ಅಸಾಧಾರಣ ಸಮಾಜವಾದಿ ಶಾಂತವೇರಿ ಗೋಪಾಲಗೌಡ

| Published : Mar 15 2024, 01:20 AM IST

ಸಾರಾಂಶ

ಸತ್ಯ ಆವೇಶಗೊಂಡಾಗ ವಿಧಾನಸೌಧವನ್ನೇ ಗಢಗಢ ನಡುಗಿಸಿದ ಅಸಾಧಾರಣ ಸಮಾಜವಾದಿ ಶಾಂತವೇರಿ ಗೋಪಾಲಗೌಡ. ನಾಯಕತ್ವಕ್ಕೆ ಗೌಡರೆಂದರೆ ಶಾಂತವೇರಿಯ ಗೋಪಾಲಗೌಡರು ಎಂದು ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸತ್ಯ ಆವೇಶಗೊಂಡಾಗ ವಿಧಾನಸೌಧವನ್ನೇ ಗಢಗಢ ನಡುಗಿಸಿದ ಅಸಾಧಾರಣ ಸಮಾಜವಾದಿ ಶಾಂತವೇರಿ ಗೋಪಾಲಗೌಡ ಎಂದು ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಹೇಳಿದರು.

ಗುರುವಾರ ಚಂದನ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶಾಂತವೇರಿ ಗೋಪಾಲಗೌಡರ ಬದುಕು- ಹೋರಾಟ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಯಕತ್ವಕ್ಕೆ ಗೌಡರೆಂದರೆ ಶಾಂತವೇರಿಯ ಗೋಪಾಲಗೌಡ. ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಎಲ್ಲ ಶಾಸಕರಿಗೆ ನಿವೇಶನ ಹಂಚಿಕೆ ಮಾಡುವ ಯೋಜನೆ ರೂಪಿಸಲಾಗಿತ್ತು. ₹22 ಸಾವಿರ ಪಾವತಿಸಿ ಹಕ್ಕುಪತ್ರ ಪಡೆಯಬಹುದಾಗಿತ್ತು. ಅಂತಹ ಅವಕಾಶ ತಿರಸ್ಕರಿಸಿದ ಅಂದಿನ ಶಾಸಕರಾಗಿದ್ದ ಗೋಪಾಲಗೌಡ ಅವರು ವಸತಿಹೀನರಿಗೆ ನಿವೇಶನಗಳನ್ನು ಕೊಟ್ಟು, ಉಳಿದರೆ ನನಗೆ ನೀಡಿ ಎಂದು ಪ್ರತಿಕ್ರಿಯಿಸಿದ್ದನ್ನು ಸ್ಮರಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ಸಮಾಜವಾದಿ ಚಿಂತನೆಗಳು ಕಣ್ಮರೆ ಆಗುತ್ತಿರುವ ಈ ಹೊತ್ತಿನಲ್ಲಿ ಇಂತಹ ಕಾರ್ಯಕ್ರಮಗಳ ಅವಶ್ಯಕತೆಯಿದೆ. ಕೂಡು ಕುಟುಂಬದ ದೊಡ್ಡ ವಿಸ್ತರಣೆಯೇ ಸಮಾಜವಾದ. ಒಟ್ಟು ಸಂಪನ್ಮೂಲವನ್ನು ಸಮಾಜದ ಪ್ರತಿಯೊಬ್ಬರಿಗೂ ಹಂಚಿಕೆ ಆಗುವಂತೆ ಮಾಡುವುದೇ ಸಮಾಜವಾದದ ದೊಡ್ಡ ಪರಿಕಲ್ಪನೆ. ಅಂತಹ ಚಿಂತನೆಗಳನ್ನು ಚಳವಳಿಗಳ ಮೂಲಕ ಜನರ ಮನದಲ್ಲಿ ಬಿತ್ತರಿಸುವ ಕಾರ್ಯ ನಡೆಸಿದ ಅದ್ಭುತ ವ್ಯಕ್ತಿತ್ವ ಗೋಪಾಲಗೌಡರದು ಎಂದು ಹೇಳಿದರು.

ಸಾಹಿತಿ ಡಾ. ಎಂ.ಬಿ. ನಟರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರು ಸಮಾಜದ ಪ್ರಭಾವಿ ಮಾಧ್ಯಮ. ಒಂದೇ ವೇದಿಕೆಯಲ್ಲಿ ನೂರಾರು ಭಾವಿಪ್ರಜೆಗಳನ್ನು ರೂಪಿಸುವ ಶಕ್ತಿ ಶಿಕ್ಷಕರಿಗಿದೆ. ಗೋಪಾಲಗೌಡರು ನಾಡು ಕಂಡ ಮೇರು ನಾಯಕರಾಗಿದ್ದಾರೆ. ಅಂತಹ ಆದರ್ಶ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಹಣ ಮಾಡುವ ದಂಧೆಯಾಗಿ ಕಲುಷಿತಗೊಂಡಿರುವ ರಾಜಕೀಯ ವ್ಯವಸ್ಥೆಯಲ್ಲಿ ಗೋಪಾಲಗೌಡರಂತಹ ರಾಜಕಾರಣಿಯ ಬದುಕು, ಇಂದಿನ ಜನಾಂಗಕ್ಕೆ ಬಹಳ ದೊಡ್ಡ ಅಶ್ಚರ್ಯವೇ ಸರಿ. ಹಣವಿಲ್ಲದೇ ರಾಜಕೀಯ ಮಾಡಿದ ಗೋಪಾಲಗೌಡರು ಅತ್ಯಂತ ಪರಿಶುದ್ಧ ರಾಜಕಾರಣಿ ಆಗಿದ್ದರು ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ, ರೈತ ಮುಖಂಡ ಕೆ.ಟಿ.ಗಂಗಾಧರ, ಕುವೆಂಪು ಶತಮಾನೋತ್ಸವ ಬಿ.ಎಡ್. ಕಾಲೇಜಿನ ಪ್ರಾಂಶುಪಾಲ ಡಾ. ಮಧು, ಅಲ್ ಮೊಹಮದ್ ಬಿ.ಎಡ್. ಕಾಲೇಜಿನ ಪ್ರಾಂಶುಪಾಲ ಡಾ.ಸೋಮಶೇಖರ್, ಪದಾಧಿಕಾರಿಗಳಾದ ಮಹಾದೇವಿ, ಪ್ರತಿಮಾ ಡಾಕಪ್ಪ, ಬಿ.ಟಿ.ಅಂಬಿಕಾ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಎನ್.ಕೆ. ಚಿದಾನಂದ ಸ್ವಾಗತಿಸಿದರು. ಲೇಖಕ ಬಿ.ಚಂದ್ರೇಗೌಡ ನಿರೂಪಿಸಿದರು.

- - - -14ಎಸ್‌ಎಂಜಿಕೆಪಿ01:

ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವ ಅಂಗವಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಉದ್ಘಾಟಿಸಿ, ಮಾತನಾಡಿದರು.