ಅಂಧರ ಸಂತೃಪ್ತಿ ಸಂಸ್ಥೆಗೆ ಸೂರು ಕಲ್ಪಿಸಿದ ಶಾಂತನಗೌಡ

| Published : Feb 17 2025, 12:31 AM IST

ಅಂಧರ ಸಂತೃಪ್ತಿ ಸಂಸ್ಥೆಗೆ ಸೂರು ಕಲ್ಪಿಸಿದ ಶಾಂತನಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಬಾಡಿಗೆ ಮನೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಆಸರೆ ಪಡೆದು, ಊರು ಊರುಗಳಿಗೆ ಹೋಗಿ ಹಾಡು ಹೇಳುವ ಮೂಲಕ ಉದರ ಪೋಷಣೆ ಮಾಡಿಕೊಳ್ಳುತ್ತಿದ್ದ ಸಂತೃಪ್ತಿ ಅಂಧರ ಸಂಸ್ಥೆಗೆ ಶಾಸಕ ಡಿ.ಜಿ.ಶಾಂತನಗೌಡ ತಾತ್ಕಾಲಿಕ ಸೂರು ವ್ಯವಸ್ಥೆ ಕಲ್ಪಿಸಿ, ಮಾನವೀಯತೆ ಮೆರೆದಿದ್ದಾರೆ.

- ಪಾಳುಬಿದ್ದ ವಸತಿ ಗೃಹ ರಿಪೇರಿಗೊಳಿಸಿ ಗೃಹಪ್ರವೇಶ । ಊರೂರು ಸುತ್ತಿ ಹಾಡು ಹೇಳಿ ಬದುಕುತ್ತಿರುವ ಅಂಧರು

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ಬಾಡಿಗೆ ಮನೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಆಸರೆ ಪಡೆದು, ಊರು ಊರುಗಳಿಗೆ ಹೋಗಿ ಹಾಡು ಹೇಳುವ ಮೂಲಕ ಉದರ ಪೋಷಣೆ ಮಾಡಿಕೊಳ್ಳುತ್ತಿದ್ದ ಸಂತೃಪ್ತಿ ಅಂಧರ ಸಂಸ್ಥೆಗೆ ಶಾಸಕ ಡಿ.ಜಿ.ಶಾಂತನಗೌಡ ತಾತ್ಕಾಲಿಕ ಸೂರು ವ್ಯವಸ್ಥೆ ಕಲ್ಪಿಸಿ, ಮಾನವೀಯತೆ ಮೆರೆದಿದ್ದಾರೆ.

ಹೊನ್ನಾಳಿಯ ಟಿ.ಬಿ. ವೃತ್ತದ ಬಳಿಯ ಸರ್ಕಾರಿ ನೌಕರರ ವಸತಿ ಗೃಹಗಳಲ್ಲಿ ಹಾಳುಬಿದ್ದಿದ್ದ ಒಂದು ಮನೆಯನ್ನು ಶಾಸಕ ಡಿ.ಜಿ.ಶಾಂತನಗೌಡ ಅವರು ವೈಯಕ್ತಿಕವಾಗಿ ₹2.25 ಲಕ್ಷ ಖರ್ಚು ಮಾಡಿ, ಸಂಪೂರ್ಣ ರಿಪೇರಿ ಮಾಡಿಸಿದ್ದಾರೆ. ಕಟ್ಟಡಕ್ಕೆ ಬಣ್ಣ ಬಳಿಸಿ, ಅಂಧರ ವಾಸಕ್ಕಾಗಿ ಭಾನುವಾರ ಪೂಜೆಯೊಂದಿಗೆ ಗೃಹ ಪ್ರವೇಶ ನೆರವೇರಿಸಿದರು. ಇದರಿಂದ ಅಂಧರ ಮೊಗದಲ್ಲಿ ನೆಮ್ಮದಿ ಮೂಡಿಸಿದ್ದಾರೆ. ಅಂಧ ಕಲಾವಿದರಿಗೆ ಸೂರು ಕಲ್ಪಿಸುವ ಮೂಲಕ ಅವರ ಬಾಳಿಗೆ ಬೆಳಕಾಗುವ ಕೆಲಸವನ್ನು ಶಾಸಕ ಶಾಂತನಗೌಡ ಕೈಗೊಂಡಿದ್ದಾರೆ.

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಸುಮಾರು 8 ಮಹಿಳೆಯರು ಸೇರಿದಂತೆ 25 ಜನರು ಸಂತೃಪ್ತಿ ಅಂಧ ಕಲಾವಿದರ ಸಂಸ್ಥೆಯಲ್ಲಿದ್ದಾರೆ. ಹತ್ತಾರು ವರ್ಷಗಳಿಂದ ಹೊನ್ನಾಳಿ ಸಮೀಪದ ತುಮ್ಮಿನಕಟ್ಟೆ ರಸ್ತೆಯಲ್ಲಿ ತಾವೇ ಹಣ ಕಟ್ಟಿ ಬಾಡಿಗೆ ಮನೆ ವ್ಯವಸ್ಥೆ ಕಲ್ಪಿಸಿದ್ದೆವು. ಜೊತೆಗೆ ಅಲ್ಲಿದವರಿಗೆಲ್ಲಾ ಪಡಿತರ ಕಾರ್ಡ್‌ ಸೌಲಭ್ಯ ಕಲ್ಪಿಸಿ, ರೇಷನ್ ನೆರವು ಸಿಗುವಂತೆ ಮಾಡಲಾಗಿತ್ತು ಎಂದು ಶಾಸಕರು ಹೇಳಿದರು.

ತುಮ್ಮಿನಕಟ್ಟೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಆದಕಾರಣ ಬಾಡಿಗೆ ಮನೆ ತರೆವುಗೊಳಿಸಬೇಕಾದ ಅನಿವಾರ್ಯತೆ ಬಂದಿತು. ಆಗ ಹಲವು ವರ್ಷಗಳಿಂದ ಟಿ.ಬಿ. ವೃತ್ತದ ಸಮೀಪದ ಪ್ರವಾಸಿ ಮಂದಿರ ರಸ್ತೆಯಲ್ಲಿ ಸರ್ಕಾರಿ ನೌಕರರ ವಸತಿ ಗೃಹ ಹಲವಾರು ವರ್ಷಗಳಿಂದ ಖಾಲಿಯಾಗಿ ಹಾಳುಬಿದ್ದಿತ್ತು. ಆ ಕಟ್ಟಡವನ್ನೇ ಈಗ ಸ್ವಂತ ಹಣ ಖರ್ಚು ಮಾಡಿ, ರಿಪೇರಿಗೊಳಿಸಿ, ಮೂಲ ಸೌಕರ್ಯಗಳನ್ನು ವ್ಯವಸ್ಥೆಗೊಳಿಸಿ, ಭಾನುವಾರ ಗೃಹಪ್ರವೇಶ ಮಾಡಿ, ಹಸ್ತಾಂತರಿಸಿರುವುದಾಗಿ ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮೈಲಪ್ಪ, ಟಿಎಪಿಸಿಎಂಎಸ್. ಸೊಸೈಟಿಯ ಎಚ್.ಬಸವರಾಜಪ್ಪ, ಎಚ್.ಬಿ. ಬಸವರಾಜಪ್ಪ, ಸರಳಿನಮನೆ ರಾಜು, ಪ್ರಕಾಶ್ ಎಚ್.ಬಿ. ಶೇಖರಪ್ಪ ಸಂತೃಪ್ತಿ ಅಂಧರ ಸಂಘದ ಅಧ್ಯಕ್ಷ ಅಣ್ಣಪ್ಪ ಹಾಗೂ ಪದಾಧಿಕಾರಿಗಳು, ಹಿರೇಗೋಣಿಗೆರೆ ಸೋಮಣ್ಣ, ಸುರೇಶ್ ಸೇರಿದಂತೆ ಅನೇಕ ಮುಖಂಡರು ಇದ್ದರು.

- - -

ಬಾಕ್ಸ್‌ * 30 ಬುದ್ಧಿಮಾಂದ್ಯರಿಗೆ ಒಂದು ಮನೆ ವ್ಯವಸ್ಥೆ ಬುದ್ಧಿಮಾಂದ್ಯರಿಗಾಗಿ ಹೊನ್ನಾಳಿ ಅಪ್ಪರ್‌ ತುಂಗಾ ಪ್ರದೇಶದಲ್ಲಿರುವ ಒಂದು ಮನೆಯನ್ನು ಅವರ ವಾಸಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಸುಮಾರು 30 ಜನ ಬುದ್ಧಿಮಾಂದ್ಯರು ಆಶ್ರಯ ಪಡೆದಿದ್ದಾರೆ. ಹೊನ್ನಾಳಿ ಪಟ್ಟಣದಲ್ಲಿ ಅಂಗವಿಕಲರ ವಸತಿಯಿದೆ. ಸ್ಥಳೀಯ ಸಂಸ್ಥೆಯಲ್ಲಿ ಲಭ್ಯವಿರುವ ಅನುದಾನವನ್ನು ಈ ಮೂರು ವರ್ಗದವರಿಗೆ ನೀಡಲಾಗಿದೆ. ಜೊತೆಗೆ ತಮ್ಮ ಪಕ್ಷದ ಕೆಲ ಮುಖಂಡರು ಕೂಡ ಇವರ ಸಹಾಯಕ್ಕೆ ಕೈ ಜೋಡಿಸಿದ್ದಾರೆಂದು ಶಾಸಕರು ಹೇ‍‍ಳಿದರು.

- - -

-16ಎಚ್.ಎಲ್.ಐ1ಜೆಪಿಜಿ:

ಹೊನ್ನಾಳಿ ಪಟ್ಟಣದ ಟಿ.ಬಿ. ವೃತ್ತದ ಬಳಿ ಹಾಳುಬಿದ್ದಿದ್ದ ಕ್ವಾಟ್ರಸ್‌ ಮನೆಯನ್ನು ಸ್ವಂತ ಖರ್ಚಿನಲ್ಲಿ ಅಭಿವೃದ್ಧಿಪಡಿಸಿರುವ ಶಾಸಕ ಡಿ.ಜಿ.ಶಾಂತನಗೌಡ ಭಾನುವಾರ ಗೃಹಪ್ರವೇಶ ನೆರವೇರಿಸಿ, ಸಂತೃಪ್ತಿ ಅಂಧರ ಸಂಸ್ಥೆಗೆ ಕಟ್ಟಡ ಹಸ್ತಾಂತರಿಸಿದರು.