ಶಂಕರಾಚಾರ್ಯ ತತ್ವಾದರ್ಶ ಮನುಕುಲಕ್ಕೆ ದಾರಿದೀಪ: ವಿಧುಶೇಖರ ಭಾರತೀ ಶ್ರೀಗಳು

| Published : Apr 20 2024, 01:07 AM IST

ಶಂಕರಾಚಾರ್ಯ ತತ್ವಾದರ್ಶ ಮನುಕುಲಕ್ಕೆ ದಾರಿದೀಪ: ವಿಧುಶೇಖರ ಭಾರತೀ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಅದ್ವೈತ ಸಿದ್ಧಾತವನ್ನು ಶಂಕರರು ಪ್ರತಿಪಾದಿಸಿದರು. ಅದ್ವೈತ ಸಿದ್ಧಾಂತವೆಂದರೆ ಮನುಷ್ಯರು ಪರಸ್ಪರ ತಿಳಿವಳಿಕೆ ಮತ್ತು ಸೌಹಾರ್ದತೆಯಿಂದ ಸನ್ಮಾರ್ಗದಲ್ಲಿ ಬದುಕುವ ದಾರಿಯಾಗಿದೆ ಎಂದು ಶೃಂಗೇರಿಯ ವಿಧುಶೇಖರ ಭಾರತೀ ಶ್ರೀಗಳು ತಿಳಿಸಿದರು.

ಯಲ್ಲಾಪುರ: ಆದಿಶಂಕರರು ೧೨೦೦ ವರ್ಷಗಳ ಹಿಂದೆಯೇ ಸನಾತನ ಧರ್ಮದ ಪುನರುತ್ಥಾನಕ್ಕೆ ನಾಂದಿ ಹಾಡಿರದಿದ್ದರೆ, ಇಂದು ನಮ್ಮ ಹಿಂದೂ ಧರ್ಮದ ಸ್ಥಿತಿ ಹೀನಾಯವಾಗಿರುತ್ತಿತ್ತು. ಪ್ರಧಾನವಾಗಿ ಅನೇಕ ಪ್ರಮುಖ ಧರ್ಮಗ್ರಂಥಗಳನ್ನು ಬರೆದು ಮಾನವಕುಲ ಸನ್ಮಾರ್ಗದಲ್ಲಿ ಬದುಕಲು ಮಾರ್ಗದರ್ಶನ ನೀಡಿದ್ದಾರೆ ಎಂದು ಶೃಂಗೇರಿ ಮಠದ ವಿಧುಶೇಖರ ಭಾರತೀ ಶ್ರೀಗಳು ನುಡಿದರು.ಏ. ೧೯ರಂದು ಪಟ್ಟಣದ ನಾಯಕನಕೆರೆಯ ಬಾಲಾ ತ್ರಿಪುರಸುಂದರೀ ಶಾರದಾಂಬಾ ದೇವಸ್ಥಾನದಲ್ಲಿ ಯಲ್ಲಾಪುರದ ಕನ್ನಡ ವೈಶ್ಯ ಸಮಾಜದ ರಜತ ಸಂಭ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಅದ್ವೈತ ಸಿದ್ಧಾತವನ್ನು ಶಂಕರರು ಪ್ರತಿಪಾದಿಸಿದರು. ಅದ್ವೈತ ಸಿದ್ಧಾಂತವೆಂದರೆ ಮನುಷ್ಯರು ಪರಸ್ಪರ ತಿಳಿವಳಿಕೆ ಮತ್ತು ಸೌಹಾರ್ದತೆಯಿಂದ ಸನ್ಮಾರ್ಗದಲ್ಲಿ ಬದುಕುವ ದಾರಿಯಾಗಿದೆ ಎಂದರು.

ಜಗದ್ಗುರುಗಳೆಂದರೆ ಜಗತ್ತನ್ನು ಸುತ್ತಿದವರೆಂಬ ಅರ್ಥವಲ್ಲ, ಜಗತ್ತಿನಲ್ಲಿರುವವರೆಲ್ಲರಿಗೆಲ್ಲ ಆತ್ಮೋದ್ಧಾರದ ದಾರಿಯಲ್ಲಿ ಸಾಗುವ ಸನ್ಮಾರ್ಗವನ್ನು ತೋರುವ ಮಹಾನ್ ಪುರುಷರು ಮಾತ್ರ ಜಗದ್ಗುರು ಎನಿಸಿಕೊಳ್ಳುತ್ತಾರೆ. ಸನಾತನ ಧರ್ಮದಲ್ಲಿ ಜ್ಞಾನ, ಭಕ್ತಿ, ಕರ್ಮ ಈ ಮೂರು ಸನ್ಮಾರ್ಗದ ಲಕ್ಷಣಗಳನ್ನು ಸನಾತನ ಧರ್ಮ ನೀಡಿದೆ. ಭಕ್ತಿಮಾರ್ಗ ಎಂದರೆ ದೇವರ ಪೂಜೆ, ಮಂತ್ರ-ತಂತ್ರ, ಭಜನೆ, ಸ್ತೋತ್ರ ಇವುಗಳನ್ನು ಎಲ್ಲ ರೀತಿಗಳಿಂದಲೂ ಮಾಡಬಹುದು. ಕರ್ಮ ಹೋಮ, ಹವನ, ದಾನ ಮುಂತಾದವುಗಳ ಮೂಲಕ ಆಚರಿಸುವುದೇ ಕರ್ಮಮಾರ್ಗವಾಗಿದೆ. ಇವೆರಡಕ್ಕೂ ಮಿಗಿಲಾದ ಜ್ಞಾನ ಮಾರ್ಗವೇ ಕೊನೆಯದು. ಇದು ಮನುಷ್ಯ ಜೀವನ್ಮುಕ್ತಿಯೆಡೆಗೆ ಸಾಗುವ ಮಾರ್ಗವಾಗಿದೆ. ಆಚಾರ್ಯರು ತೋರಿದ ಮಾರ್ಗದಲ್ಲಿ ಜ್ಞಾನ ಮಾರ್ಗದ ಮೂಲಕ ಸಾಗಿ ನಮ್ಮ ಮನುಷ್ಯ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಶೃಂಗೇರಿ ಮಠದ ವಿದ್ವಾಂಸರಾದ ಶತಾವಧಾನಿ ಗನ್ನಾವರಂ ಲಲಿತಾದಿತ್ಯ ಶರ್ಮ, ಗಿರೀಶ ಹೆಬ್ಬಾರ, ಮಂಜುನಾಥ ಅಡಿಗ, ಸುಬ್ರಹ್ಮಣ್ಯ ಭಟ್ಟ, ಮಹೇಶ ಭಟ್ಟ, ಶಾರದಾಂಬಾ ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಭಟ್ಟ, ಹುಟಕಮನೆಯ ದತ್ತಾತ್ರೇಯ ಭಟ್ಟ ಅವರನ್ನು, ಕನ್ನಡ ವೈಶ್ಯ ಸಮಾಜದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಕಾಂತ ಶೆಟ್ಟಿ, ದಾಮೋದರ ಶೆಟ್ಟಿ, ಪುಂಡಲೀಕ ಶೆಟ್ಟಿ, ಅನಿಲಕುಮಾರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವೇದಘೋಷದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕನ್ನಡ ವೈಶ್ಯ ಸಮಾಜದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಲೋಚನಾ ಶೆಟ್ಟಿ ಬಿನ್ನವತ್ತಳೆ ವಾಚಿಸಿದರು. ಸತೀಶ ಶೆಟ್ಟಿ ನಿರ್ವಹಿಸಿದರು.

ಕನ್ನಡ ವೈಶ್ಯ ಸಮಾಜ ಸಂಘಟಿಸಿದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಶ್ರೀಗಳು ಬಹುಮಾನ ನೀಡಿ, ಆಶೀರ್ವದಿಸಿದರು.