ಶನಿವಾರಸಂತೆ: ಕೆಂಪೇಗೌಡ ಜಯಂತಿ ಆಚರಣೆ

| Published : Jul 04 2025, 11:47 PM IST

ಸಾರಾಂಶ

ಶನಿವಾರಸಂತೆ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ಸಾರ್ವಜನಿಕ ಪ್ರಮುಖರು, ಅಭಿಮಾನಿ ಬಳಗದವರು ಮತ್ತು ದಾನಿಗಳು ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸುವ ಮೂಲಕ ಕೆಂಪೇಗೌಡರ ಜಯಂತಿಯನ್ನು ಆಚರಿಸಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು ಶನಿವಾರಸಂತೆ ಸುತ್ತಮುತ್ತಲಿನ ಕೆಂಪೇಗೌಡ ಅಭಿಮಾನಿ ಬಳಗ ಮತ್ತು ಸಾರ್ವಜನಿಕರು ಮತ್ತು ದಾನಿಗಳ ಸಹಭಾಗಿತ್ವದಲ್ಲಿ ಸರಳವಾಗಿ ಆಚರಿಸಲಾಯಿತು.

ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ಸಾರ್ವಜನಿಕ ಪ್ರಮುಖರು, ಅಭಿಮಾನಿ ಬಳಗದವರು ಮತ್ತು ದಾನಿಗಳು ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸುವ ಮೂಲಕ ಕೆಂಪೇಗೌಡರ ಜಯಂತಿಯನ್ನು ಆಚರಿಸಿದರು.

ದಿನದ ಮಹತ್ವ ಕುರಿತು ಮಾತನಾಡಿದ ಶಿಕ್ಷಕ ಡಿ.ಎಲ್.ಮೂರ್ತಿ, ಕೆಂಪೇಗೌಡರು 27 ಜೂನ್ 1510ರಂದು ಜನಿಸುತ್ತಾರೆ. ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ಕೊಡುಗೆ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ, ರಾಜ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿರುವುದರಿಂದ ಅವರನ್ನು ನಾಡಪ್ರಭು ಎಂದು ಕರೆಯುತ್ತಾರೆ ಎಂದು ಹೇಳಿದರು.

ಕೆಂಪೇಗೌಡರು ಕೇವಲ ಬೆಂಗಳೂರನ್ನು ನಿರ್ಮಾಣ ಮಾಡಿಲ್ಲ. ಬೆಂಗಳೂರಿನಲ್ಲಿ ಕೆರೆಗಳನ್ನು ನಿರ್ಮಿಸುವ ಮೂಲಕ ರೈತರನ್ನು ಮತ್ತು ಕೃಷಿಯನ್ನು ಪ್ರೋತ್ಸಾಹಿಸಿದರು. ಕೆಂಪೇಗೌಡರಲ್ಲಿದ್ದ ದೂರದೃಷ್ಟಿ, ಆದರ್ಶ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.ದುಂಡಳ್ಳಿ ಗ್ರಾ.ಪಂ. ಸದಸ್ಯ ಸಿ.ಎಲ್.ಗಿರೀಶ್ ಮಾತನಾಡಿ, ನಾಡಪ್ರಭು ಕೆಂಪೇಗೌಡರು ನಾಡಿಗೆ ನೀಡಿದ ಕೊಡುಗೆಯನ್ನು ಪ್ರತಿಯೊಬ್ಬರೂ ಸ್ಮರಣೆ ಮಾಡುವ ಮೂಲಕ ನಾವು ಕೂಡ ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯದಲ್ಲಿ ಮುಂದಾಗುವಂತೆ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಶನಿವಾರಸಂತೆ ಒಕ್ಕಲಿಗರ ಸಂಘ ಅಧ್ಯಕ್ಷ ಎನ್.ಕೆ.ಅಪ್ಪಸ್ವಾಮಿ, ಪ್ರಮುಖರಾದ ಕೇಶವಮೂರ್ತಿ, ಶಾಂತಪ್ಪ, ಪ್ರಕಾಶ್, ಯೋಗಾನಂದ್, ಚಂದ್ರಕಾಂತ್, ರಾಮಚಂದ್ರ, ಮಿಲ್ ಪ್ರಭಾಕರ್, ಹರಪಳ್ಳಿ ಆನಂದ್, ಹೊಸೂರು ಮದನ್, ಎಸ್.ಆನಂದ್, ಅಪ್ಪಶೆಟ್ಟಳ್ಳಿ ಕಿರಣ್, ಪೈಂಟ್ ಮಂಜು ಮುಂತಾದವರು ಪಾಲ್ಗೊಂಡಿದ್ದರು.