ಮಕ್ಕಳನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಿ: ಆರ್.ಎ. ಚೇತನ್‌ ರಾಮ್ ಸಲಹೆ

| Published : Aug 24 2025, 02:00 AM IST

ಮಕ್ಕಳನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಿ: ಆರ್.ಎ. ಚೇತನ್‌ ರಾಮ್ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಇದೇ ವೇಳೆ 2025- 26ನೇ ಸಾಲಿಗೆ ಪೋಷಕರ ಸಂಘದ ಅಧ್ಯಕ್ಷರಾಗಿ ಪಿ. ಸುರೇಶ್, ಕಾರ್ಯದರ್ಶಿಯಾಗಿ ಉಷಾ ರವಿಕಾಂತ್, ಸದಸ್ಯರಾಗಿ ನಂದೀಶ್, ಚಂದ್ರಿಕಾದೇವಿ, ಸರ್ವಮಂಗಳಾ ಅವರನ್ನು ಆಯ್ಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಮಕ್ಕಳನ್ನು ಈ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ಸಂಪೂರ್ಣ ಜವಾಬ್ದಾರಿ ಪೋಷಕರದೇ ಆಗಿದೆ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ಆರ್.ಎ. ಚೇತನ್‌ ರಾಮ್ ತಿಳಿಸಿದರು.ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ 2025- 26ನೇ ಸಾಲಿನ ಪೋಷಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಕಾಲೇಜಿನ ಒಳಗೆ ಮಾತ್ರ ಮಕ್ಕಳನ್ನು ಗಮನಿಸಿಕೊಳ್ಳಲು ಸಾಧ್ಯ. ಆದರೆ, ತಂದೆ- ತಾಯಿಗಳು ತಮ್ಮ ಮಕ್ಕಳ ಪ್ರತಿ ಚಲನ- ವಲನಗಳನ್ನು ಅರಿತಿರುತ್ತಾರೆ. ಹೀಗಾಗಿ, ಪೋಷಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಬದ್ಧತೆಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದರು.ಮಕ್ಕಳು ತಪ್ಪು ಮಾಡಿದರೇ, ಅವರನ್ನು ಆರಂಭದಲ್ಲೇ ತಿದ್ದುವುದು ಬಹಳ ಮುಖ್ಯ. ಒಮ್ಮೆ ಮಾಡಿದ ತಪ್ಪುಗಳು ಮಕ್ಕಳ ವ್ಯಕ್ತಿತ್ವವೇ ಆಗಿಬಿಟ್ಟರೆ ಅವರನ್ನು ಬದಲಾಯಿಸಲು ಕಷ್ಟ ಸಾಧ್ಯ. ಹೀಗಾಗಿ, ಮಕ್ಕಳಿಗೆ ಆರಂಭದಿಂದಲೇ ತಿದ್ದುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ಹೇಳಿದರು.ಭವಿಷ್ಯದ ಬಗ್ಗೆ ಯಾರಿಗೂ ಕಾಳಜಿ ಇಲ್ಲದಂತಾಗಿದೆ. ನಾವು ಕೆಟ್ಟಕಾಲದಲ್ಲಿ ಬದುಕುತ್ತಿದ್ದೇವೆ. ಪ್ರಪಂಚದಲ್ಲೇ ಅತೀ ಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮ ಭಾರತ. ಹೀಗಾಗಿ, ಸ್ವ-ಅಭಿವೃದ್ಧಿಯ ಜೊತೆಗೆ ದೇಶದ ಅಭಿವೃದ್ಧಿಗೆ ಯುವಕರ ಶಕ್ತಿಯನ್ನು ಬಳಸಿಕೊಳ್ಳಬೇಕು. ಆ ಶಕ್ತಿ ಯುವಕರಿಗೆ ಸಿಗಬೇಕಾದರೆ, ಅದಕ್ಕೆ ಪೂರಕವಾದ ಮೌಲ್ಯಾಧಾರಿತ ಕೌಶಲ್ಯಗಳ ಜೊತೆಗೆ ಮಾನವೀಯತೆಯನ್ನು ಬೆಳೆಸಬೇಕಾಗಿದೆ ಎಂದರು.ಆದರೆ, ಶೇ.60 ರಷ್ಟು ಮಕ್ಕಳು ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ಹೊಂದಿಲ್ಲ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಜಗತ್ತು ವಿಫಲವಾಗುವಂತಹ ಶಿಕ್ಷಣ ಕೊಡುತ್ತಿರುವುದು ನಮ್ಮಗಳ ವೈಫಲ್ಯ. ನಿರುದ್ಯೋಗ ದೇಶದಲ್ಲಿ ತಾಂಡವವಾಡುತ್ತಿದೆ. ಕೆಲಸ ಕೊಡಿ ಎಂಬುದಕ್ಕಿಂತ, ಕೆಲಸ ತೆಗೆದುಕೊಳ್ಳುವ ಹಾಗೇ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಗಳು ತಯಾರು ಮಾಡಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಇದಕ್ಕೆ ಪೂರಕವಾದ ಅಧ್ಯಯನ ಶೀಲತೆ, ಪರೀಕ್ಷಾಕೌಶಲ್ಯ, ಆತ್ಮವಿಶ್ವಾಸ, ನೈಪುಣ್ಯವರ್ಧನೆ ಬೆಳೆಸಬೇಕಾಗಿದೆ. ಇದರಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಪ್ರಧಾನವಾಗಿರುತ್ತದೆ. ಮಕ್ಕಳು ತಮ್ಮ ಪೋಷಕರನ್ನೇ ನೋಡಿ ಬೆಳೆಯುವುದು. ಹೀಗಾಗಿ, ಪೋಷಕರು ತಮ್ಮ ಮಕ್ಕಳ ಮುಂದೆ ಆದರ್ಶಮಯವಾಗಿ ಬದುಕಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಪೋಷಕರ ಸಂಘದ ಅಧ್ಯಕ್ಷೆ ಕೆ.ವಿ. ಸೌಮ್ಯಾ ಮಾತನಾಡಿ, ನಾವು ಮಕ್ಕಳ ಜೊತೆ ಕನಿಷ್ಠ ಅರ್ಧ ಗಂಟೆ ಕಳೆಯುವುದು ಮತ್ತು ಗಮನಿಸುವುದು ತುಂಬಾ ಮುಖ್ಯ. ನಾವು ಮಕ್ಕಳ ಜೊತೆ ಸ್ನೇಹಿತರಾಗಿ ಕಾಣುವುದು ಅವರು ನಮ್ಮೊಂದಿಗೆ ಪಾರದರ್ಶಕವಾಗಿ ಇರುವಂತೆ ಮಾಡುತ್ತದೆ. ಮಕ್ಕಳಿಗೆ ಒತ್ತಡ ಹೇರಬೇಡಿ ಎಂದರು. ಹೊಸ ಪದಾಧಿಕಾರಿಗಳ ಆಯ್ಕೆ:ಇದೇ ವೇಳೆ 2025- 26ನೇ ಸಾಲಿಗೆ ಪೋಷಕರ ಸಂಘದ ಅಧ್ಯಕ್ಷರಾಗಿ ಪಿ. ಸುರೇಶ್, ಕಾರ್ಯದರ್ಶಿಯಾಗಿ ಉಷಾ ರವಿಕಾಂತ್, ಸದಸ್ಯರಾಗಿ ನಂದೀಶ್, ಚಂದ್ರಿಕಾದೇವಿ, ಸರ್ವಮಂಗಳಾ ಅವರನ್ನು ಆಯ್ಕೆ ಮಾಡಲಾಯಿತು.ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಟಿ. ವಿಜಯಲಕ್ಷ್ಮಿ ಮುರಳೀಧರ್, ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಸ್.ಆರ್. ರಮೇಶ್, ಪೋಷಕರ ಸಂಘದ ಮರೀಗೌಡ ಇದ್ದರು. ಅಕ್ಷೆಭ್ಯ ತಂಡದವರು ಪ್ರಾರ್ಥಿಸಿದರು.ಡಾ. ವಿನೋದಮ್ಮ ಸ್ವಾಗತಿಸಿದರು. ಡಾ. ಪೂರ್ಣಿಮಾ ವಂದಿಸಿದರು. ಡಾ.ಎಚ್.ಆರ್. ತಿಮ್ಮೇಗೌಡ ನಿರೂಪಿಸಿದರು.