ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಕೇಂದ್ರ ಸಚಿವರು, ವೀರಶೈವ ಲಿಂಗಾಯಿತ ಸಮುದಾಯದ ಏಕೈಕ ಮಂತ್ರಿಗಳು ಆಗಿರುವ ವಿ.ಸೋಮಣ್ಣ ಅವರನ್ನು ಭಾನುವಾರ ಬೆಂಗಳೂರಿನಲ್ಲಿ ನಡೆಯುತ್ತಿರುವ 852ನೇ ಶ್ರೀಗುರು ಸಿದ್ಧರಾಮೇಶ್ವರರ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸದೆ ಅವಮಾನ ಮಾಡಿದ್ದು ಖಂಡನೀಯ ಎಂದು ಸಮುದಾಯದ ಮುಖಂಡರಾದ ಬಿ.ಬಿ.ಮಹದೇವಯ್ಯ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೇಂದ್ರ ಸರಕಾರದಲ್ಲಿರುವ ವೀರಶೈವ, ಲಿಂಗಾಯಿತ ಸಮುದಾಯದ ಏಕೈಕ ಮಂತ್ರಿ ವಿ.ಸೋಮಣ್ಣ, ಜನಾನುರಾಗಿಗಳು, ಜಾತ್ಯಾತೀತ ವ್ಯಕ್ತಿಗಳಾಗಿರುವ ಅವರನ್ನು ನೊಳಂಬ ವೀರಶೈವ, ಲಿಂಗಾಯಿತ ಸಂಘದವರು ನಡೆಸುತ್ತಿರುವ ಶ್ರೀಗುರು ಸಿದ್ಧರಾಮೇಶ್ವರರ ಜಯಂತಿಗೆ ಆಹ್ವಾನಿಸದೇ ಇಡೀ ಕರ್ನಾಟಕ ರಾಜ್ಯದಲ್ಲಿರುವ ವಿ.ಸೋಮಣ್ಣ ಅಭಿಮಾನಿಗಳಿಗೂ ಅಪಮಾನ ಮಾಡಲಾಗಿದೆ. ಇವರ ವರ್ತನೆಯ ವಿರುದ್ಧ ಮುಂದಿನ ದಿನಗಳಲ್ಲಿ ನೊಳಂಬ ಯುವ ವೇದಿಕೆ ತಕ್ಕ ಉತ್ತರ ನೀಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದ ಸಚಿವರಾಗಿ ರಾಜ್ಯಕ್ಕೆ, ಅದರಲ್ಲಿಯೂ ತುಮಕೂರು ಜಿಲ್ಲೆಗೆ ಸಾವಿರಾರು ಕೋಟಿ ರು.ಗಳ ಯೋಜನೆ ತಂದು, ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುತಿದ್ದು, ಇದನ್ನು ಸಹಿಸದ ಕೆಲವು ಜನರು, ಪಿತೂರಿ ನಡೆಸಿ, ಸರ್ವ ಧರ್ಮಕ್ಕೂ ಬೇಕಾದ ಸಿದ್ಧರಾಮೇಶ್ವರರ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದು ಸೋಮಣ್ಣ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಕೆಲವರ ಮಾತಿಗೆ ಬೆಲೆ ನೀಡಿ, ವಿ.ಸೋಮಣ್ಣ ಅವರನ್ನು ಕಡೆಗಣಿಸಲಾಗಿದೆ ಎಂದರು.ನೊಳಂಬ ಸಮುದಾಯಕ್ಕೆ ನಮ್ಮ ನಾಯಕರು ಹಲವಾರು ಕೊಡುಗೆ ನೀಡಿದ್ದಾರೆ. ಮುಚ್ಚುವ ಹಂತದಲ್ಲಿದ್ದ ಬೆಂಗಳೂರಿನ ಸಿದ್ದರಾಮಣ್ಣ ಹಾಸ್ಟೆಲ್‌ಗೆ ಸುಮಾರು 40 ಲಕ್ಷ ರು.ಗಳಿಗೂ ಅಧಿಕ ಅನುದಾನ ನೀಡಿ, ಹಾಸ್ಟೆಲ್ ನಡೆಯುವಂತೆ ಮಾಡಿದ್ದಾರೆ. ಅಲ್ಲದೆ ಅರಸೀಕೆರೆಯಲ್ಲಿ ಪರರ ಪಾಲಾಗಲಿದ್ದ ಭೂಮಿಯನ್ನು ನೊಳಂಬ ಸಮುದಾಯಕ್ಕೆ ಉಳಿಸಿಕೊಟ್ಟಿದ್ದಾರೆ. ಸೊನ್ನಲಗಿಯಲ್ಲಿ ಸಿದ್ಧರಾಮೇಶ್ವರರ ಸಮಾಧಿಯನ್ನು ಲಕ್ಷಾಂತರ ರು. ಖರ್ಚು ಮಾಡಿ ಅಭಿವೃದ್ಧಿಪಡಿಸಿ, ಪ್ರವಾಸಿ ಕೇಂದ್ರವನ್ನಾಗಿಸಿದ್ದಾರೆ. ಇಂತಹ ಸೋಮಣ್ಣನವರನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 852ನೇ ಗುರು ಶ್ರೀಸಿದ್ಧರಾಮೇಶ್ವರರ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಹಾಗಾಗಿ ಸಿದ್ಧರಾಮೇಶ್ವರರ ಜಯಂತಿ ಸಮಿತಿ ಹಾಗೂ ಸಿದ್ದರಾಮಣ್ಣ ಹಾಸ್ಟೆಲ್ ಕಮಿಟಿಯನ್ನು ಕೂಡಲೇ ವಿಸರ್ಜಿಸಬೇಕೆಂದು ಆಗ್ರಹಿಸುವುದಾಗಿ ಬಿ.ಬಿ.ಮಹದೇವಯ್ಯ ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ಸಿದ್ದರಾಮ ಸೇನೆಯ ಜಿಲ್ಲಾಧ್ಯಕ್ಷ ಹೇಮಂತ ಕುಮಾರ್, ತಿಪಟೂರು ನಗರಸಭೆ ಮಾಜಿ ಅಧ್ಯಕ್ಷ ಲಿಂಗರಾಜು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಕನ್ನಡ ಪ್ರಕಾಶ್, ಯತೀಶ್ ಮತ್ತಿತರರು ಉಪಸ್ಥಿತರಿದ್ದರು,