ಗದಗ: ಜಗದ್ಗುರು ಶಂಕರಾಚಾರ್ಯರು ಸನಾತನ ಧರ್ಮದ ಉಳಿವಿಗೆ ಕಾರಣರಾದರು. ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆ ಸಾರಿದರು. ಅವರ ತತ್ವಗಳು ಸರ್ವಕಾಲದಲ್ಲಿಯೂ ಪ್ರಸ್ತುತವಾಗಿವೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ನಗರದ ಸಂಭಾಪುರ ರಸ್ತೆಯಲ್ಲಿನ ಶಂಕರ ಮಠದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಂಕರಾಚಾರ್ಯರು 8ನೇ ಶತಮಾನದಲ್ಲಿದ್ದವರು. ಸನಾತನ ಸಂಸ್ಕೃತಿ ವಿನಾಶದ ಅಂಚಿನಲ್ಲಿದ್ದಾಗ ಶಂಕರಾಚಾರ್ಯರು ಸನಾತನ ಪರಂಪರೆಯನ್ನು ಪುನರ್‌ ಸ್ಥಾಪನೆ ಮಾಡಿದ ಮಹಾನ್ ಚೇತನರಾಗಿದ್ದಾರೆ. ಸನಾತನ ಧರ್ಮ ಜೀವನದ ಶೈಲಿಯಾಗಿದೆ. ಆರೋಗ್ಯ ಮತ್ತು ನೆಮ್ಮದಿ ಇದ್ದರೆ ಜೀವನದಲ್ಲಿ ಏನಾದರೂ ಸಾಧಿಸಬಹುದಾಗಿದೆ. ಅಂದಿನ ದಿನಗಳಲ್ಲಿ ಶಂಕರಾಚಾರ್ಯರು ಧರ್ಮ ರಕ್ಷಣೆಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರಗೆ ಸಂಚರಿಸಿದರು ಎಂದರು. ಅಭಿವೃದ್ಧಿ ಅಧಿಕಾರಿ ಹಾಗೂ ಸಂಸ್ಕೃತಿ ಚಿಂತಕ ಎಂ.ಟಿ. ಭಟ್ ಅವರು ಉಪನ್ಯಾಸ ನೀಡಿ, ಶಂಕರಾಚಾರ್ಯರು ಕೇರಳದಲ್ಲಿ ವೈಶಾಖ ಶುದ್ಧ ಪಂಚಮಿಯಂದು ಜನಿಸಿದರು. ಆತ್ಮ ಮತ್ತು ಪರಮಾತ್ಮ ಎರಡೂ ಬೇರೆ ಬೇರೆ ಅಲ್ಲ. ಎರಡೂ ಒಂದೇ. ಆತ್ಮನೆ ಪರಮಾತ್ಮ ಎಂದು ಸಾರಿದವರು. ಶಂಕರಾಚಾರ್ಯರು ಅದ್ವೈತ ವೇದಾಂತವನ್ನು ಪ್ರತಿಪಾದಿಸಿದವರು. ಸನಾತನ ಧರ್ಮದ ಉಳಿವಿಗಾಗಿ ಕಾಲ್ನಡಿಗೆಯಲ್ಲಿ ದೇಶದ ನಾಲ್ಕು ದಿಕ್ಕುಗಳಲ್ಲಿ ಸಂಚರಿಸಿದವರು. ಧಾರ್ಮಿಕ ಹಾಗೂ ಆಧ್ಮಾತ್ಮಿಕ ಲೋಕಕ್ಕೆ ಶಂಕರಾಚಾರ್ಯರು ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಹಿರಿಯರನ್ನು ಸನ್ಮಾನಿಸಲಾಯಿತು. ರಾಮಚಂದ್ರ ಮೋನೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ವೇದಮೂರ್ತಿ ರತ್ನಾಕರ್‌ಭಟ್ ಜೋಶಿ, ಡಾ. ಕುಶಾಲ ಗೋಡಖಿಂಡಿ, ಆನಂದ ಗೋಡಖಿಂಡಿ, ದತ್ತಾತ್ರೇಯ ಜೋಶಿ, ಸುಮನ ಪಾಟೀಲ, ವೆಂಕಟೇಶ ಕುಲಕರ್ಣಿ, ಗಿರೀಶ ಕುಲಕರ್ಣಿ, ಸುಧೀಂದ್ರ ದೇಶಪಾಂಡೆ, ದತ್ತಣ್ಣ ಜೋಶಿ, ಗಿರೀಶ ಪಂತರ, ಅನಿಲ ತೆಂಬದಮನಿ, ರವೀಂದ್ರ ಜೋಶಿ, ಆರ್.ಎಸ್. ಕುಲಕರ್ಣಿ, ಕೃಷ್ಣ ನಾಡಿಗೇರ ಸೇರಿದಂತೆ ಸಮಾಜದ ಹಿರಿಯರು, ಗಣ್ಯರು, ಮುಖಂಡರು ಇದ್ದರು. ವೇದಮೂರ್ತಿ ಶಂಕರಭಟ್ ಸೊರಟೂರ, ವೇದಮೂರ್ತಿ ದತ್ತಂಭಟ್ಟ ತೆಂಬದಮನಿ, ವೇದಮೂರ್ತಿ ಗಣೇಶ ಭಟ್ ಪುರಾಣಿಕ ಅವರು ವೇದಘೋಷ ನಡೆಸಿಕೊಟ್ಟರು.