ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ರಾಜ್ಯದಲ್ಲಿಯೇ ದೊಡ್ಡ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅಥಣಿ ಗ್ರಾಮೀಣ (ಸಂಕೋನಟ್ಟಿ) ಗ್ರಾಪಂ ನೂತನ ಅಧ್ಯಕ್ಷರಾಗಿ ಶಂಕರ ರಾಮು ಗಡದೆ ಆಯ್ಕೆಯಾಗುವ ಮೂಲಕ ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಗುಂಪಿಗೆ ಜಯ ದೊರಕಿದರೆ, ಸಂತೋಷ ಕಕಮರಿ ಪರಾಭವಗೊಂಡಿದ್ದಾರೆ.56 ಜನ ಸದಸ್ಯರ ಬಲಾಬಲ ಹೊಂದಿರುವ ಸಂಕೋನಟ್ಟಿ ಗ್ರಾಪಂನಲ್ಲಿ ಈಚೆಗೆ ನಿರ್ಗಮಿತ ಅಧ್ಯಕ್ಷ ಸಂತೋಷ ಕಕಮರಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ ಪರಿಣಾಮ ಖಾಲಿಯಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಲಕ್ಷ್ಮಣ ಸವದಿ ಬೆಂಬಲಿಗ ಶಂಕರ ರಾಮು ಗಡದೆ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿಗ ನಿಕಟ ಪೂರ್ವ ಅಧ್ಯಕ್ಷ ಸಂತೋಷ ಕಕಮರಿ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಭಾಗವಹಿಸಿದ್ದ 53 ಸದಸ್ಯರಲ್ಲಿ ಶಂಕರ ಗಡದೆ 43 ಮತಗಳು ಹಾಗೂ ಸಂತೋಷ ಕಕಮರಿಗೆ 10 ಮತಗಳು ಬಂದವು.ಚುನಾವಣೆ ಅಧಿಕಾರಿಯಾಗಿದ್ದ ತಾಪಂ ಇಒ ಶಿವಾನಂದ ಕಲ್ಲಾಪುರ, ಸಹಾಯಕ ಅಧಿಕಾರಿ ಗುರುನಾಥ ಸ್ವಾಮಿ, ಅಭಿವೃದ್ಧಿ ಅಧಿಕಾರಿ ಬೀರಪ್ಪ ಕೊಡಗಂಚಿ ನೂತನ ಅಧ್ಯಕ್ಷರಿಗೆ ಆದೇಶ ಪತ್ರ ನೀಡಿ ಅಭಿನಂದಿಸಿದರು. ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಶಾಸಕ ಲಕ್ಷ್ಮಣ ಸವದಿ ಬೆಂಬಲಿಗರು ಪಟಾಕಿ ಸಿಡಿಸಿ, ಪರಸ್ಪರ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು. ಮುಖಂಡರಾದ ಎಸ್.ಕೆ. ಬುಟಾಳಿ, ಶಿವಾನಂದ ದಿವಾನಮಳ, ಶಿವಾನಂದ ನಾಯಿಕ, ಶ್ರೀಶೈಲ ನಾಯಿಕ, ಗಿರೀಶ ದಿವಾನಮಳ, ಶೇಖರ ಕನಕರೆಡ್ಡಿ, ಶಾಂತಿನಾಥ ನಂದೇಶ್ವರ, ಶಿವರುದ್ರ ಘೂಳಪ್ಪನವರ, ಅರುಣ ಭಾಸಿಂಗಿ, ನರಸು ಬಡಕಂಬಿ, ಲಕ್ಷ್ಮಣ ಮುಗಳಖೋಡ, ಸಂಜಯ ಹಣಮಾಪುರ, ಪಾರೀಸ್ ನಂದೆಪ್ಪನವರ, ಅನಂತ ಬಸರಿಖೋಡಿ, ಅಶೋಕ ಕೌಜಲಗಿ, ಪ್ರಕಾಶ ಶೇಡಬಾಳೆ, ಚನ್ನಬಸು ಹುಲಗಬಾಳಿ ಸೇರಿದಂತೆ ಇನ್ನಿತರರು ಇದ್ದರು.
ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಕಾನೂನು ಬಾಹಿರ: ಅಥಣಿ ಗ್ರಾಮೀಣ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರ ಆಯ್ಕೆಯಾದ ಬೆನ್ನಲ್ಲೇ ಮಾಜಿ ಅಧ್ಯಕ್ಷ ಸಂತೋಷ ಕಕಮರಿ ಗುರುವಾರ ನಡೆದ ಅಧ್ಯಕ್ಷ ಸ್ಥಾನ ಚುನಾವಣೆ ಕಾನೂನು ಬಾಹಿರವಾಗಿದ್ದು, ರಾಜಕೀಯ ಒತ್ತಡಕ್ಕೆಮಣಿದು ಚುನಾವಣೆ ಅಧಿಕಾರಿಗಳು ಪಿಕೆಪಿಎಸ್ ಕಾರ್ಯದರ್ಶಿಯಾಗಿರುವ ವಿಷಯ ಗೊತ್ತಿದ್ದರೂ ಅಧ್ಯಕ್ಷ ಸ್ಥಾನದ ಚುನಾವಣೆಗೆ ಅವಕಾಶ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭರಮಖೋಡಿಯ ವಿವಿಧೋದ್ದೇಶಗಳ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ ಶಂಕರ ರಾಮು ಗಡದೆ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು. ಸಹಕಾರ ಇಲಾಖೆಯ ನಿಯಮದಂತೆ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ ಗ್ರಾಮ ಪಂಚಾಯಿತಿ ಸದಸ್ಯರಾಗಲು ಅವಕಾಶ ಇಲ್ಲ. ಗ್ರಾಪಂ ಚುನಾವಣೆ ಸಂದರ್ಭದಲ್ಲಿ ಈ ಸಂಗತಿ ಮರೆಮಾಚಿ ಗ್ರಾಪಂ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಅಧ್ಯಕ್ಷ ಸ್ಥಾನದಿಂದ ಕೂಡಲೇ ಪದಚ್ಯುತಗೊಳಿಸಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಶಾಸಕರು ಮತ್ತು ಕೆಲ ಮುಖಂಡರ ಒತ್ತಡದ ಕಾರಣ ಚುನಾವಣಾಧಿಕಾರಿ ಕಾನೂನಿಗೆ ವಿರುದ್ಧವಾಗಿ ವರ್ತಿಸಿದ್ದಾರೆ. ಅದಕ್ಕೆ ಅಗತ್ಯ ದಾಖಲೆ ನಮ್ಮ ಹತ್ತಿರ ಇವೆ ಎಂದು ದಾಖಲೆ ಬಿಡುಗಡೆಗೊಳಿಸಿದರು.