- ಭೋವಿ ಶ್ರೀಗಳ ಪೂರ್ವಾಶ್ರಮದ ಹೆತ್ತವರಾದ ಹನುಮಂತಪ್ಪ- ಸರೋಜಮ್ಮಗೆ ಕುಟೀರ ಹಸ್ತಾಂತರ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕುಂಚಿಟಿಗ ಪೀಠದ ಸ್ವಾಮೀಜಿ ಹಾಗೂ ಭೋವಿ ಪೀಠದ ಶ್ರೀಗಳ ಸ್ನೇಹ ಎಲ್ಲರಿಗೂ ಮಾದರಿಯಾಗಿದೆ. ಯಾರೇ ಸಂಕಷ್ಟದಲ್ಲಿದ್ದರೂ ಮೊದಲಿಗೆ ನೆರವಿಗೆ ಬರುವುದೇ ಹೊಸದುರ್ಗದ ಕುಂಚಿಟಿಗ ಪೀಠದ ಶ್ರೀ ಶಾಂತವೀರ ಸ್ವಾಮೀಜಿ ಎಂದು ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ನಗರದ ಯರಗುಂಟೆಯಲ್ಲಿ ಹೊಸದುರ್ಗದ ಶ್ರೀ ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಮ್ಮ ಬಾಲ್ಯ ಸ್ನೇಹಿತರಾದ ಇಮ್ಮಡಿ ಶ್ರೀ ಸಿದ್ಧರಾಮೇಶ್ವರ ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಪೂರ್ವಾಶ್ರಮದ ಹೆತ್ತವರಾದ ಹನುಮಂತಪ್ಪ- ಸರೋಜಮ್ಮ ದಂಪತಿಗೆ ಕಟ್ಟಿಸಿದ ಸಿದ್ಧರಾಮ ಕುಟೀರ ಮನೆ ಹಸ್ತಾಂತರ ಸಮಾರಂಭದಲ್ಲಿ ಅವರು ಮಾತನಾಡಿದರು. ಕುಂಚಿಟಿಗ ಶ್ರೀಗಳು ಹಾಗೂ ಭೋವಿ ಪೀಠದ ಶ್ರೀಗಳು ಪರಸ್ಪರ ಗೌರವ ನೀಡುತ್ತಾರೆ. ಈ ಇಬ್ಬರೂ ಹಾಲು-ಜೇನಿನಂತಿದ್ದಾರೆ ಎಂದರು.

ಶಾಂತವೀರ ಸ್ವಾಮೀಜಿ ಮನೆ ಹಸ್ತಾಂತರದ ಬಗ್ಗೆ ಯಾರಿಗೂ ಸುಳಿವನ್ನೇ ನೀಡಿರಲಿಲ್ಲ. ಯಾವುದೇ ಸ್ವಾಮೀಜಿಗಳ ಪೂರ್ವಾಶ್ರಮದ ಕುಟುಂಬದ ಸದಸ್ಯರು ಒಂದು ಹೊಸ ಬೈಕ್ ಖರೀದಿಸಿದರೂ ಆ ಕುಟುಂಬಕ್ಕೇನು ಬಿಡಪ್ಪಾ ಎಂಬಂತೆ ಮಾತನಾಡುವವರೂ ಇದ್ದಾರೆ. ಇಂದು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಪೂರ್ವಾಶ್ರಮದ ಹೆತ್ತವರಿಗೆ ಕುಂಚಿಟಿಗ ಸಮಾಜದವರು ಕಾಣಿಕೆ ನೀಡಿದ್ದಾರೆ. ಯಾರೇ ಸಂತರು ಸಂಕಷ್ಟದಲ್ಲಿದ್ದರೂ ನೆರವಿಗೆ ಬರುವ ಶಾಂತವೀರ ಸ್ವಾಮೀಜಿ ಇತರರಿಗೂ ಪ್ರೇರಣೆಯಾಗಿದ್ದಾರೆ. ಭೋವಿ ಶ್ರೀಗಳು ಕರುಣಾಮಯಿ ಎಂದು ಹೇಳಿದರು.


ತಳ ಸಮುದಾಯದವರು ರಾಷ್ಟ್ರೀಯತೆಗೆ ವಿಮುಖ‍ವಾಗಿ ಅನ್ಯ ಧರ್ಮಕ್ಕೆ ಹೋಗುತ್ತಿರುವುದು ಯಾವ ಕಾರಣಕ್ಕೆ ಎಂಬ ಬಗ್ಗೆಯೂ ಗಂಭೀರ ಚಿಂತನೆ ನಡೆಸಬೇಕಾಗಿದೆ. ಕೆಲ ದಶಕಗಳ ಹಿಂದೆ ದೇವಸ್ಥಾನಗಳನ್ನು ಕಟ್ಟಿದವರನ್ನೇ ಅಲ್ಲಿ ಒಳಗೆ ಕರೆಯದಿದ್ದಾಗ ನಮ್ಮ ತಳ ಸಮುದಾಯಗಳು ಅನ್ಯಧರ್ಮಕ್ಕೆ ಹೋದವು. ಅದನ್ನೆಲ್ಲಾ ತಡೆಯುವ ಉದ್ದೇಶ ನಮ್ಮ ಎಲ್ಲಾ ಮಠಾಧೀಶರಿಗೂ ಇದೆ. ತಳ ಸಮುದಾಯದವರನ್ನು ಒಟ್ಟಾಗಿ ಕರೆದುಕೊಂಡು ಹೋದಾಗ ಅನ್ಯ ಧರ್ಮಕ್ಕೆ ಹೋಗುವುದನ್ನೂ ತಡೆಯಬಹುದು. ಇಂತಹ ಬದಲಾವಣೆ ಸಮಾಜದಲ್ಲಿ ಆದಾಗ ಮಾತ್ರ ಹಿಂದೂ ಸಮಾಜ ಭದ್ರವಾಗಿರುತ್ತದೆ ಎಂದು ಅವರು ತಿಳಿಸಿದರು.

ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ಮನೆ ನೋಡ, ಮನ ಬಂದಂತಾಗಿರಬೇಕು ಎನ್ನುತ್ತಾರೆ. ಇದು ಕೇವಲ ಮನೆಯಲ್ಲ, ಮನೆ ಹಿಂದೆ ಮಮ್ಮಲ ಮರುಗಿದ ಜೀವಗಳಿವೆ. ತಾವು ಕಲ್ಲು ಒಡೆದು, ಬೇರೆಯವರಿಗೆ ಮನೆ ಮಾಡಿ ಕೊಟ್ಟವರು ತಾವು ಹೊರಗೆ ಇದ್ದರು. 9 ತಿಂಗಳು ಹೆತ್ತು, ಹೊತ್ತ ಮಗನನ್ನೇ ಸಮಾಜಕ್ಕೆ ಸಮರ್ಪಿಸಿದರು. ಆ ತಂದೆ, ತಾಯಿಗೆ ಕುಂಚಿಟಿಗ ಪೀಠದ ಶಾಂತವೀರ ಸ್ವಾಮೀಜಿ ಸೂರು ನೀಡಿದ್ದಾರೆ. ಚಿತ್ರದುರ್ಗ ಮುರುಘಾ ಮಠದ ಗುರುಕುಲದಲ್ಲಿ ತಾವೆಲ್ಲಾ ಶ್ರೀಗಳ ಜೊತೆಗಿದ್ದ ಒಡನಾಟ ಮರೆಯುವುದಿಲ್ಲ. ನಾವು ಯಾವ ಸ್ವಾಮೀಜಿಗಳೂ ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ. ಬುದ್ಧ, ಬಸವ, ಗಾಂಧೀಗೆ ಬಿಟ್ಟಿಲ್ಲ. ನಿಂದಿಸುವವರು ಇರಬೇಕು ಎಂದರು.

ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಪೂರ್ವಾಶ್ರಮದ ಪಾಲಕರು ಆರ್ಥಿಕವಾಗಿ ಸಬಲರಾದರೂ ಸ್ವಾಮೀಜಿ ಮೇಲೆ ಅಪವಾದ ಹೇರುತ್ತಾರೆ. ವಿರಕ್ತ ಪರಂಪರೆಯಲ್ಲಿ ಪೂರ್ವಾಶ್ರಮವನ್ನೇ ಮರೆತು ನಾವು ಬದುಕಬೇಕು. ಇದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದೇವೆ. ಇಂತಹ ಅಪವಾದ ಬರಬಾರದೆಂಬ ಕಾರಣಕ್ಕೆ ದೊಡ್ಡ ಕಾರ್ಯಕ್ರಮ ಮಾಡಲಾಗುತ್ತಿದೆ. ಇಮ್ಮಡಿ ಪೀಠದ ಶ್ರೀಗಳ ಪೂರ್ವಾಶ್ರಮದ ಪಾಲಕರಿಗೆ ದುಡಿಯುವ ಶಕ್ತಿ ಇಲ್ಲ. ಈ ಹಿರಿ ಜೀವಗಳಿಗೆ ಠೇವಣಿ ಇಟ್ಟರೆ ಅನುಕೂಲವಾಗಲಿದೆ. ಕುಂಚಿಟಿಗ ಸಮುದಾಯ ₹5 ಲಕ್ಷ ನೀಡಲಿದೆ. ರಾಜ್ಯ ಸರ್ಕಾರ ಎಲ್ಲಾ ಮಠಗಳಿಗೆ 50 ಎಕರೆ ಭೂಮಿ ನೀಡಿದೆ. ಮಠಗಳಿಗೆ ಆರ್ಥಿಕ ನೆರವನ್ನೂ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ ಎಂದರು.

ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ರಾಜನಹಳ್ಳಿ ಶ್ರೀ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ನವಲಿಂಗ ಸ್ವಾಮೀಜಿ, ಈಶ್ವರಾನಂದ ಸ್ವಾಮೀಜಿ, ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಗುಂಡಯ್ಯ ಸ್ವಾಮೀಜಿ, ಅಪ್ಪಣ್ಣ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಗುರು ಮಹಾಂತ ಸ್ವಾಮೀಜಿ, ಭೋವಿ ನಿಗಮದ ಅಧ್ಯಕ್ಷ ನೇರಲಗುಂಟೆ ಎಸ್.ರಾಮಪ್ಪ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಭೋವಿ ಸಮಾಜದ ಅಧ್ಯಕ್ಷ ರವಿ ಮಾಕಳಿ, ಶಾಸಕ ಡಿ.ಜಿ.ಶಾಂತನಗೌಡ, ತುಮಕೂರಿನ ವಿದ್ಯಾನಿಧಿ ಸಂಸ್ಥೆಯ ಪ್ರದೀಪಕುಮಾರ, ಬಿಜೆಪಿ ಮುಖಂಡರಾದ ಲಿಂಗಮೂರ್ತಿ, ಮಾಡಾಳ ಮಲ್ಲಿಕಾರ್ಜುನ, ಜಿ.ಎಸ್. ಅನಿತಕುಮಾರ, ಮುರುಳೀಧರ ಹಾಲಪ್ಪ, ಕಾಂಗ್ರೆಸ ಯುವ ಮುಖಂಡ ಸಮರ್ಥ ಎಂ.ಶಾಮನೂರು, ಡಿ.ಬಸವರಾಜ ಇತರರು ಇದ್ದರು.

- - -

-(ಫೋಟೋಗಳಿವೆ).