ಅಥಣಿಯಲ್ಲಿ ಶೀಘ್ರವೇ ಶಂಕರಮಠ ಸ್ಥಾಪನೆ: ವಿಧುಶೇಖರ ಭಾರತಿ ಶ್ರೀ

| Published : Mar 18 2025, 12:30 AM IST

ಅಥಣಿಯಲ್ಲಿ ಶೀಘ್ರವೇ ಶಂಕರಮಠ ಸ್ಥಾಪನೆ: ವಿಧುಶೇಖರ ಭಾರತಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮದ ಹಾದಿಯಲ್ಲಿ ನಡೆದು ಸಮಾಜಮುಖಿ ಸೇವೆಗಳನ್ನು ಮಾಡುವ ಮೂಲಕ ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಅಥಣಿ

ಜಗದ್ಗುರು ಆದಿ ಶಂಕರಾಚಾರ್ಯರು ನಾಡಿನಾದ್ಯಂತ ಸಂಚರಿಸಿ ಜಗತ್ತಿಗೆ ಸನ್ಮಾರ್ಗದಲ್ಲಿ ಸಾಗುವ ಮಾರ್ಗದರ್ಶನ ಮಾಡಿದ್ದಾರೆ. ಶಂಕರಾಚಾರ್ಯರು ಮಾಡಿದ ಉಪದೇಶವನ್ನು ಅನೇಕ ಜನ ಸಂತರು ಬೇರೆ ಬೇರೆ ಭಾಷೆಯಲ್ಲಿ ಉಪದೇಶ ಮಾಡಿದ್ದಾರೆ. ಸಾಮಾನ್ಯ ಜನರಿಗೆ ಕೂಡ ಧರ್ಮ ಸಂದೇಶ ತಲುಪಬೇಕು. ಅಥಣಿಯಲ್ಲಿ ಶೀಘ್ರವೇ ಶಂಕರಮಠ ಸ್ಥಾಪನೆ ಮಾಡಲಾಗುವುದು ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.

ಪಟ್ಟಣದ ಡಾ.ಆರ್.ಎಚ್.ಕುಲಕರ್ಣಿ ಸಭಾಂಗಣದಲ್ಲಿ ದಿಗ್ವಿಜಯ ಯಾತ್ರೆಯ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಅಥಣಿಗೆ ನಮ್ಮ ಗುರುಗಳ ಬಹಳ ವರ್ಷದ ಹಿಂದೆ ಆಗಮಿಸಿದ್ದರು. ಎಷ್ಟೋ ವರ್ಷದ ನಂತರ ನಾವು ಅಥಣಿಗೆ ಆಗಮಿಸಿದ್ದು ಸಂತೋಷವಾಗಿದೆ. ಅಥಣಿಯಲ್ಲಿ ಶೀಘ್ರದಲ್ಲಿ ಶಂಕರಮಠವು ಸ್ಥಾಪನೆ ಸಿದ್ಧತೆ ಮಾಡಲಾಗುವುದು ಎಂದ ಅವರು, ಇಂದು ಸನಾತನ ಧರ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಅಗತ್ಯವಿದೆ. ನಾವು ಧರ್ಮಾಚರಣೆ ಮಾಡುವುದರ ಜೊತೆಗೆ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ಮಾನವೀಯ ಮೌಲ್ಯಗಳನ್ನು ಕಲಿಸಿಕೊಡಬೇಕು. ನಮಗೆ ಮಾನವ ಜನ್ಮ ಪ್ರಾಪ್ತಿಯಾದದ್ದು ನಮ್ಮೆಲ್ಲರ ಪುಣ್ಯ. ಧರ್ಮದ ಹಾದಿಯಲ್ಲಿ ನಡೆದು ಸಮಾಜಮುಖಿ ಸೇವೆಗಳನ್ನು ಮಾಡುವ ಮೂಲಕ ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು. ನಾವು ದೈವಿ ಸಂಪತ್ತು ಹೆಚ್ಚಿಸಿಕೊಳ್ಳುವ ಮೂಲಕ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಬೇಕೆಂದು ಉಪದೇಶ ನೀಡಿದರು.

ಶಂಕರ ಸೇವಾ ಅಭಿವೃದ್ಧಿ ಸಂಘದ ಅಧ್ಯಕ್ಷ, ನ್ಯಾಯವಾದಿ ಆರ್.ಎನ್.ಸಿದ್ಧಾಂತಿ ದಂಪತಿ ಪೂಜ್ಯರ ಪಾದಪೂಜೆ ನೆರವೇರಿಸಿದರು. ಪೂಜ್ಯರನ್ನು ಪೂರ್ಣ ಕುಂಭದೊಂದಿಗೆ ಮುತ್ತೈದೆಯರು ಗೌರವ ಪೂರ್ವಕವಾಗಿ ಅಥಣಿ ಪಟ್ಟಣಕ್ಕೆ ಬರಮಾಡಿಕೊಂಡರು. ಪೂಜ್ಯರು ಗೋಮಾತೆಗೆ ಪೂಜೆಸಲ್ಲಿಸಿ ಭಾರತೀಯ ಕೃಷಿ ಮತ್ತು ಋಷಿ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಗೋವು ಸಂಪತ್ತು ಉಳಿಸಿ ಬೆಳೆಸುವಂತೆ ಕರೆ ನೀಡಿದರು

ಈ ವೇಳೆ ಡಾ. ವಿಜಯಕುಮಾರ ಚೈನಿ, ಗಿರೀಶ ಚಿದಂಬರ ಕುಲಕರ್ಣಿ, ಅಜೀತ್ ಮಳಗಿಕರ, ರಾಮೇಶ ದೀಕ್ಷಿತ್, ಪ್ರಸಾದ ಕುಲಕರ್ಣಿ, ಗಿರೀಶ ಕುಲಕರ್ಣಿ(ಸಪ್ತಸಾಗರ ) ಹರೀಶ ಜೋಶಿ,ಆರ್ ಎ ಮುತಾಲೀಕ ದೇಸಾಯಿ ಮಿಲಿಂದ ತಬಿಬ, ಇನ್ನಿತರರು ಉಪಸ್ಥಿತರಿದ್ದರು. ಅವಿನಾಶ ಸೊಲ್ಲಾಪುರಕರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಪಾದ್ ಗಂಗಾಧರ ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿದರು. ಗೌರೀಶ ದೀಕ್ಷಿತ ವಂದಿಸಿದರು.