ಶಂಕರಾಚಾರ್ಯರ ಅದ್ವೈತ ತತ್ವ ಸರ್ವಕಾಲಕ್ಕೂ ಪ್ರಸ್ತುತ: ಡಿಸಿ ಡಾ. ವಿದ್ಯಾಕುಮಾರಿ

| Published : May 14 2024, 01:01 AM IST

ಶಂಕರಾಚಾರ್ಯರ ಅದ್ವೈತ ತತ್ವ ಸರ್ವಕಾಲಕ್ಕೂ ಪ್ರಸ್ತುತ: ಡಿಸಿ ಡಾ. ವಿದ್ಯಾಕುಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಆಧ್ಯಾತ್ಮಿಕ ಚಿಂತಕರಾದ ಶಂಕರಾಚಾರ್ಯರ ಅದ್ವೈತ ತತ್ವ ಮತ್ತು ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದರು.

ಅವರು ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.

ಶಂಕರಾಚಾರ್ಯರು ಅದ್ವೈತ ಸಿದ್ಧಾಂತವನ್ನು ದೇಶಾದ್ಯಂತ ಪ್ರಚಾರ ಮಾಡುವ ಸಂದರ್ಭದಲ್ಲಿ ಅನೇಕ ಮಠಗಳನ್ನು ಸ್ಥಾಪಿಸಿದ್ದಾರೆ. ಅವುಗಳಲ್ಲಿ ಶೃಂಗೇರಿಯ ಶಾರದ ಮಠ, ಒಡಿಶಾದ ಪುರಿಯ ಗೋವರ್ಧನ ಮಠ, ಗುಜರಾತ್‌ನ ಕಾಳಿಕಾ ಮಠ ಹಾಗೂ ಉತ್ತರಾಖಂಡ್‌ನ ಜ್ಯೋತಿರ್ಮಠ ಪ್ರಮುಖವಾದುದು. ಜೊತೆಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಶಂಕರಾಚಾರ್ಯರ ಆಲೋಚನೆಗಳು ಹಾಗೂ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದರು.

ಪತ್ರಕರ್ತ ಕಿರಣ್ ಮಂಜನಬೈಲು ಶಂಕರಾಚಾರ್ಯರ ಕುರಿತು ಉಪನ್ಯಾಸ ನೀಡಿ, ಕೇರಳದ ಕಾಲಡಿಯಲ್ಲಿ ಜನಿಸಿದ ಶಂಕರರು, ಸಮಾಜ ಸುಧಾರಣೆಗಾಗಿ ಶ್ರಮಿಸಿದ್ದರು. ಅವರು ಪ್ರಾಣಿಬಲಿಯನ್ನು ಖಂಡಿಸಿದ್ದರು. ಈಶ್ವರ, ವಿಷ್ಣು, ದೇವಿ, ಗಣಪತಿ ಮತ್ತು ಸೂರ್ಯ ಈ ಐದು ದೇವತೆಗಳನ್ನು ಪ್ರಧಾನವಾಗಿಟ್ಟುಕೊಂಡು ಪೂಜೆ ಮಾಡುವ ಪಂಚಾಯತನ ಪೂಜಾ ಪದ್ಧತಿಯನ್ನು ಆರಂಭಿಸಿದ್ದರು. ಸಮ ಸಮಾಜದ ಆಶಯವನ್ನು ವ್ಯಕ್ತಪಡಿಸಿದ ಮೊಟ್ಟಮೊದಲಿಗರು ಆಚಾರ್ಯ ಶಂಕರರು. ಶಂಕರಾಚಾರ್ಯರು ಭಾರತೀಯ ಸನಾತನ ಧರ್ಮದ ಪುನರುದ್ಧಾನದ ಮೇರು ವ್ಯಕ್ತಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ತತ್ವಜ್ಞಾನಿಗಳಲ್ಲಿ ಮೇರು ವ್ಯಕ್ತಿ ಶಂಕರಾಚಾರ್ಯರು. ಶಂಕರರ ಸಿದ್ಧಾಂತಗಳು ಮನುಷ್ಯರ ಅಭ್ಯುದಯಕ್ಕೆ ದಾರಿದೀಪವಾಗಿದೆ. ವ್ಯಕ್ತಿತ್ವದ ವಿಕಸನಕ್ಕೆ ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆಯಬೇಕು. ಶಂಕರರ ತತ್ವ, ಆದರ್ಶಗಳು ನಮ್ಮ ಜೀವನವನ್ನು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ, ಬ್ರಹ್ಮಾವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸವಿತಾ ಎರ್ಮಾಳು, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ವಿಶ್ವನಾಥ, ಮಹೇಶ್, ಜಿಲ್ಲಾಡಳಿತದ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿದರು. ಕನ್ನಡ ಉಪನ್ಯಾಸಕ ರಾಮಾಂಜಿ ವಂದಿಸಿದರು.