ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಪಟ್ಟಣದ ಪ್ರಸಿದ್ಧ ಶ್ರೀ ಶನಿಮಹಾತ್ಮ ಹಾಗೂ ಅಮ್ಮ ಜೇಷ್ಟಾದೇವಿಯ ಬ್ರಹ್ಮರಥೋತ್ಸವಕ್ಕೆ ಶನಿವಾರ ಎಸ್‌ಎಸ್‌ಕೆ ಸಂಘದ ಅಧ್ಯಕ್ಷ ಸಿ.ಎನ್. ಆನಂದ್ ರಾವ್ ಚಾಲನೆ ನೀಡಿದರು.ಸಹಸ್ರಾರು ಸಂಖ್ಯೆ ಭಕ್ತರು ಭಾಗಿ: ಶ್ರೀ ಶನೇಶ್ವರಸ್ವಾಮಿಯ ರಥ ಹಾಗೂ ದೇವಸ್ಥಾನವನ್ನು ತಳಿರು, ತೋರಣಗಳ ಹಾಗೂ ಬಗೆಬಗೆಯ ಪುಷ್ಪಗಳಿಂದ ಅಲಂಕರಗೊಳಿಸಲಾಗಿತ್ತು. ಬ್ರಹ್ಮರಥೋತ್ಸವದ ಪ್ರಯುಕ್ತ ಇಂದು ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿದ್ದು, ರಥದಲ್ಲಿರುವ ಶನಿಮಹಾತ್ಮಸ್ವಾಮಿಯ ದರ್ಶನ ಪಡೆದರು.
ಗರುಡ ಪಕ್ಷಿ ದೇಗುಲ ಪ್ರದಕ್ಷಣೆ: ಈ ಬಾರಿಯ ವಿಶೇಷವೆಂದರೆ, ರಥೋತ್ಸವದ ಸಮಯದಲ್ಲಿ ರಥಕ್ಕೆ ಮತ್ತು ದೇವಸ್ಥಾನಕ್ಕೆ ಆಕಾಶದೆತ್ತರದಿಂದ ಇಳಿದು ಬಂದ ಗರುಡ ಪಕ್ಷಿಯೊಂದು ಶ್ರೀ ಶನೇಶ್ವರಸ್ವಾಮಿ ದೇಗುಲದ ಪ್ರದಕ್ಷಿಣೆ ಹಾಕಿ ಭಕ್ತರ ಅಚ್ಚರಿಗೆ ಕಾರಣವಾಗಿದೆ. ವಿಷ್ಣುವಿನ ಅವತಾರವಾಗಿರುವ ಗರುಡ ಪಕ್ಷಿಯು ಇಂತಹ ಬ್ರಹ್ಮರಥೋತ್ಸವ ನಡೆಯುವ ಸಂದರ್ಭದಲ್ಲಿ ಆಗಮಿಸಿ ದೇಗುಲ ಹಾಗೂ ರಥೋತ್ಸವದ ಬಳಿ ಪ್ರದಕ್ಷಣೆ ಹಾಕುವುದು ವಿಷ್ಣುದೇವ ಆಗಮಿಸಿದಷ್ಟೇ ಪುಣ್ಯ ಎಂದು ಇಲ್ಲಿಗೆ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಕೊಂಡಾಡಿ ಇದೊಂದು ಅದ್ಬುತ ಮಹಿಮೆ ಎಂದು ಶ್ಲಾಘಿಸಿದರು.ಜೆಡಿಎಸ್ ಹಿರಿಯ ಮುಖಂಡನಿಗೆ ಗಾಯ: ಬ್ರಹ್ಮರಥೋತ್ಸವ ವೀಕ್ಷಣೆ ಹಿನ್ನಲೆಯಲ್ಲಿ ದೇಗುಲಕ್ಕೆ ಆಗಮಿಸಿದ್ದ ತಾಲೂಕು ಜೆಡಿಎಸ್ ಹಿರಿಯ ಮುಖಂಡ ಎನ್.ಕೆ. ರಾಮಕೃಷ್ಣರೆಡ್ಡಿ ಅವರ ಕಾಲಿನ ಮೇಲೆ ರಥದ ಚಕ್ರ ಹರಿದಿದ್ದು ಕಾಲಿಗೆ ಗಂಭೀರ ಗಾಯವಾಗಿದೆ. ನೋವಿನಿಂದ ಬಳಲುತ್ತಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ ತುರ್ತು ವಾಹನವೊಂದರಲ್ಲಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಶೀಘ್ರ ಚೇತರಿಕೆ ಗುಣಮುಖರಾಗಿ ಹೊರಬರಲಿ, ಅವರ ಆರೋಗ್ಯ ಚನ್ನಾಗಿರಲಿ ಎಂದು ಆನೇಕ ಮಂದಿ ಭಕ್ತರು ಹಾಗೂ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಮತ್ತು ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ಎ. ಈರಣ್ಣ ಮತ್ತು ಇತರೆ ಜೆಡಿಎಸ್ ಕಾರ್ಯಕರ್ತರು ಶ್ರೀ ಶನೇಶ್ವರಸ್ವಾಮಿ ಹಾಗೂ ಅಮ್ಮ ಜೇಷ್ಟಾದೇವಿಯಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದ್ದಾರೆ.
ರಥೋತ್ಸವದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದ ಹಾಗೆ ಪಾವಗಡ ಪೊಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅದೇ ರೀತಿ ದೇವಸ್ಥಾನದ ವತಿಯಿಂದ ಭಕ್ತರಿಗೆ ಪ್ರಸಾದ ವಿನಿಯೋಗ ಸೇರಿದಂತೆ ಇತರೆ ಮೂಲಭೂತ ಸೌಲಭ್ಯ ಕಲ್ಪಿಸಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸ್ವಾಮಿಯ ಬ್ರಹ್ಮರಥೋತ್ಸವನ್ನು ಕಣ್ತುಂಬಿಕೊಂಡಿದ್ದಾರೆ.