ಸಾರಾಂಶ
ಈಕೆ ಸ್ಪಾರಿಂಗ್ ಸ್ಪರ್ಧೆಯಲ್ಲಿ 1 ಚಿನ್ನ, ಪ್ಯಾಟರ್ನ್ ವಿಭಾಗದಲ್ಲಿ 1 ಬೆಳ್ಳಿ ಹಾಗೂ ವಾರಿಯರ್ ಸ್ಪಾರಿಂಗ್ ವಿಭಾಗದಲ್ಲಿ 1 ಕಂಚು ಪದಕವನ್ನು ಪಡೆದುಕೊಂಡಿದ್ದಾಳೆ.
ಕನ್ನಡಪ್ರಭ ವಾರ್ತೆ ರಾಮನಗರ
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ಮತ್ತು ಚೈತ್ರಾ ದಂಪತಿ ಪುತ್ರಿ ಶಾನ್ವಿ ಸತೀಶ್ ಟೇಕ್ವಾಂಡೋ ಸ್ಪರ್ಧೆಯಲ್ಲಿ ಮತ್ತೊಮ್ಮೆ ಸಾಧನೆ ಮೆರೆದಿದ್ದಾಳೆ.ಮಲೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ಶಾನ್ವಿ ಭಾರತವನ್ನು ಪ್ರತಿನಿಧಿಸಿ ಚಿನ್ನ, ಬೆಳ್ಳಿ ಹಾಗೂ ಕಂಚು ಪದಕಗಳನ್ನು ಪಡೆದು ದೇಶ, ರಾಜ್ಯ ಹಾಗೂ ಜಿಲ್ಲೆಯ ಕೀರ್ತಿ ಬೆಳೆಗಿಸಿದ್ದಾಳೆ.
ಮೇ 1ರಿಂದ 4ರವರೆಗೆ ಮಲೇಷ್ಯಾದ ಪ್ಯಾನಾಸೋನಿಕ್ ರಾಷ್ಟ್ರೀಯ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ಅಂತಾರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆ ನಡೆಯಿತು. 7 ರಿಂದ 8 ವರ್ಷ ವಯೋಮಾನದ 23ರಿಂದ 27 ತೂಕದ ವಿಭಾಗದಲ್ಲಿ ಶಾನ್ವಿ ಭಾರತ ತಂಡದಲ್ಲಿ ಭಾಗವಹಿಸಿದ್ದಳು. ಈಕೆ ಸ್ಪಾರಿಂಗ್ ಸ್ಪರ್ಧೆಯಲ್ಲಿ 1 ಚಿನ್ನ, ಪ್ಯಾಟರ್ನ್ ವಿಭಾಗದಲ್ಲಿ 1 ಬೆಳ್ಳಿ ಹಾಗೂ ವಾರಿಯರ್ ಸ್ಪಾರಿಂಗ್ ವಿಭಾಗದಲ್ಲಿ 1 ಕಂಚು ಪದಕವನ್ನು ಪಡೆದುಕೊಂಡಿದ್ದಾಳೆ. ಸ್ಪಾರಿಂಗ್ ವಿಭಾಗದಲ್ಲಿ ಆರಂಭದಿಂದಲೂ ಮುನ್ನಡೆ ಸಾಧಿಸಿದ ಶಾನ್ವಿಗೆ ಅಂತಿಮ ಪಂದ್ಯದಲ್ಲಿ ಮಲೇಷ್ಯಾ ಸ್ಪರ್ಧಾಳು ಉತ್ತಮ ಪೈಪೋಟಿ ನೀಡಿದ್ದಳು. ಅಂತಿಮವಾಗಿ ಶಾನ್ವಿ ಸತೀಶ್‌ಗೆ ಚಿನ್ನದ ಪದಕ ಒಲಿದಿದೆ. ಶಾನ್ವಿಗೆ ಭಾರತ ತಂಡದ ತರಬೇತುದಾರರಾದ ಪ್ರದೀಪ್ ಮತ್ತು ಬಾಲರಾಜನ್ ತರಬೇತಿ ನೀಡುತ್ತಿದ್ದಾರೆ. ಭಾರತ, ಇಂಡೋನೇಷ್ಯಾ, ಬಾಂಗ್ಲಾದೇಶ, ಮಾಯನ್ಮಾರ್, ಸಿರಿಯಾ ಹಾಗೂ ಮಲೇಷ್ಯಾ ರಾಷ್ಟ್ರಗಳ 1500ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಭಾರತ ತಂಡದಿಂದ 65 ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಈ ಪೈಕಿ ಶಾನ್ವಿ ಸತೀಶ್ ಒಬ್ಬರಾಗಿದ್ದರು. ಈ ಹಿಂದೆ ದುಬೈ ಮತ್ತು ಉಜ್ಬೇಕಿಸ್ತಾನದಲ್ಲಿ ನಡೆದ ಟೇಕ್ವಾಂಡೋ ಸ್ಪರ್ಧೆಗಳಲ್ಲಿ ಮತ್ತು ಏಶಿಯನ್ ಚಾಂಪಿಯನ್ ಶಿಪ್ ಸ್ಪರ್ಧೆಗಳಲ್ಲೂ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದಿದ್ದಳು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಈಕೆಯ ಸಾಧನೆಗೆ ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಜಿಲ್ಲಾ ಪಂಚಾಯತ್ ಸಿಇಒ ಅನ್ಮೋಲ್ ಜೈನ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಹಾಗೂ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಪ್ರಮುಖರು ಅಭಿನಂದನೆ ತಿಳಿಸಿದ್ದಾರೆ.