ಸಾರಾಂಶ
ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಇಲ್ಲಿಗೆ ಸಮೀಪದ ಹಂಡ್ಲಿ ಕ್ಲಸ್ಟರ್ ವ್ಯಾಪ್ತಿಯ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾರದ ಪೂಜೆ ಹಾಗೂ 2024-25ನೇ ಸಾಲಿನ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಶಾಲಾ ಎಸ್‍ಡಿಎಂಸಿ, ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ಶಾಲಾ ನೂತನ ಕೊಠಡಿಯಲ್ಲಿ ಶಾರದ ಪೂಜೆಯನ್ನು ಹಮ್ಮಿಕೊಳ್ಳಲಾಯಿತು. ಶಾರದ ಪೂಜೆಯಲ್ಲಿ ಗ್ರಾಮದ ಮಹಿಳೆಯರು, ಮಹಿಳಾ ಪೋಷಕರು ಕಳಸಹೊತ್ತು ಮೆರವಣಿಗೆ ಮೂಲಕ ಆಗಮಿಸಿ ಶಾರದ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾರದ ಪೂಜೆಯಲ್ಲಿ ಶಾಲಾ ಮಕ್ಕಳು, ಶಿಕ್ಷಕರು, ಪೋಷಕರು, ಗ್ರಾಮಸ್ಥರು, ದಾನಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.
ಶಾರದ ಪೂಜೆ ಬಳಿಕ ನಡೆದ 2024-25ನೇ ಸಾಲಿನ ವಿಶೇಷ ದಾಖಲತಿ ಆಂದೋಲನ ಕಾರ್ಯಕ್ರಮಕ್ಕೆ ಹಂಡ್ಲಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ.ದಿನೇಶ್ ಚಾಲನೆ ನೀಡಿದರು.ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಬಿಂದು ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರ ಎಂ.ಎಸ್.ಯೋಗೇಶ್, ಪ್ರಮುಖರಾದ ಎಂ.ಎಂ.ಶಶಿಕುಮಾರ್, ನಿಡ್ತ ಗ್ರಾ.ಪಂ.ಅಧ್ಯಕ್ಷ ಎಚ್.ಡಿ.ಮನು, ಪಿಡಿಒ ಹರೀಶ್, ಪ್ರಮುಖರಾದ ವೇಧಕುಮಾರ್, ಶಾಲಾ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್, ಸಹ ಶಿಕ್ಷಕರು, ಎಸ್‍ಡಿಎಂಸಿ ಸದಸ್ಯರು, ಗ್ರಾಮಸ್ಥರು, ದಾನಿಗಳು ಹಾಜರಿದ್ದರು.
ಶಾರದ ಪೂಜೆ ಮತ್ತು ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮದ ಪ್ರಯುಕ್ತ ದಾನಿಗಳು ಗ್ರಾಮಸ್ಥರಿಗೆ ಅನ್ನಸಂತರ್ಪಣೆ ಏರ್ಪಡಿಸಿದರು. ಶಾಲಾ ಮಕ್ಕಳಿಂದ ಲಘು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.