ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ತಾಲೂಕಿನ ಶ್ಯಾನುಭೋಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 10 ಮಂದಿ ಗೆಲುವು ಸಾಧಿಸಿದ್ದಾರೆ.ಸಂಘದ ಐದು ವರ್ಷಗಳ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನ ನಡೆಯಿತು. 78 ಮತಗಳ ಪೈಕಿ 65 ಮತಗಳು ಕ್ರಮಬದ್ದವಾಗಿದ್ದವು. 13 ಮತಗಳು ತಿರಸ್ಕೃತವಾಗಿದ್ದವು.
ಸಂಘದ 12 ನಿರ್ದೇಶಕರ ಪೈಕಿ 10 ಜನ ಜೆಡಿಎಸ್ ಬೆಂಬಲಿತರು, 2 ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದು, ಒಟ್ಟಾರೆ ಶ್ಯಾನುಭೋಗನಹಳ್ಳಿ ಎಂಪಿಸಿಎಸ್ ಜೆಡಿಎಸ್ ಬೆಂಬಲಿತರ ಪಾಲಾಗಿದೆ.ಸಾಮಾನ್ಯ ವರ್ಗದಿಂದ ಶಿವರಾಮು (47 ಮತ), ತಿಮ್ಮೇಗೌಡ (43 ಮತ), ಶ್ರೀಕಾಂತ್ (39 ಮತ), ಚಿನ್ನಗಿರಿಗೌಡ (36 ಮತ), ನಾಗಪ್ಪ (36 ಮತ), ಎಸ್.ಪಿ.ಜಗದೀಶ್ (35 ಮತ), ರಾಜೇಶ್ ಎಸ್.ಪಿ (33 ಮತ), ಮಹಿಳಾ ಮೀಸಲಿನಿಂದ ಇಂದ್ರಮ್ಮ (49 ಮತ), ಗೌರಮ್ಮ (36 ಮತ), ಹಿಂದುಳಿದ ವರ್ಗ ಬಿ. ಮೀಸಲಿನಿಂದ ಸತೀಶ್ (40 ಮತ), ಹಿಂದುಳಿದ ಎ. ಮೀಸಲಿನಿಂದ ಸ್ವಾಮಿ (36 ಮತ) ಪರಿಶಿಷ್ಟ ಜಾತಿ ಮೀಸಲಿನಿಂದ ಪದ್ದಯ್ಯ (41 ಮತ) ಪಡೆದು ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಎಸ್.ನಾಗೇಶ್ ಫಲಿತಾಂಶ ಘೋಷಿಸಿದರು.
ಗ್ರಾಪಂ ಸದಸ್ಯ ಕೃಷ್ಣೇಗೌಡ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳು ಗ್ರಾಮೀಣ ಭಾಗದ ಜನರ ಬದುಕಿನ ಆರ್ಥಿಕ ಪ್ರಗತಿಯಲ್ಲಿ ಪ್ರಮುಖಪಾತ್ರ ವಹಿಸಿವೆ. ಅಂತಹ ಸಂಘಕ್ಕೆ ಶ್ಯಾನುಭೋಗನಹಳ್ಳಿ ಹಾಲು ಉತ್ಪಾದಕ ಸದಸ್ಯರು ಬುಧವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 10 ನಿರ್ದೇಶಕರನ್ನು ಆಯ್ಕೆ ಮಾಡಿದ್ದಾರೆ. ಎಲ್ಲರೂ ಸಹಕಾರ ಮನೋಭಾವನೆಯಿಂದ ಸಂಘವನ್ನು ಮತ್ತಷ್ಟು ಅಭಿವೃದ್ದಿಯತ್ತ ಕೊಂಡೊಯ್ದು, ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸದಸ್ಯರಿಗೆ ಬೋನಸ್ ವಿತರಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಘವನ್ನು ಮಾದರಿಯಾಗಿ ನಡೆಸಿಕೊಂಡು ಹೋಗುವಂತೆ ತಿಳಿಸಿದರು.ಗ್ರಾಪಂ ಮಾಜಿ ಅಧ್ಯಕ್ಷ ಮಹದೇವಯ್ಯ ಮಾತನಾಡಿ, ಎಂಪಿಸಿಎಸ್ ಚುನಾವಣೆಯಲ್ಲಿ ಜೆಡಿಎಸ್ ಮುಖಂಡರು ಒಗ್ಗಟ್ಟು ಮತ್ತು ಜೆಡಿಎಸ್ ಪಕ್ಷ ಗಟ್ಟಿಯಾಗಿದೆ ಎಂಬುದನ್ನು ಶ್ಯಾನುಭೋಗನಹಳ್ಳಿ ಹಾಲು ಉತ್ಪಾದಕರು ಉತ್ತಮ ಫಲಿತಾಂಶ ನೀಡಿ ತೋರಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಫಲಿತಾಂಶಕ್ಕೆ ಸಹಕಾರ ನೀಡಿದ ಮಾಜಿ ಶಾಸಕ ಎ.ಮಂಜುನಾಥ್, ಕೂಟಗಲ್ ಹೋಬಳಿ ಅಧ್ಯಕ್ಷ ಶಿವಣ್ಣ ಅವರಿಗೆ ಕೃತಜ್ಙತೆ ಸಲ್ಲಿಸುತ್ತೇನೆ ಎಂದರು.
ಶ್ಯಾನುಭೋಗನಹಳ್ಳಿ ಗ್ರಾಪಂ ಸದಸ್ಯ ಮಂಜುನಾಥ್, ಮುಖಂಡರಾದ ಅರುಣ್ ಸಿಂಗ್, ಚಿನ್ನಗಿರಿಗೌಡ, ವೆಂಕಟಪ್ಪ, ದರ್ಶನ್ ,ಸಂಘದ ಸಿಇಒ ಪ್ರೇಮ್ ಕುಮಾರ್ ಮತ್ತಿತರರಿದ್ದರು.