ಸಾರಾಂಶ
ತಿಪಟೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಹಾಗೂ ಯಾತ್ರಾಕ್ಷೇತ್ರವಾದ ಶ್ರೀ ಕೆರೆಗೋಡಿ- ರಂಗಾಪುರ ಸುಕ್ಷೇತ್ರದಲ್ಲಿ ಶ್ರೀ ಶಂಕರೇಶ್ವರ ಸ್ವಾಮೀಜಿಯವರ ಬೆಳ್ಳಿ ರಥೋತ್ಸವವು ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತು.
ವಿವಿಧ ಜಾನಪದ ಕಲಾತಂಡಗಳಾದ ನಂದಿಧ್ವಜ, ಕಹಳೆ, ವಿವಿಧ ರೀತಿಯ ವಾದ್ಯವೃಂದ ಸೇರಿದಂತೆ ಪ್ರಸಿದ್ಧ ವೀರಗಾಸೆ, ವೀರಭದ್ರ ಕುಣಿತಗಳು ಶ್ರೀ ಸ್ವಾಮಿಯ ಜಾತ್ರಾ ವೈಭವವನ್ನು ಮತ್ತಷ್ಟು ಮೆರಗುಗೊಳಿಸಿದವು.ರಥೋತ್ಸವದ ನಂತರ ಶ್ರೀಗಳು ಪತ್ರಿಕೆಯೊಂದಿಗೆ ಮಾತನಾಡಿ, ಜಾತ್ರೆಗಳು ಧಾರ್ಮಿಕ ಸಂಬಂಧಗಳ ಜೊತೆ ಮನೆಮನೆ ಹಾಗೂ ಮನಸ್ಸುಗಳ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಇಂದು ಮನುಷ್ಯನಿಗೆ ಏನೇ ಲಭಿಸಿದ್ದರೂ ಮನಃಶಾಂತಿಗೋಸ್ಕರ ದೇವರು, ದೇವಸ್ಥಾನ ಹಾಗೂ ಪೂಜೆ ಪುನಸ್ಕಾರಗಳ ಜೊತೆ ಜಾತ್ರೆ, ದೇವರ ಕೆಲಸ ಕಾರ್ಯಗಳು ಹೆಚ್ಚಿನ ನೆಮ್ಮದಿ ನೀಡುತ್ತಿರುವುದರಿಂದ ಹೆಚ್ಚಿನ ಜನರು ಜಾತ್ರೆಗಳಿಗೆ ಸೇರುತ್ತಿದ್ದಾರೆ. ಕ್ಷೇತ್ರಾಧಿಪತಿಗಳಾದ ಶ್ರೀ ಶಂಕರೇಶ್ವರ- ಶ್ರೀ ರಂಗ ಎಲ್ಲರಿಗೂ ಒಳ್ಳೆಯದು ಮಾಡುತ್ತಾನೆ. ಕಲ್ಪತರು ನಾಡಿನಲ್ಲಿ ನೀರಿಗಾಗಿ ತೀವ್ರ ತೊಂದರೆಯಾಗುತ್ತಿದ್ದು, ಪ್ರಾಣಿ ಹಾಗೂ ಸಸ್ಯ ಸಂಕುಲಗಳು ವಿನಾಶದಂಚಿಗೆ ತಲುಪುತ್ತಿವೆ. ರೈತರ ಬದುಕು ಸಹ ಸಂಕಷ್ಟದಲ್ಲಿದ್ದು, ಇಂತಹ ಸನ್ನಿವೇಶದಲ್ಲಿ ಪ್ರಕೃತಿ ಮಾತೆ ಹಾಗೂ ಶ್ರೀಕ್ಷೇತ್ರದ ಆರಾಧ್ಯ ದೈವ ಶ್ರೀಶಂಕರೇಶ್ವರ ಸ್ವಾಮಿ ಹಾಗೂ ಶ್ರೀ ರಂಗನಾಥಸ್ವಾಮಿಯವರ ಕೃಪೆಯಿಂದ ಮುಂದಿನ ದಿನಗಳಲ್ಲಿ ನಾಡಿಗೆ ಉತ್ತಮ ಮಳೆ- ಬೆಳೆಯಾಗಿ ಸಮೃದ್ಧಿ ನೆಲೆಸಲಿದೆ ಎಂದು ಶ್ರೀಗಳು ಶುಭ ಹಾರೈಸಿದರು.