ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ಹರಿದು ಹಂಚಿ ಹೋಗಿದ್ದ ಸನಾತನ ಧರ್ಮ ರಕ್ಷಣೆಗಾಗಿಯೇ ಶಂಕರಾಚಾರ್ಯರು ಶಿವನ ವರಪ್ರಸಾದದಿಂದ ಜನಸಿದ ಮಹಾಪುರುಷರು ಎಂದು ಸಾಹಿತಿ ಕೂ.ಗಿ.ಗಿರಿಯಪ್ಪ ತಿಳಿಸಿದರು.ನಗರದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂಟನೇ ಶತಮಾನದಲ್ಲಿ ಕೇರಳ ರಾಜ್ಯದ ಕಾಲಡಿ ಎಂಬ ಗ್ರಾಮದಲ್ಲಿ ಶಿವಗುರು - ಆರ್ಯಂಬೆ ದಂಪತಿಯ ಮಗನಾಗಿ ಜನಿಸಿದ ಶಂಕರಾಚಾರ್ಯರು ಕ್ರಿಸ್ತಪೂರ್ವ 788ರಿಂದ 820ವರಗೆ 32 ವರ್ಷ ಬದುಕಿದವರು. ತನ್ನ 8ನೇ ವರ್ಷಕ್ಕೆ ಮನೆ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದರು ಎಂದು ಹೇಳಿದರು.
ಶಂಕರಾಚಾರ್ಯರು ತಮ್ಮ 12ನೇ ವಯಸ್ಸಿಹಲ್ಲೇ ವೇದಗಳನ್ನು ಅಭ್ಯಾಸ ಮಾಡಿ, ಬ್ರಹ್ಮಸೂತ್ರ, ಉಪನಿಷತ್ತು, ಭಗವದ್ಗೀತೆಯ ವ್ಯಾಖ್ಯಾನವನ್ನೂ ಬರೆದಿದ್ದಾರೆ. ಅದ್ವೈತ ತತ್ವವನ್ನು ಪ್ರತಿಪಾದಿಸುತ್ತಿದ್ದರು. ಅಹಂ ಬ್ರಹ್ಮಾಸ್ಮಿ ಜಗತ್ತು ಒಂದು ಮಾಯೆ ಬ್ರಹ್ಮ ಒಂದೇ ಸತ್ಯ ಎಂದು ಪ್ರತಿಪಾದಿಸುತ್ತಿದ್ದರು. ಕನ್ಯಾಕುಮಾರಿಯಿಂದ ರಾಮೇಶ್ವರದವರೆಗೂ ಅಖಂಡ ಭಾರತವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿ ಭಾರತದ ನಾಲ್ಕು ದಿಕ್ಕುಗಳಲ್ಲಿ ಶೃಂಗೇರಿ, ಬದ್ರಿನಾಥ, ದ್ವಾರಕಾ, ಪುರಿ ಎಂಬ ಮಠಗಳನ್ನು ಸ್ಥಾಪನೆ ಮಾಡಿ ಹಿಂದೂ ಧರ್ಮಕ್ಕೆ ಒಂದು ಭದ್ರ ಬುನಾದಿ ಹಾಕಿದ ಮಹನೀಯರು ಎಂದು ಹೇಳಿದರು.ತಿರುಪತಿಗೆ ಭೇಟಿ ಕೊಟ್ಟಿದ್ದ ಅವರು, ದನಾಕರ್ಷಣ ಯಂತ್ರವನ್ನು ಸ್ಥಾಪನೆ ಮಾಡಿದರು. ಕೊಲ್ಲೂರಿನಲ್ಲಿ ಶ್ರೀ ಚಕ್ರ ಮಂತ್ರ ಸ್ಥಾಪನೆ ಮಾಡಿದರು. ಕಾಶ್ಮೀರದ ಸರ್ವಜ್ಞ ಪೀಠದ ಪೀಠಾಧಿಪತಿಗಳಾಗಿ ದಕ್ಷಿಣ ಭಾರತದ ಮೊದಲ ಯತಿ ಶ್ರೇಷ್ಠರು ಇವರ ಮಾರ್ಗದರ್ಶನದಲ್ಲಿ ವಿದ್ಯಾರಣ್ಯರು ವಿಜಯನಗರವನ್ನು ಸ್ಥಾಪನೆ ಮಾಡಿದರು. ಶಂಕರಾಚಾರ್ಯರು ಅನೇಕ ಕೃತಿಗಳನ್ನು ರಚಿಸಿದರು. ಸನಾತನ ಧರ್ಮದ ಉಳಿವಿಗಾಗಿ ತಮ್ಮ ಸರ್ವಸ್ವವನ್ನೂ ಧಾರೆ ಎರೆದು ಕೇದಾರನಾಥದಲ್ಲಿ ಶಿವನಲ್ಲಿ ಐಕ್ಯರಾದರು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಿರಸ್ತೆದಾರ್ ಜಗದೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ, ಅಬಕಾರಿ ಇಲಾಖೆ ಶ್ರೀನಿವಾಸ್, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.