ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಸುಮಾರು ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬನಶಂಕರಿ, ಶಾಂತಿನಗರ ಸಂಪರ್ಕದ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಹಾಗೂ ಸಂಬಂಧಿಸಿದ ಸಂಪರ್ಕ ರಸ್ತೆ ಅಭಿವೃದ್ಧಿ ಮಾಡುವಂತೆ ಒತ್ತಾಯಿಸಿ ಈ ಎರಡೂ ಬಡಾವಣೆಯ ನಾಗರೀಕರು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಗೆ ಮನವಿ ಪತ್ರ ಸಲ್ಲಿಸಿದರು.ಮನವಿಗೆ ಸ್ಪಂದಿಸಿದ ಸಚಿವ ಸೋಮಣ್ಣ, ಮುಂದಿನ ಐದಾರು ತಿಂಗಳಲ್ಲಿ ಆ ಭಾಗದಲ್ಲಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ತಮ್ಮ ಜೊತೆಗಿದ್ದ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಐದಾರು ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ನಾಗರೀಕರು ಸಚಿವ ಸೋಮಣ್ಣನವರಿಗೆ ಎಚ್ಚರಿಕೆ ನೀಡಿದರು.
ನಗರದ ರೈಲ್ವೆ ನಿಲ್ದಾಣದ ಬಳಿ ಗಾಂಧಿನಗರದಿಂದ ಶಾಂತಿನಗರ, ಬನಶಂಕರಿ ಬಡಾವಣೆಗಳಿಗೆ ಜನ, ವಾಹನ ಓಡಾಟಕ್ಕೆ ಅನುಕೂಲವಾಗಿದ್ದ ರೈಲ್ವೆ ಗೇಟ್ ಮುಚ್ಚಿ ಹಲವು ವರ್ಷಗಳೇ ಆಗಿವೆ. ಆದರೆ ಇಲ್ಲಿ ಸಂಚಾರಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಇದರಿಂದ ಶಾಂತಿನಗರ, ಬನಶಂಕರಿ ಭಾಗದ ಸುಮಾರು 20 ಸಾವಿರಕ್ಕೂ ಹೆಚ್ಚು ನಾಗರೀಕರಿಗೆ ಸಂಚಾರ ಸಂಪರ್ಕ ಬಂದ್ ಆ ಗಿದೆ. ಈ ಭಾಗದ ನಾಗರೀಕರು ಬಸ್ ನಿಲ್ದಾಣ, ನಗರದ ಇತರೆ ಭಾಗಗಳಿಗೆ ಹೋಗಿಬರಲು ದೂರದ ಉಪ್ಪಾರಹಳ್ಳಿ ರಸ್ತೆ ಅಥವಾ ಕುಣಿಗಲ್ ರಸ್ತೆ ಅವಲಂಬಿಸಬೇಕಾಗಿದೆ. ಇದರಿಂದ ಸಕಾಲದಲ್ಲಿ ಕಚೇರಿ ವ್ಯವಹಾರ, ಶಾಲಾ ಕಾಲೇಜಿಗೆ ಹೋಗಲು, ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳಿಗೆ ಹೋಗಲು ತೀವ್ರ ತೊಂದರೆಯಾಗಿದೆ ಎಂದು ನಾಗರೀಕರು ಸಚಿವರ ಗಮನಕ್ಕೆ ತಂದರು.ರೈಲ್ವೆ ಅಂಡರ್ ಪಾಸ್ ಅತ್ಯಗತ್ಯವಾಗಿ ಆಗಲೇಬೇಕಾದ ಕೆಲಸ. ಅಂಡರ್ ಪಾಸ್‌ಗೆ ಪೂರಕವಾಗಿ ಅಪ್ರೋಚ್ ರಸ್ತೆ ನಿರ್ಮಾಣ ಆಗಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಕೂದು, ಮಾಡಿದರೆ ಉಗ್ರವಾದ ಹೋರಾಟ ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಇದರ ಜೊತೆಗೆ ನಗರದ ರೈಲ್ವೆ ನಿಲ್ದಾಣದ ದಕ್ಷಿಣ ಭಾಗದಲ್ಲಿ ಪ್ರಯಾಣಿಕರಿಗೆ, ಪಾದಚಾರಿಗಳಿಗೆ ಸ್ಕೈ ವಾಕ್ ನಿರ್ಮಾಣ ಮಾಡಬೇಕು. ನಿಲ್ದಾಣದ ದಕ್ಷಿಣ ಭಾಗದಿಂದ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ಭಾಗದ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್ ತೆರೆಯಬೇಕು ಎಂದು ಮನವಿ ಮಾಡಿದರು.ಬನಶಂಕರಿ, ಶಾಂತಿನಗರ ಬಡಾವಣೆಗಳ ನಾಗರೀಕ ಮುಖಂಡರಾದ ಬನಶಂಕರಿ ಬಾಬು, ಕಾಫಿಪುಡಿ ರಾಜಣ್ಣ, ಜ್ಯೋತಿಪ್ರಕಾಶ್(ಜೆಪಿ), ಇಮ್ರಾನ್ ಪಾಷಾ, ರಮೇಶ್, ಕುಮಟೇಶ್, ಪ್ರಭಣ್ಣ, ತೋಟದ ರುದ್ರಪ್ಪ, ಮುರಳಿ, ಅಮೋಘ್ ರಾಜೇಶ್, ಹೇಮಂತ್ ಮೊದಲಾದವರು ಹಾಜರಿದ್ದು, ಈ ಭಾಗದ ಜನರ ಬೇಡಿಕೆ ಈಡೇರಿಸುವಂತೆ ಕೋರಿ ಸಚಿವ ಸೋಮಣ್ಣನವರಿಗೆ ಮನವಿ ಮಾಡಿದರು.