ಶಂಕರಾಚಾರ್ಯರು ಅದ್ವೈತ ತತ್ವ ಮತ್ತು ಸಿದ್ದಾಂತಗಳ ಆಧಾರದ ಮೇಲೆ ಈ ದೇಶವನ್ನು ಜೋಡಿಸುವಂತಹ ಹಾಗೂ ಸನಾತನ ಧರ್ಮವನ್ನು ಉಳಿಸುವಂತಹ ಕೆಲಸ ಮಾಡಿದ್ದಾರೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಂಕರಾಚಾರ್ಯರು ಅದ್ವೈತ ತತ್ವ ಮತ್ತು ಸಿದ್ದಾಂತಗಳ ಆಧಾರದ ಮೇಲೆ ಈ ದೇಶವನ್ನು ಜೋಡಿಸುವಂತಹ ಹಾಗೂ ಸನಾತನ ಧರ್ಮವನ್ನು ಉಳಿಸುವಂತಹ ಕೆಲಸ ಮಾಡಿದ್ದಾರೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಬ್ರಹ್ಮನೊಬ್ಬನೇ ಶಾಶ್ವತ ಮತ್ತು ಪರಮ ಸತ್ಯವೆಂದು ಸಾರಿದ ಶಂಕರಾಚಾರ್ಯರು ಈ ದೇಶವನ್ನು ಕಟ್ಟುವುದಕ್ಕಾಗಿ 4 ದಿಕ್ಕಿನಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ ಸಾಂಸ್ಕೃತಿಕ ರಾಷ್ಟ್ರವನ್ನಾಗಿಸಿದರು. ಪ್ರತಿಯೊಂದು ಹಂತದಲ್ಲೂ ಸಮಾಜದ ಸಂಸ್ಕೃತಿಯನ್ನು ಜೋಡಿಸುವಂತಹ ಕೆಲಸವನ್ನು ಮಾಡಿದ್ದಾರೆ, ನಾನೇ ಶ್ರೇಷ್ಠ ಅಂತ ಹೇಳುವಂತಹ ಯಾವುದೇ ಸಂಗತಿಯನ್ನು ಅವರು ಹೇಳಲಿಲ್ಲ. ಬದಲಾಗಿ ಎಲ್ಲವನ್ನು ಪೂರಕವಾಗಿ ಜೋಡಿಸಿಕೊಂಡು ಮುಂದಕ್ಕೆ ತೆಗೆದುಕೊಂಡು ಹೋಗುವುದು ಹೇಗೆ ಅನ್ನುವಂತಹ ಸಂಗತಿಯನ್ನು ಬಹಳ ವಿಶೇಷವಾದಂತಹ ರೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ ಎಂದರು.ಶಿವಮೊಗ್ಗದ ನಿವೃತ್ತ ಸಂಸ್ಕೃತ ಉಪನ್ಯಾಸಕ ಎ.ಎಸ್. ಕೃಷ್ಣಮೂರ್ತಿ ವಿಶೇಷ ಉಪನ್ಯಾಸ ನೀಡಿ, ಶಂಕರಾಚಾರ್ಯರೆಂದರೆ ಒಂದು ಆಲಯ. ಅದರ ಇನ್ನೊಂದು ಅರ್ಥ ಸಮನ್ವಯ ಎಂಬುದಾಗಿದ್ದು, ಅದನ್ನು ಬಹಳ ಅರ್ಥಪೂರ್ಣವಾಗಿ ಮಾಡಿದ್ದಾರೆ. ಕಲಿಯುಗದಲ್ಲಿ ಜಗತ್ತಿನ ದುಃಖವನ್ನು ಹೋಗಲಾಡಿಸಲು ಪ್ರಮುಖ ಪಾತ್ರವಹಿಸಿದ ಇವರು, ಯಾವುದೇ ಪ್ರತಿಫಲ ಅಪೇಕ್ಷಿಸದೇ ಭಾರತದ ನಾಲ್ಕು ದಿಕ್ಕಿನಲ್ಲಿ ಸಂಚರಿಸಿ ಅವರ ವಿಚಾರ ಧಾರೆಗಳು ಹಾಗೂ ಜ್ಞಾನ ಪ್ರಸಾದವನ್ನು ಹಂಚಿ, ಅಜ್ಞಾನವನ್ನು ಹೋಗಲಾಡಿಸಿದರು ಎಂದರು.
ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆಯಲ್ಲ. ಅಜ್ಞಾನದಿಂದ ನಾವು ನಮ್ಮನ್ನು ದೇಹ, ಮನಸ್ಸು ಎಂದು ಭಾವಿಸುತ್ತೇವೆ. ಆದರೆ ಜ್ಞಾನೋದಯವಾದಾಗ ನಾನೇ ಆ ಬ್ರಹ್ಮ (ಅಹಂ ಬ್ರಹ್ಮಾಸ್ಮಿ) ಎಂಬ ಅರಿವು ಮೂಡುತ್ತದೆ ಎಂದು ಶಂಕರಾಚಾರ್ಯರು ಸಾರಿದ್ದಾರೆ. ಅವರು ದೇಶದ ನಾಲ್ಕು ದಿಕ್ಕುಗಳಲ್ಲಿ ಶೃಂಗೇರಿ, ಪುರಿ, ದ್ವಾರಕಾ ಮತ್ತು ಬದರಿನಾಥ ಮಠಗಳನ್ನು ಸ್ಥಾಪಿಸುವ ಮೂಲಕ ಸನಾತನ ಧರ್ಮವನ್ನು ಪುನರುತ್ಥಾನಗೊಳಿಸಿದರು ಎಂದರು.ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪಿ.ಎಂ. ಮಾಲತೇಶ್ ಮಾತನಾಡಿ, 7ನೇ ಶತಮಾನದಲ್ಲಿ ಕೇರಳದ ಕಾಲಟಿಯಲ್ಲಿ ಜನಿಸಿದ ಶಂಕರಾಚಾರ್ಯರು ''''''''ಅಹಂ ಬ್ರಹ್ಮಾಸ್ಮಿ'''''''' ಎಂಬ ಅದ್ವೈತ ತತ್ವದ ಮೂಲಕ ಪರಮಾತ್ಮ ಮತ್ತು ಜೀವಾತ್ಮ ಒಂದೇ ಎಂದು ಜಗತ್ತಿಗೆ ಸಾರಿದರು ಎಂದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ. ನಟರಾಜ ಭಾಗವತ್, ತಾಲೂಕು ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಸುರೇಶ್‌ರಾವ್ ನಾಡಿಗ್, ಶೃಂಗೇರಿ ಶಂಕರಮಠದ ಧರ್ಮಾಧಿಕಾರಿಗಳಾದ ಪಿ. ನಾರಾಯಣ್, ಅನುಪಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಎಚ್, ಸಮಾಜದ ಮುಖಂಡರು ಹಾಜರಿದ್ದರು.