. ಇಲ್ಲೂ ಗೀತಾ ಸೋಲು ಖಚಿತವಾಗಿದೆ ಎಂದು ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಗುಜರಾತ್, ಉತ್ತರ ಪ್ರದೇಶದಲ್ಲಿ ಹೊದಲೆಲ್ಲ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದಾರೆ. ಶಿವಮೊಗ್ಗಕ್ಕೆ ಅವರು ಬರಬೇಕು ಎಂದು ನನ್ನ ಬೇಡಿಕೆ ಇತ್ತು. ರಾಹುಲ್ ಗಾಂಧಿ ಬಂದಿದ್ದು ಗೀತಾ ಸೋಲಲು ಕಾರಣವಾಯ್ತು. ನಾನು ಅತಿ ಹೆಚ್ಚು ಅಂತರದಲ್ಲಿ ಗೆಲ್ಲಲು ಅವಕಾಶವಾಗಿದೆ ಎಂದರು.ಬಿಜೆಪಿ ಸಂವಿಧಾನ ಬದಲಿಸುತ್ತದೆ ಎನ್ನುವುದು ಕಾಂಗ್ರೆಸ್‌ನವರು ಅಸ್ತ್ರವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಅಂಬೇಡ್ಕರ್ ಅವರ ಸಂವಿಧಾನ ಬದಲಾಯಿಸುವ ಕೆಲಸ ಎಂದೂ ಮಾಡಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಬ್ಯಾಕ್‌ಲಾಕ್ ಹುದ್ದೆ ಭರ್ತಿ ಮಾಡಲು ನಿರ್ಧರಿಸಿ ದ್ದರು. ಆಗ ಕೆಲವರು ಬ್ಯಾಕ್‌ಲಾಕ್ ಹುದ್ದೆ ಭರ್ತಿ ಮಾಡಬಾರದು ಅಂತಾ ಸುಪ್ರೀಂಕೋರ್ಟ್‌ಗೆ ಹೋದರು. ಸಂವಿಧಾನ ತಿದ್ದುಪಡಿ ಮಾಡಿ ಬ್ಯಾಕ್‌ಲಾಕ್ ಹುದ್ದೆ ಭರ್ತಿಗೆ ಅವಕಾಶ ಮಾಡಿಕೊಟ್ಟ ಮೊದಲ ಪ್ರಧಾನಿ ವಾಜಪೇಯಿ ಅವರು. ಅಂದು ಸಂವಿದಾನ ತಿದ್ದುಪಡಿ ಮಾಡಿದ್ದು ಎಸ್ಸಿ, ಎಸ್ಟಿಗೆ ಅನುಕೂಲವಾಗಲಿ ಎಂಬ ಆಶಯದಿಂದ. ಈಗ ಯಾವುದೇ ಕಾರಣಕ್ಕೂ ಅಂಬೇಡ್ಕರ್ ಅವರ ಅಪೇಕ್ಷೆಗೆ ವಿರುದ್ಧವಾಗಿ ಸಂವಿಧಾನದ ಯಾವುದೇ ತಿದ್ದುಪಡಿ ಮಾಡಲ್ಲ ಎಂದರು.
ನಾನು ಪ್ರಚಾರವ ಮಾಡುವ ವೇಳೆ ನಿರೀಕ್ಷೆಗೆ ಮೀರಿ ಜನ ಸೇರುತ್ತಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲೂ ಈಡಿಗ ಸಮಾಜದ ಕಾರ್ಯಕರ್ತರು, ಲಿಂಗಾಯಿತರು ಹೆಚ್ಚಿನ ಸಂಖ್ಯೆಯಲ್ಲಿ ನನ್ನ ಜೊತೆ ಇದ್ದಾರೆ. ಎಲ್ಲ ಜಾತಿ, ಎಲ್ಲ ಧರ್ಮದವರು ನನಗೆ ಬೆಂಬಲ ಕೊಡುತ್ತಿದ್ದಾರೆ. ಎರಡು ಲಕ್ಷ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂದರು.ಮೇ 4ರಂದು ಸಂಜೆ 4ರಿಂದ ರಾಮಶ್ರೇಷ್ಠಿ ಪಾರ್ಕ್‌ನಿಂದ ಕಾರ್ಯಕರ್ತರೊಂದಿಗೆ ವಿಜಯದೆಡೆಗೆ ನಡಿಗೆ ಆರಂಭಿಸಿ ಗಾಂಧಿ ಬಜಾರ್, ಅಮೀರ್ ಅಹಮ್ಮದ್ ವೃತ್ತ ಮಾರ್ಗವಾಗಿ ಗೋಪಿವೃತ್ತದ ವರೆಗೆ ಈ ನಡೆಗೆ ನಡೆಯಲಿದೆ ಎಂದು ತಿಳಿಸಿದರು.ಮಧು - ಬಿಎಸ್‌ವೈ ಹೊಂದಾಣಿಕೆ!
ಮಧು ಬಂಗಾರಪ್ಪ ಅವರಿಗೆ ರಾಜಕೀಯನೇ ಗೊತ್ತಿಲ್ಲ. ಬಂಗಾರಪ್ಪ ಅವರ ಮಗ ಅನ್ನುವುದು ಬಿಟ್ಟರೆ ಬೇರೆ ಏನಿದೆ. ಗೀತಾ ಬೆಂಗಳೂರಿನಲ್ಲಿ ಅರಮಾಗಿ ಇದ್ದರು. ಅವರ ಪತಿ ಸಿನಿಮಾ ಮಾಡಿಕೊಂಡು ಇದ್ದರು. ಅವರನ್ನು ಈ ಪಕ್ಷಕ್ಕೆ ತಂದು ನಿಲ್ಲಿಸುವ ಅಗತ್ಯವೇನಿತ್ತು? ಶಿವಮೊಗ್ಗ ಜಿಲ್ಲೆಯಲ್ಲಿ ಬೇರೆ ಯಾರೂ ಇರಲಿಲ್ವಾ? ಗೀತಾ ಅವರು ಸಹೋದರಿ ಸಮಾನ. ಅವರ ಬಗ್ಗೆ ನಾನು ಟೀಕೆ ಮಾಡಲ್ಲ. ಬಿಜೆಪಿಯಲ್ಲಿ ನನಗೆ ಮಾತ್ರವಲ್ಲ. ಹಿಂದುತ್ವ ಪರ ನಾಯಕರಿಗೆ ಅನ್ಯಾಯವಾಗಿದೆ. ಹಿಂದುತ್ವ ಉಳಿಸಬೇಕು ಎಂಬ ಹಠದಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಇನ್ನು, ಯಡಿಯೂರಪ್ಪ ಅವರ ಜೊತೆ ನಾವು ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಮಧು ಬಂಗಾರಪ್ಪ ಹೇಳಲಿ ನೋಡೋಣ ಎಂದು ಈಶ್ವರಪ್ಪ ಸವಾಲೆಸೆದರು.ಗೆಲುವಿನ ಬಳಿಕ ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಬದ್ಧ: ಕೆ.ಎಸ್.ಈಶ್ವರಪ್ಪಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ತಾಲೂಕಿನ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಗುರುವಾರ ಸಂಜೆ ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ನೂರಾರು ಜನರು ಜಮಾಯಿಸಿದ್ದರು. ಈಶ್ವರಪ್ಪ ಆಯನೂರಿಗೆ ಆಗಮಿ ಸುತ್ತಿದ್ದಂತೆ ಅವರ ಪರ ಜೈಕಾರಗಳು ಮುಗಿಲು ಮುಟ್ಟಿದವು. ಶಿವಮೊಗ್ಗ ತಾಲೂಕಿನ ವಿವಿಧೆಡೆಯಿಂದಲೂ ಸಾವಿರಾರು ಜನರು ಆಗಮಿಸಿದ್ದರು. ಜನರಿಂದ ಆಯನೂರು ರಸ್ತೆ ತುಂಬಿ ಹೋಗಿತ್ತು. ಬಳಿಕ ಹಾರನಹಳ್ಳಿಯಲ್ಲಿ ಕೆ.ಎಸ್.ಈಶ್ವರಪ್ಪ ರೋಡ್ ಶೋ ನಡೆಸಿದರು.ಆಯನೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ನಾನು ನರೇಂದ್ರ ಮೋದಿ ಅವರ ಭಕ್ತ. ಮೋದಿಯನ್ನು ದೇವರಂತೆ ನೋಡುತ್ತೇನೆ. ನಾನು ಗೆದ್ದ ಬಳಿಕ ನಿಮ್ಮ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಗೆದ್ದ ಬಳಿಕ ನಿಮ್ಮ ಸಮಸ್ಯೆಗಳಿಗೆ ಪರಿಹಾರಕ್ಕೆ ಬದ್ಧ ಎಂದು ಭರವಸೆ ನೀಡಿದರು.ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂಬ ಉದ್ದೇಶ ನನಗೆ ಇರಲಿಲ್ಲ. ನಾನು ಐದು ಬಾರಿ ಶಿವಮೊಗ್ಗದ ಶಾಸಕನಾಗಿದ್ದೇನೆ. ಅನೇಕ ಇಲಾಖೆಯ ಸಚಿವನಾಗಿದ್ದೇನೆ. ಉಪ ಮುಖ್ಯಮಂತ್ರಿಯಾಗಿದ್ದೇನೆ. ಇಷ್ಟೆಲ್ಲ ಆದರೂ ನಾನು ಸ್ಪರ್ಧೆ ಮಾಡುತ್ತಿರುವ ಉದ್ದೇಶ ಜಿಲ್ಲೆಯ ಅನೇಕ ಸಮಸ್ಯೆಗಳು ಹಾಗೆ ಉಳಿದಿವೆ. ಇವುಗಳನ್ನು ಪರಿಹರಿಸಲು ರಾಘವೇಂದ್ರ ಅವರ ಕೈಯಲ್ಲಿ ಆಗಲ್ಲ. ಕಾಂಗ್ರೆಸ್‌ನ ಮಂತ್ರಿಯಾಗಿರುವ ಮಧು ಬಂಗಾರಪ್ಪ ಅವರು ಪತ್ರಿಕಾಗೋಷ್ಠಿ, ಸಭೆ, ಸನ್ಮಾನಗಳಿಗೆ ಅಷ್ಟೇ ಸಿಮಿತರಾಗಿದ್ದಾರೆ. ಜನರ ಸಮಸ್ಯೆಗಳನ್ನು ಕೇಳುತ್ತಿಲ್ಲ. ಇದೆಲ್ಲದಕ್ಕೂ ಉತ್ತರ ಕೊಡುವ ಸಂದರ್ಭ ಬಂದಿದೆ. ಇದಕ್ಕಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿದರು.ಈ ಸಂದರ್ಭ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನಾ.ಶ್ರೀನಿವಾಸ ಸೇರಿದಂತೆ ಹಲವರು ಉಪಸ್ಥಿತರಿದ್ದರು.