ಚಿತ್ತಧಾಮದಲ್ಲಿ ವಿದೇಶಿಗನಿಗೆ ಉತ್ತಮ ಚಿಕಿತ್ಸೆ

| Published : Oct 28 2024, 01:12 AM IST

ಸಾರಾಂಶ

ಪುನರ್ವಸತಿ ತಾಣಕ್ಕೆ ರಾಜ್ಯವಲ್ಲದೇ, ಹರಿಯಾಣ, ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ಹಲವು ರಾಜ್ಯಗಳಿಂದ ಇಲ್ಲಿ ಬಂದು ತಪಾಸಣೆಗೆ ಒಳಗಾಗಿದ್ದಾರೆ

ಕನ್ನಡಪ್ರಭ ವಾರ್ತೆ ಎಚ್‌.ಡಿ. ಕೋಟೆ

ನಮ್ಮ ಚಿತ್ತಧಾಮದಲ್ಲಿ ವಿದೇಶಿ ವ್ಯಕ್ಯಿಯೊಬ್ಬರಿಗೆ ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡಿದ ಹೆಮ್ಮ ನಮ್ಮ ಚಾರಿಟಬಲ್ ಟ್ರಸ್ಟ್‌ಗೆ ಇದೆ ಎಂದು ಚಿತ್ತಪ್ರಕಾಶ್ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಮನೋವೈದ್ಯ ಡಾ.ಬಿ.ಆರ್. ರವಿಶಂಕರ್‌ ರಾವ್ ತಿಳಿಸಿದರು.

ಪಟ್ಟಣದ ಶಾಂತಿಪುರ ಗ್ರಾಮದಲ್ಲಿನ ನಿರಾಶ್ರಿತ ಮಾನಸಿಕ ಅಸ್ವಸ್ಥರ ಪುನರ್ವಸತಿ ತಾಣ (ಚಿತ್ತಧಾಮ) ದಲ್ಲಿ ಬೆಂಗಳೂರಿನ ಚಿತ್ತಪ್ರಕಾಶ್ ಚಾರಿಟಬಲ್ ಟ್ರಸ್ಟ್ ಸೇರಿದಂತೆ ಇನ್ನಿತರ ಟ್ರಸ್ಟ್‌ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ನಮ್ಮ ಚಿತ್ತಧಾಮಕ್ಕೆ ಸೇರುವಾಗ ಆ ವ್ಯಕ್ತಿ ವಿದೇಶಿ ವ್ಯಕ್ತಿ ಎಂದು ತಿಳಿದಿರಲಿಲ್ಲ. ಆತ ಗುಣಮುಖನಾದ ಬಳಿಕ‌ ಆತನನ್ನು ಅವರ ಸಂಬಂಧಿಕರ ಮನೆಗೆ ಬಿಡಲು ಕೊಲ್ಕತ್ತಾಗೆ ತೆರಳಿದಾಗ ಆತ ಬಾಂಗ್ಲಾದೇಶದ ಡಾಕಾ ವ್ಯಕ್ತಿ ಎಂದು ತಿಳಿಯಿತು ಎಂದು ಹೇಳಿದರು.

ನಮ್ಮ ಪುನರ್ವಸತಿ ತಾಣಕ್ಕೆ ರಾಜ್ಯವಲ್ಲದೇ, ಹರಿಯಾಣ, ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ಹಲವು ರಾಜ್ಯಗಳಿಂದ ಇಲ್ಲಿ ಬಂದು ತಪಾಸಣೆಗೆ ಒಳಗಾಗಿದ್ದಾರೆ. ಅಲ್ಲದೇ ಗುಣಮುಖರಾಗಿ ತೆರಳಿದ್ದಾರೆ, ಬೇರೆ ರಾಜ್ಯದಿಂದ ಬರಲು ಹೋಗಲು ಬಡತನ ಎದುರಾದ ಸಂದರ್ಭದಲ್ಲಿ ಅವರಿಗೆ ನಮ್ಮ ಟ್ರಸ್ಟ್ ಮೂಲಕವೇ ಹಣದ ವ್ಯವಸ್ಥೆ ಮಾಡಿ ಅವರ ಆರೋಗ್ಯದ ಕಾಳಜಿ ವಹಿಸಿದೆ ಎಂದು ಅವರು ತಿಳಿಸಿದರು.

ಈವರೆಗೂ 139 ಮಂದಿಗೆ ನಮ್ಮ ಚಿತ್ತಧಾಮದಲ್ಲಿ ಚಿಕಿತ್ಸೆ ನೀಡಿದ್ದೇವೆ. ಅದರಲ್ಲಿ 38 ಮಂದಿ ಈಗ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಗುಣಮುಖರಾಗಿ ತೆರಳಿದ್ದಾರೆ ಎಂದು ಅವರು ಹೇಳಿದರು.

ಈ ಬಾರಿಯ ಧ್ಯೇಯ ವಾಕ್ಯದಂತೆ ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ ಇದಾಗಿದೆ ಎಂದರು.

ವಕೀಲ ರವಿಶಂಕರ್ ಮಾತನಾಡಿ, ಪ್ರಪಂಚದ ದೊಡ್ಡ ದೊಡ್ಡ ವಿಜ್ಞಾನಿಗಳಾಗಿ‌ ಸೇವೆ ಸಲ್ಲಿಸಿದ ಕೆಲ ವಿಜ್ಞಾನಿಗಳು ಸಮಾಜದಲ್ಲಿ ಮಾನಸಿಕ ಖಿನ್ನತೆ ಹೊಂದಿದ್ದರು ಎಂದು ತಿಳಿಸಿದರು.

ಪಡುವಲು ವಿರಕ್ತ ಮಠದ ಮಹದೇವ ಸ್ವಾಮೀಜಿ ಮಾತನಾಡಿ ''''''''ಒಬ್ಬ ಮನುಷ್ಯ ಮಾನಸಿಕವಾಗಿ ಖಿನ್ನತೆ ಒಳಗಾದ ವ್ಯಕ್ತಿಯನ್ನು ನಮ್ಮ ಸಮಾಜ ಬೇರೆ ಮನೋಭಾವದಲ್ಲಿ ನೋಡಲು ಆರಂಭಿಸುತ್ತಾರೆ, ಅದಾಗಬಾರದು, ಅವರು ಸಹ ಮನುಷ್ಯರು, ಅವರಿಗೆ ಚಿಕಿತ್ಸೆ ನೀಡಿಸುವಂತಹ ಕೆಲಸಕ್ಕೆ ಭಾಗಿಯಾಗಬೇಕು'''''''' ಎಂದರು.

ಇದೇ ಸಂದರ್ಭದಲ್ಲಿ ಚಿತ್ತಧಾಮದ ಸಮಾಜ ಸೇವಕ ಲೋಕೇಶ್‌ರವರಿಗೆ ಜೀವನ ನಿರ್ವಹಣೆಗಾಗಿ ಚಿತ್ತಧಾಮದ ವತಿಯಿಂದ ಹಸುವೊಂದನ್ನು ನೀಡಲಾಯಿತು.

ವಿವಿಧ ಆಟೋಟಗಳಲ್ಲಿ ಜಯಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.

ಗಿರಿಜನ‌ ಮುಖಂಡ ಪದ್ಮಶ್ರೀ ಪುರಸ್ಕೃತ ಸೋಮಣ್ಣ, ಮನೋರೋಗ ತಜ್ಞರಾದ ಡಾ. ಸಂಜೀವ್ ಜೈನ್, ಡಾ. ಮುರುಳಿ, ಆರಕ್ಷಕ ಉಪ ನಿರೀಕ್ಷಕ ಬಿ. ಪ್ರಕಾಶ್, ಪುರಸಭಾ ಸದಸ್ಯ ಲೋಕೇಶ್, ವಕೀಲರಾದ ಕೃಷ್ಣೇಗೌಡ, ಸರಸ್ವತಿ, ಮಹೇಶ್, ಮುಖಂಡ ದೊಡ್ಡನಾಯಕ, ಪಳನಿಸ್ವಾಮಿ, ಶಿವಮ್ಮ ದೇವರಾಜು, ಸಣ್ಣಮ್ಮ, ಕವಿತಾ, ಸುನೀತಾ, ರಮೇಶ್, ಚಿತ್ತಧಾಮದ ಸಿಬ್ಬಂದಿ ಮಹದೇವಸ್ವಾಮಿ, ಮಂಜುಳಾ ಇದ್ದರು.