ಸಾರಾಂಶ
ಆದಿ ಗುರು ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ವಿಪ್ರ ಸಮಾಜದ ಸಹಯೋಗದಲ್ಲಿ ತಾಲೂಕು ಕಚೇ ರಿ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಗುಬ್ಬಿ
ಆದಿ ಗುರು ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ವಿಪ್ರ ಸಮಾಜದ ಸಹಯೋಗದಲ್ಲಿ ತಾಲೂಕು ಕಚೇ ರಿ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಸಲಾಯಿತು. ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಬಿ.ಆರತಿ, ಧರ್ಮ ಉಳಿವಿಗಾಗಿ ಶ್ರೀ ಶಂಕರಾಚಾರ್ಯರ ಕಾಲ್ನಡಿಗೆ ಪರ್ಯಟನೆ ಇಂದಿಗೂ ಸಾಕ್ಷಿಯಾಗಿ ನಾಲ್ಕು ಮಠಗಳು ನಾಲ್ಕು ದಿಕ್ಕಿನಲ್ಲಿದೆ. ಜಾತ್ಯತೀತ ನಿಲುವು ತಾಳಿ ಧರ್ಮ ಸಂಸ್ಥಾಪನೆ ಮಾಡಿದ ಶ್ರೀಗಳ ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿ ನಡೆಸಲಾಗುತ್ತಿದೆ. ಪ್ರತಿ ವರ್ಷ ನಡೆಯುವ ಈ ವೇದಿಕೆಯಲ್ಲಿ ಸಮಾಜದಲ್ಲಿ ಸಾಧನೆಗೈದವರಿಗೆ ಸನ್ಮಾನ ಕಾರ್ಯಕ್ರಮ ಅಥವಾ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಮುಂದಿನ ವರ್ಷದಿಂದ ನಡೆಸಲಾಗುವುದು ಎಂದು ಭರವಸೆ ನೀಡಿದರು.ಬ್ರಾಹ್ಮಣ ಸಮಾಜದ ಅಧ್ಯಕ್ಷ ಸಿ.ಎಸ್.ಅರುಣ್ ಮಾತನಾಡಿ ಸನಾತನ ಧರ್ಮ ಅಳಿವಿನ ಅಂಚಿಗೆ ಬಂದಾಗ ಶಿವನೇ ಶಂಕರಾಚಾರ್ಯರಾಗಿ ಜನ್ಮ ತಾಳಿ ಧರ್ಮ ರಕ್ಷಿಸಿದರು ಎನ್ನಲಾಗಿದೆ. ಕೇರಳದ ಕಾಲಾಡಿ ಎಂಬ ಗ್ರಾಮದಲ್ಲಿ ಜನಿಸಿ ದೇಶವನ್ನು ಸುತ್ತಿ ಧರ್ಮ ಸಂಸ್ಥಾಪನೆ ಕೆಲಸವನ್ನು ನಾಲ್ಕು ಧರ್ಮ, ನಾಲ್ಕು ಮಠಗಳ ಮೂಲಕ ನಡೆಸಿದರು. ಅದ್ವೈತ ಸಿದ್ಧಾಂತ ಪ್ರಸಾರ ಮಾಡಿ ವೇದ ಉಪನಿಷತ್ತುಗಳ ರಚಿಸಿದರು. ಇಂತಹ ಜಗದ್ಗುರುಗಳ ಜಯಂತಿ ಸಾರ್ವತ್ರಿಕ ಕಾರ್ಯಕ್ರಮ ಮಾಡಿರುವುದು ಸ್ವಾಗತಾರ್ಹ ಎಂದರು.ಕ್ರೀಡಾ ಪ್ರೋತ್ಸಾಹಕ ಸಿ.ಆರ್.ಶಂಕರಕುಮಾರ್ ಮಾತನಾಡಿ ಕೇವಲ 32 ವರ್ಷ ಅಲ್ಪಾಯುವಾಗಿ ಎಂಟನೇ ವಯಸ್ಸಿಗೆ ಸನ್ಯಾಸತ್ವ ಪಡೆದು ಭರತಖಂಡ ನಾಲ್ಕು ಬಾರಿ ಸುತ್ತಿ ನಾಲ್ಕು ಮಠಗಳನ್ನು ಸ್ಥಾಪಿಸಿ ಧರ್ಮ ಉಳಿಸಿದರು. ಅವರ ಹೋರಾಟದ ಕುರುಹು ಇಂದಿಗೂ ನಾಗಸಾಧು ಅಘೋರಿ ಪರಂಪರೆ ಸಾಕ್ಷಿಯಾಗಿದೆ ಎಂದರು.ಅಧ್ಯಾಪಕ ಮುರಳೀಧರ್ ಮಾತನಾಡಿ ವೇದ ಉಪನಿಷತ್ತು ಸಂಸ್ಕೃತ ಮೂಲಕ ಧರ್ಮವನ್ನು ಗಟ್ಟಿಗೊಳಿಸಿ ದೇವರ ಸ್ಮರಣೆ ಮಾತ್ರ ಮುಕ್ತಿ ನೀಡುತ್ತದೆ ಎಂದು ಭಜ ಗೋವಿಂದಂ ಶ್ಲೋಕಕ್ಕೆ ಅರ್ಥ ಕೊಟ್ಟರು. ಅಲ್ಪ ಅವಧಿಯಲ್ಲಿ ಎಂಟನೇ ಶತಮಾನದಲ್ಲಿ ನೀಡಿದ ಶಂಕರ ಫಿಲಾಸಫಿ ಇಂದಿಗೂ ಅರ್ಥಪೂರ್ಣ ಜೀವನಕ್ಕೆ ನಾಂದಿ ಹಾಡುತ್ತಿದೆ ಎಂದರು.ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ತಾಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ, ತಾಪಂ ಅಧಿಕಾರಿ ಜಗನ್ನಾಥಗೌಡ, ಶಿರಸ್ತೇದಾರ್ ಖಾನ್ ಸಾಬ್, ವಿಪ್ರ ಸಮಾಜದ ಎಚ್.ಕೆ.ಸತ್ಯನಾರಾಯಣ, ಶ್ರೀನಿವಾಸ್ ಪ್ರಸಾದ್, ಜಿ.ಸತೀಶ್, ಎನ್.ಎಸ್.ರವಿ, ಮಹೇಶ್, ರಾಘವೇಂದ್ರ, ಮಹಿಳಾ ಸಂಘದ ಸುನಂದಮ್ಮ, ಅರುಣಾ, ಮೇಘನಾ, ತಾಲ್ಲೂಕು ಕಚೇರಿಯ ಆನಂದ್, ಮಾದೇವಿ ಇತರರು ಇದ್ದರು.