- ಜಿಲ್ಲಾಡಳಿತದ ವತಿಯಿಂದ ಶಂಕರಾಚಾರ್ಯರ ಜಯಂತಿ ಆಚರಣೆ
---ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಶ್ರೀ ಶಂಕರಾಚಾರ್ಯರ ಜಯಂತಿಯು ನಗರದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಮೊದಲಿಗೆ ನಗರದ ಚಾಮರಾಜೇಶ್ವರ ದೇವಾಲಯದ ಬಳಿ ಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಚಾಲನೆ ನೀಡಿದರು.ಬಳಿಕ ವರನಟ ಡಾ. ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮವನ್ನು ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಮ್ಮದ್ ಅಸ್ಗರ್, ಶಂಕರಾಚಾರ್ಯರು 4 ದಿಕ್ಕಿನಲ್ಲೂ ಪರ್ಯಟನೆ ಮಾಡಿ 4 ಮಠಗಳನ್ನು ಸ್ಥಾಪಿಸಿ ಧರ್ಮ ಪ್ರಚಾರ ಕೈಗೊಂಡರು. ಚಿಕ್ಕ ವಯಸ್ಸಿನಲ್ಲಿಯೇ ಆಸೆ ಆಕಾಂಕ್ಷೆಗಳನ್ನು ತೊರೆದು ರಾಷ್ಟ್ರ, ಜನತೆ ಹಾಗೂ ಧರ್ಮದ ಬಗ್ಗೆ ಸುಧೀರ್ಘವಾದ ಚಿಂತನೆ ನಡೆಸಿದವರು ಎಂದರು.
ಶಂಕರಾಚಾರ್ಯರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೂ ತಿಳಿಯಬೇಕಿದೆ. ದಾರ್ಶನಿಕರು, ಮಹಾಪುರುಷರ ಜಯಂತಿ ಆಚರಣೆ ಕಾರ್ಯಕ್ರಮಗಳಲ್ಲಿ ಎಲ್ಲರು ಭಾಗವಹಿಸುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಶಂಕರಾಚಾರ್ಯರು ಭಾರತ ಕಂಡ ಶ್ರೇಷ್ಠ ತತ್ವಜ್ಞಾನಿ ದಾರ್ಶನಿಕರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಂಚರಿಸಿ ತಮ್ಮ ವಿದ್ವತ್ ಪ್ರತಿಭೆಯಿಂದ ಅದ್ವೈತ ಧ್ವಜವನ್ನು ಎತ್ತಿ ಹಿಡಿದವರು ಎಂದರು.ಅದ್ವೈತ ಸಿದ್ದಾಂತ ಪ್ರತಿಪಾದಕರಾದ ಶಂಕರಾಚಾರ್ಯರು ಅದ್ವೈತ ಎಂದರೆ ಜೀವಾತ್ಮ ಪರಮಾತ್ಮ ಬೇರೆ ಅಲ್ಲ, ಎರಡೂ ಒಂದೆ. ಮನುಷ್ಯ ಆತ್ಮಸಾಕ್ಷಾತ್ಕಾರ ಮಾಡಿಕೊಂಡರೆ ಭಗವಂತನಲ್ಲಿ ಲೀನವಾಗಬಲ್ಲನು ಎಂದು ವ್ಯಾಖ್ಯಾನಿಸಿದರು. ಮನುಷ್ಯ ತನ್ನ ಅಜ್ಞಾನವನ್ನು ಕಳಚಿಕೊಳ್ಳಬೇಕು. ಲೌಖಿಕ ಸುಖವನ್ನು ತೊರೆದು ಆಧ್ಯಾತ್ಮಿಕ ಸುಖವನ್ನು ಅನುಭವಿಸಬೇಕು ಎಂದು ಸಾರಿಸಿದರು ಶಂಕರಾಚಾರ್ಯರೆಂದು ಹೇಳಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸುರೇಶ್ ಎನ್. ಋಗ್ವೇದಿ ಅವರು ಮಾತನಾಡಿ ಶಂಕರಾಚಾರ್ಯರು ಭಾರತದ ಸನಾತನ ಧರ್ಮದ ಸಂರಕ್ಷರಣೆಗಾಗಿ ಅಖಂಡ ಭಾರತದ ವೈವಿಕ ಪರಂಪರೆಯನ್ನು ಪ್ರಖರ ಪ್ರದೀಪಗೊಳಿಸಿದರು. ಬಾಲ್ಯದಲ್ಲಿಯೇ ಪವಾಡ ಸೃಷ್ಠಿಸಿ ಚಿಕ್ಕ ವಯಸ್ಸಿನಲ್ಲಿಯೇ ನಾಲ್ಕು ವೇದಗಳನ್ನು ದಿವ್ಯ ಶಕ್ತಿಯಿಂದ ಅರ್ಥೈಸಿಕೊಂಡಿದ್ದರು ಎಂದರು.ಶಂಕರಾಚಾರ್ಯರು 16ನೇ ವಯಸ್ಸಿನಲ್ಲಿ ಭಗವದ್ಗೀತೆ, ಉಪನಿಷತ್ತು, ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲಿಗರು. ಜ್ಞಾನ ಮಾರ್ಗದ ಮೂಲಕ ಮಾನವ ಏಳಿಗೆ ಸಾಧಿಸಬೇಕು. ಭಗವಂತನನ್ನು ಅರಿಯಬೇಕು. ದ್ವೇಷ ಅಸೂಯೆ, ಮೇಲು ಕೀಳು ಭಾವನೆ ತೊರೆದು ವಿವೇಕವಂತರಾಗಬೇಕೆಂದು ಶಂಕರಾಚಾರ್ಯರು ಪ್ರತಿಪಾದಿಸಿದರು ಎಂದು ತಿಳಿಸಿದರು.
ಸಮುದಾಯದ ಮುಖಂಡರಾದ ಜಿ.ಎಂ. ಹೆಗಡೆ ಮಾತನಾಡಿದರು. ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಎಸ್. ರಾಜು, ಮುಖಂಡರಾದ ಬಾಲಸುಬ್ರಹ್ಮಣ್ಯ, ಚಾ.ರಂ. ಶ್ರೀನಿವಾಸಗೌಡ, ಮಮತ ಬಾಲಸುಬ್ರಹ್ಮಣ್ಯ, ಗಾಯತ್ರಿ ಚಂದ್ರಶೇಖರ್, ಶಾಂತಲ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.---
29ಸಿಎಚ್‌ಎನ್52ಚಾಮರಾಜನಗರದ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮವನ್ನು ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಅವರು ಉದ್ಘಾಟಿಸಿದರು.