ಸಾರಾಂಶ
ಬಾಗಲಕೋಟೆ : ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸದ್ದು ಮಾಡಿದ್ದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ ಕರ್ತವ್ಯ ಲೋಪಗಳ ಆರೋಪಕ್ಕೆ ಕನ್ನಡಪ್ರಭ ವರದಿ ನಂತರ ತಾರ್ಕಿಕ ಅಂತ್ಯ ಕಂಡಿದ್ದು, ಜಿಲ್ಲಾಡಳಿತವು ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿನ ಜೂನ್-24ರ ಸಭೆಯಲ್ಲಿ ನೀಡಿರುವ ಸೂಚನೆಗಳನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿ ಮಾಡಿರುವ ಆದೇಶದಡಿ ಶಂಕರಲಿಂಗ ಗೋಗಿ ಅವರನ್ನು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹುದ್ದೆಯಿಂದ ತಕ್ಷಣದಿಂದ ಬಿಡುಗಡೆಗೊಳಿಸಿ ಆದೇಶಿಸಿದ ಪತ್ರ ಕನ್ನಡಪ್ರಭಕ್ಕೆ ಲಭ್ಯವಾಗಿದೆ.
ಪತ್ರಿಕೆ ವರದಿಯಿಂದ ಸಂಚಲನ:ವಾರವಾದರೂ ಸಚಿವರ ಆದೇಶ ಪಾಲನೆಯಾಗಿಲ್ಲ, ಸಚಿವರ ಸೂಚನೆಗೆ ಕಿಮ್ಮತ್ತು ಇಲ್ಲ ಎಂಬ ಶಿರ್ಷಿಕೆಯಡಿ ಸೋಮವಾರ ಕನ್ನಡಪ್ರಭದಲ್ಲಿ ಪ್ರಕಟಗೊಂಡ ವಿಶೇಷ ವರದಿ ಅಧಿಕಾರಿಗಳ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು.
ಬೆಳಗ್ಗೆಯಿಂದಲೇ ಹಲವು ರೀತಿಯ ಚರ್ಚೆ, ಜೊತೆಗೆ ಪತ್ರಿಕೆಯಲ್ಲಿ ಲೋಕಾಯುಕ್ತ ವರದಿಯಲ್ಲಿನ ಸಮಗ್ರವಾದ ಮಾಹಿತಿ ನೀಡಿರುವ ಕುರಿತು ಸಹ ಮೆಚ್ಚುಗೆ ವ್ಯಕ್ತವಾಯಿತು. ಅಂತಿಮವಾಗಿ ಜಿಲ್ಲಾಡಳಿತ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗೋಗಿ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿ ಆ ಸ್ಥಳಕ್ಕೆಯೋಜನಾ ಅಭಿಯಂತರರಿಗೆ ಮುಂದಿನ ಆದೇಶದವರೆಗೆ ಪ್ರಭಾರ ಅಧಿಕಾರ ನಿಭಾಯಿಸಲು ಸೂಚಿಸಲಾಗಿದೆ.