ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಿ, ಉನ್ನತ ಸ್ಥಾನದಲ್ಲಿದ್ದಾಗ ಸಮಾಜ ಹಾಗೂ ಮಠ ಮಾಡಿದ ಸೇವೆಯನ್ನು ಮರೆಯದೇ ಬೇರೆಯವರಿಗೆ ನಿಮ್ಮ ಕೈಲಾದ ಸೇವೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ಕರೆ ನೀಡಿದರು.ನಗರದ ಹೊರ ವಲಯದ ಭೋವಿ ಗುರು ಪೀಠದಲ್ಲಿ ಶುಕ್ರವಾರ ನಡೆದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ 16ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 27ನೇ ಲಾಂಛನ ದೀಕ್ಷಾ ಮಹೋತ್ಸವ, 40ನೇ ವಸಂತೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ವಧೂ-ವರರ ಸಮಾವೇಶ, ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಇಂದಿನ ದಿನಮಾನದಲ್ಲಿ ಹುಟ್ಟು ಹಬ್ಬವನ್ನು ಕೇಕ್ ಕಟ್ ಮಾಡಿ ಸಿಹಿ ಹಂಚಿದರೆ ನಮ್ಮ ಇಮ್ಮಡಿ ಶ್ರೀಗಳು ತಮ್ಮ ಹುಟ್ಟು ಹಬ್ಬದ ದಿನದಂದು ಪ್ರತಿಭಾವಂತ ಮಕ್ಕಳನ್ನು ಕರೆಯಿಸಿ ಅವರಿಗೆ ವಿದ್ಯಾರ್ಥಿ ವೇತನ ಹಾಗೂ ಸನ್ಮಾನ ಮಾಡಿ ಶಿಕ್ಷಣಕ್ಕೆ ಸಹಾಯವಾಗುವ ರೀತಿಯಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷ ಉಂಟು ಮಾಡಿದೆ ಎಂದರು.
ನಮ್ಮ ಸಮಾಜದ ಬಂಧುಗಳು ಶಿಕ್ಷಣಕ್ಕೆ ಹೆಚ್ಚಿನ ಅದ್ಯತೆ ನೀಡಬೇಕಿದೆ. ಯಾವಾಗ ನಾವು ಶಿಕ್ಷಣವಂತರಾಗುತ್ತೇವೆ ಅಂದು ನಮ್ಮ ಸಮಾಜ ಅಭೀವೃದ್ಧಿಯಾಗುತ್ತದೆ. ಅಂಬೇಡ್ಕರ್ ಅವರು ನಿಡಿದ ಸಂದೇಶದಂತೆ ಶಿಕ್ಷಣ, ಹೋರಾಟ ಸಂಘಟನೆಯಿಂದ ಮಾತ್ರ ನಮ್ಮ ಅಭೀವೃದ್ಧಿಯಾಗಲು ಸಾಧ್ಯವಿದೆ ಎಂದಿದ್ದಾರೆ. ಇದನ್ನು ನಾವುಗಳು ನಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕಿದೆ. ನಾನು ಸಹಾ ಸಮಾಜದ ಸಂಘಟನೆಯಿಂದಲೇ ರಾಜಕೀಯ ಜೀವನವನ್ನು ಪ್ರಾರಂಭ ಮಾಡಲಾಗಿದೆ. ಈ ಹಿಂದೆ ನಮ್ಮಲ್ಲಿ ಸಂಘಟನೆ ಇರಲಿಲ್ಲ ನಮ್ಮ ಬೆನ್ನಿಗೆ ಯಾವ ಮಠಗಳು ಸಹಾ ಇರಲಿಲ್ಲ, ಆಗ ಅರಿವು, ಹೋರಾಟ, ಶಿಕ್ಷಣದ ಕೊರತೆ ಇತ್ತು, ಈ ಹಿನ್ನಲೆಯಲ್ಲಿ ಮಠವನ್ನು ಸ್ಥಾಪನೆ ಮಾಡುವುದರ ಮೂಲಕ ಸಂಘಟಿತರಾಗಲು ಮುಂದಾಗಿದ್ದೇವೆ. ಈ ಹಿಂದೆ ನಮ್ಮನ್ನು ಯಾರೂ ಸಹಾ ಕೇಳುವವರಿಲ್ಲ, ಆದರೆ ಈಗ ಸಮಾಜ ಸಂಘಟನೆಯ ಜತೆಗೆ ಶಿಕ್ಷಣದ ಅರಿವು ಸಹಾ ಆಗುತ್ತಿದೆ ಎಂದರು.ಭೋವಿ ಸಮಾಜ ಸಂಘಟನೆಯಾಗುತ್ತಿದೆ ಎಂಬ ನಂಬಿಕೆ ಬೇರೆ ಸಮುದಾಯದಲ್ಲಿಯೂ ಕಂಡು ಬರುತ್ತಿದೆ, ಬೇರೆ ಸಮಾಜವನ್ನು ಪ್ರೀತಿ ವಿಶ್ವಾಸದಿಂದ ನೋಡಿದರೆ ಅವರು ಸಹಾ ನಮ್ಮನ್ನು ಅವರು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಇದರಿಂದ ಚುನಾವಣೆಯಲ್ಲಿ ನಮ್ಮ ಸಮುದಾಯದವರು ಗೆಲ್ಲುತ್ತಿದ್ದಾರೆ ಇದ್ದೆಲ್ಲಾ ಬೇರೆಯವರ ಸಮಾಜದ ಕಾಣಿಕೆಯಾಗಿದೆ ಎಂದು ಸಚಿವರು ಶಿವರಾಜ್ ತಂಗಡಗಿ ತಿಳಿಸಿದರು. ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಭೋವಿ ಸಮಾಜದ ಶ್ರೀಗಳು ಸಮಾಜದ ಯಾವುದೇ ಕಾರ್ಯಕ್ರಮವಾದರೂ ತಪ್ಪದೆ ಭಾಗವಹಿಸುತ್ತಾರೆ. ಭಕ್ತರ ಮನೆಗಳಿಗೆ ಭೇಟಿ ನೀಡುವುದರ ಮೂಲಕ ಹಗಲು ರಾತ್ರಿ ಎನ್ನದೆ ಕಾಲಿಗೆ ಚಕ್ರ ಕಟ್ಟಿಕೊಂಡು ಸಮಾಜವನ್ನು ಸಂಘಟಿಸುತ್ತಿದ್ದಾರೆ. ಭೋವಿ ಸಮಾಜ ಇಷ್ಟು ಬಲಿಷ್ಠವಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ, ಬೆಳೆಯಲು ಶ್ರೀಗಳ ಪರಿಶ್ರಮ ಕಾರಣವಾಗಿದೆ. ಗುರುಗಳು ನಮಗೆ ಏನು ಮಾಡಿಲ್ಲ ಎನ್ನದೆ ಗುರುಗಳಿಗಾಗಿ ನಾವು ಏನು ಮಾಡಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಭೋವಿ ಸಮಾಜವನ್ನು ಒಂದು ಕಡೆಯಲ್ಲಿ ಕೂಡಿಸಬೇಕೆಂಬ ದೃಷ್ಟಿಯಿಂದ ಅವರ ಹುಟ್ಟು ಹಬ್ಬದ ನೆಪದಲ್ಲಿ ನಾವೆಲ್ಲಾ ಸಂಘಟಿತರಾಗುತ್ತಿದ್ದೇವೆ ಎಂದರು.
ಸಮಾರಂಭದ ಸಾನ್ನುಧ್ಯ ವಹಿಸಿದ್ದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ಯಾರಿಗೆ ಅಕ್ಷರ ಪ್ರಜ್ಞೆ ಇದಯೋ ಅವರು ಇತಿಹಾಸವನ್ನು ಬರೆದುಕೊಂಡಿದ್ದಾರೆ. ಯಾವ ಸಮುದಾಯಗಳು ಕಾಯಕ ಶ್ರಮವನ್ನು ನಂಬಿ ಬೆವರನ್ನು ಸುರಿಸುತ್ತಾ ಅಕ್ಷರದ ಪ್ರಜ್ಞೆ ಕಳೆದುಕೊಂಡಿದ್ದರೂ ಅವರಿಗೆ ಭವ್ಯವಾದ ಇತಿಹಾಸ ಇದ್ದರೂ ಸಹಾ ಇತಿಹಾಸದ ಪುಟಗಳಲ್ಲಿ ಸೇರಿಕೊಳ್ಳಲಾಗಿಲ್ಲ, ಕೋಟೆ, ಡ್ಯಾಂ, ಕಟ್ಟಡಗಳನ್ನು ನಿರ್ಮಾಣ ಮಾಡಿದವರು ವಡ್ಡರೇ ಆಗಿದ್ದರೂ ಸಹಾ ಇತಿಹಾಸವನ್ನು ಉಳಿಸಿಕೊಳ್ಳಲು ಬರೆಸಿಕೊಳ್ಳಲಾಗಿಲ್ಲ, ನಮ್ಮ ಇತಿಹಾಸವನ್ನು ನಾವೇ ಬರೆಯಬೇಕಾದರೆ ನಾವು ಅಕ್ಷರದ ವಾರಸುದಾರಿಕೆ ಪಡೆಯವುದು ಅಗತ್ಯವಾಗಿದೆ ಎಂದರು.ಇದೇ ವೇಳೆ ದೇವರಾಜು ಅರಸ್ ವಿದ್ಯಾ ಸಂಸ್ಥೆಯ ಸಿಇಒ ರಘುಚಂದನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜ ಮುಖಂಡರಾದ ರವಿ ಮಾಕಳಿ, ಆನಂದಪ್ಪ, ಮಂಜುನಾಥ ಪ್ರಸಾದ್, ಸಂಸದ ತುಕಾರಂ, ಭೋವಿ ಅಭೀವೃದ್ಧಿ ನಿಗಮದ ಅಧ್ಯಕ್ಷರಾದ ರವಿಕುಮಾರ್, ಸಾಹಿತಿಗಳಾದ ಸಿದ್ದರಾಮಯ್ಯ, ಮಾಜಿ ಶಾಸಕರಾದ ನಾರಾಯಣಸ್ವಾಮಿ, ಮುನಿರಾಮಪ್ಪ, ನೇರ್ಲಗುಂಟೆ ರಾಮಪ್ಪ, ಚಿಕ್ಕಂದವಾಡಿ ತಿಪ್ಪೇಸ್ವಾಮಿ, ಜಯ್ಯಣ್ಣ, ಸೇರಿದಂತೆ ಇತರರು ಭಾಗವಹಿಸಿದ್ದರು.