ಸಾರಾಂಶ
ಹೊನ್ನಾವರ: ಪಟ್ಟಣದ ರಥಬೀದಿಯಲ್ಲಿರುವ ಶಾರದಾಂಬಾ ಹಾಗೂ ಚಂದ್ರಮೌಳೀಶ್ವರ ದೇವಸ್ಥಾನದ ನವೀಕೃತ ಶಿಲಾ ಮಂದಿರ ಲೋಕಾರ್ಪಣೆ, ದೇವರ ಪ್ರತಿಷ್ಠಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ನವೀಕೃತ ಶಿಲಾಮಯ ಗರ್ಭಗುಡಿಯಲ್ಲಿ ಶಾರದಾಂಬಾ ದೇವಿ, ಚಂದ್ರಮೌಳೀಶ್ವರ ಪುನಃ ಪ್ರತಿಷ್ಠಾ ಕುಂಭಾಭಿಷೇಕ, ಶಿಖರ ಕಲಶಾಭಿಷೇಕ ಮತ್ತು ಪೂಜೆ ನಡೆಸಿದರು. ಶಂಕರಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ನಡೆಯಿತು.
ನವೀಕೃತ ಶಿಲಾಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ದೇವರನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡು ಪ್ರಾರ್ಥನೆ ಸಲ್ಲಿಸಿದರು.ಶೃಂಗೇರಿಯ ವಿಧುಶೇಖರ ಭಾರತೀ ಸ್ವಾಮೀಜಿ ಅವರನ್ನು ಭವ್ಯ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಸ್ವಾಗತಿಸಲಾಯಿತು. ದೇವಸ್ಥಾನ ಸಮಿತಿಯಿಂದ ನಮನ ಸ್ವೀಕರಿಸಿದ ವಿಧುಶೇಖರ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಪರಂಪರೆಯ ಬಗ್ಗೆ ಶೃದ್ಧಾಭಕ್ತಿ ಹೊಂದಿರಬೇಕು. ಧರ್ಮ ಆಚರಣೆಯಿಂದ ಪುಣ್ಯಫಲ ಸಿಗುತ್ತದೆ. ವಿದ್ಯೆ, ಐಶ್ವರ್ಯ, ಅಧಿಕಾರ ಇದ್ದರೂ ಪುಣ್ಯ ಇಲ್ಲದಿದ್ದರೆ ಯಾವದರಲ್ಲೂ ಸುಖ ಸಿಗುವುದಿಲ್ಲ. ಸುಖ ಅನುಭವಿಸಲು ಪುಣ್ಯ ಬೇಕು. ಭಗವಂತ ಎಲ್ಲರಿಗೆ ಎಲ್ಲವನ್ನೂ ಕೊಟ್ಟಿರುವುದಿಲ್ಲ. ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಸಾಮರ್ಥ್ಯವನ್ನು ನೀಡಿರುತ್ತಾನೆ. ದೇವರ ಸೇವೆ ಮತ್ತು ಇನ್ನೊಬ್ಬರಿಗೆ ಒಳಿತು ಮಾಡುವುದರಿಂದ ಪುಣ್ಯ ಲಭಿಸುತ್ತದೆ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.
ಶ್ರೀಗಳಿಗೆ ನಮನ ಕಾರ್ಯಕ್ರಮದಲ್ಲಿ ವಿದ್ವಾಂಸ ಪತಂಜಲಿ ವೀಣಾಕರ ಅಭಿನಂದನಾ ಪತ್ರ ವಾಚಿಸಿದರು. ದೇವಸ್ಥಾನದ ಟ್ರಸ್ಟಿ ಲಕ್ಷ್ಮಣ ಮೇಸ್ತ ಹಾಗೂ ಸಮಾಜ ಬಾಂಧವರು ನಮನ ಸಲ್ಲಿಸಿದರು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುಬ್ರಾಯ ಆರ್. ಮೇಸ್ತ ಪ್ರಾಸ್ತಾವಿಕ ಮಾತನಾಡಿದರು. ಚಾರೋಡಿ ಸಮಾಜದ ಮುಖಂಡರು ಹಾಗೂ ವಿವಿಧ ಸಮಾಜದ ಭಕ್ತರು ಪಾಲ್ಗೊಂಡಿದ್ದರು. ನಾಲ್ಕು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಿತು.