ಸಾರಾಂಶ
ರಾಷ್ಟ್ರ, ರಾಜ್ಯದಲ್ಲಿ 2 ದಶಕಗಳಿಂದ ವೈಶಿಷ್ಟ್ಯಪೂರ್ಣವಾಗಿ ಶರಣ ಸಂಸ್ಕೃತಿ ಉತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಹೇಳಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ರಾಷ್ಟ್ರ, ರಾಜ್ಯದಲ್ಲಿ 2 ದಶಕಗಳಿಂದ ವೈಶಿಷ್ಟ್ಯಪೂರ್ಣವಾಗಿ ಶರಣ ಸಂಸ್ಕೃತಿ ಉತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಹೇಳಿದರು.ಶನಿವಾರ ನಗರದ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಲಿಂ.ಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡ 20ನೇ ಶರಣ ಸಂಸ್ಕೃತಿ ಉತ್ಸವ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಲೆಮರೆಯ ಕಾಯಿಯಂತಿರುವ ಮಹಾನ್ ಸಾಧಕರನ್ನು ಗೌರವಿಸುವ ಕಾರ್ಯ ಮಹತ್ತರವಾಗಿದೆ. ಬದುಕು ಕಷ್ಟಕರವಾಗದೆ ನೆಮ್ಮದಿಯ ಜೀವನ ಕಾಣಬೇಕು ಎಂದು ವಚನ ಸಾಹಿತ್ಯ ಹೇಳಿದೆ. ಹಾಗಾಗಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕು. ಜಗತ್ತಿನ ಎಲ್ಲ ಧರ್ಮದ ಅಂತಿಮ ಘಟ್ಟ ಮುಕ್ತಿ ಹೊಂದುವುದು. ಬಸವಣ್ಣನವರ ತತ್ವಗಳನ್ನು ಜಗತ್ತಿಗೆ ತಲುಪಿಸಲು ನಾವು ಹಿಂದೆ ಬಿದ್ದಿದ್ದೇವೆ. ಪ್ರಸ್ತುತ ಎಲ್ಲರೂ ಸೇರಿ ಬಸವಣ್ಣನವರ ತತ್ವಗಳನ್ನು ನಾಡಿಗೆ ಪರಿಚಯಿಸುವ ಕಾರ್ಯಮಾಡಬೇಕಾಕಿದೆ ಎಂದು ಹೇಳಿದರು.ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪ ಕುಲಪತಿ ಸಿ.ಎಂ. ತ್ಯಾಗರಾಜ ಮಾತನಾಡಿ, ಶಿಕ್ಷಣ ಕೊಡುವುದರ ಜೊತೆಗೆ ಉದ್ಯೋಗ ಒದಗಿಸುವ ಕಾರ್ಯವನ್ನು ಶ್ರೀಮಠ ಮಾಡುತ್ತಿದೆ. ವಿದ್ಯಾರ್ಥಿಗಳು ಆರೋಗ್ಯವಂತವಾದರೆ ಮಾತ್ರ ಕಾಯಕದಲ್ಲಿ ತೊಡಗಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಬೇಕು. ಯಶಸ್ಸು ಕಂಡಕಂಡಲ್ಲಿ ಬೆಳೆಯುವ ಸಾಧಾರಣ ಹೂವಲ್ಲ, ಪವಿತ್ರವಾದ ಮನಸ್ಸಿನಲ್ಲಿ ಬೆಳೆಯುವ ಪುಷ್ಪವಾಗಿದೆ ಎಂದು ಹೇಳಿದರು.
ಸುಣದೋಳಿಯ ಶಿವಾನಂದ ಮಹಾಸ್ವಾಮಿಗಳು ಹಾಗೂ ಗೋಕಾಕನ ರಾಚೋಟೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಷಟ್‌ಸ್ಥಲ ಧ್ವಜಾರರೋಣವನ್ನು ಪಿಎಸ್‌ಐ ಲಕ್ಷ್ಮಣ ಅಗಸರ ನೆರೆವೇರಿಸಿದರು.ಇದಕ್ಕೂ ಮೊದಲು ಅಕ್ಷರ, ಅರಿವು, ಆರೋಗ್ಯ ಕಾರ್ಯಕ್ರಮದ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜಾಗೃತಿ ಮೂಡಿಸಿತು.
ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಪೌರಾಯುಕ್ತ ರಮೇಶ ಜಾಧವ್, ಸಮಿತಿ ಗೌರವಾಧ್ಯಕ್ಷ ಶಶಿಧರ ದೇಮಶೆಟ್ಟಿ, ಅಧ್ಯಕ್ಷ ಬಸವರಾಜ ಕೊಟಗಿ, ಕಾರ್ಯದರ್ಶಿ ಸಂಜಯ ಶಿಂಧಿಹಟ್ಟಿ, ಬಸವರಾಜ ಮುರುಗೋಡ ಲಿಂಗಾಯತ ಮಹಿಳಾ ವೇದಿಕೆಯ ಅಧ್ಯಕ್ಷೆ ಭಾರತಿ ಮರೆನ್ನವರ ಇದ್ದರು.