ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷರಾಗಿ ಶರಣ್ ಕುಮಾರ್ ಆಯ್ಕೆ

| Published : Jul 26 2025, 12:30 AM IST

ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷರಾಗಿ ಶರಣ್ ಕುಮಾರ್ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ನಡೆಸಿ ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್‍ನ ಪ್ರಾಂತ್ಯ ಕಾರ್ಯದರ್ಶಿ ಶರಣ ಪಂಪವಲ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗದಲ್ಲಿ ನಡೆಯಲಿರುವ ಈ ಬಾರಿಯ ಹಿಂದೂ ಮಹಾಗಣಪತಿ ಹಬ್ಬ 18ನೇ ವರ್ಷಕ್ಕೆ ಕಾಲಿಡುತ್ತಿದೆ. ಆಗಸ್ಟ್-27ರಂದು ಗಣೇಶ ಪ್ರತಿಷ್ಠಾಪನೆಯಾಗಿ 18 ದಿವಸಗಳ ಕಾಲ ಗಣೇಶೋತ್ಸವ ನಡೆಯುತ್ತಿದ್ದು ಸೆ.13 ರಂದು ಶೋಭಾಯಾತ್ರೆ ನಡೆಯಲಿದೆ. ಈ ಬಾರಿ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷರಾಗಿ ಹೋಟೆಲ್ ಉದ್ಯಮಿ ಶರಣ್‌ಕುಮಾರ್ ಆಯ್ಕೆ ಆಗಿದ್ದಾರೆ. ವಿಶ್ವ ಹಿಂದೂ ಪರಿಷತ್ ಇಡೀ ಗಣೇಶೋತ್ಸವದ ಜವಾಬ್ದಾರಿ ಹೊತ್ತಿದೆ ಎಂದು ವಿಶ್ವ ಹಿಂದೂ ಪರಿಷತ್‍ನ ಪ್ರಾಂತ್ಯ ಕಾರ್ಯದರ್ಶಿ ಶರಣ ಪಂಪವಲ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1863ರಲ್ಲಿ ಬಾಲ ಗಂಗಾಧರನಾಥ ತಿಲಕ್ ಅವರು ಮೊದಲು ಗಣೇಶ ಉತ್ಸವವನ್ನು ಪ್ರಾರಂಭ ಮಾಡಿದರು. ಅಂದಿನಿಂದ ಗಣೇಶ ಹಬ್ಬವನ್ನು ದೇಶದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇಂದು ಇಡೀ ದೇಶದಲ್ಲಿ ಪ್ರತಿ ಹಳ್ಳಿಯಲ್ಲೂ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಸಮಾಜದ ಎಲ್ಲಾ ವರ್ಗದವರನ್ನು ಒಂದುಗೂಡಿಸಿ ರಾಷ್ಟ್ರೀಯ ಭಾವನೆ ಮೂಡಿಸುವ ಕೆಲಸ ಆಗುತ್ತಿದೆ. ಹಿಂದೂ ಮಹಾ ಗಣೇಶೋತ್ಸವನ್ನು ಚಿತ್ರದುರ್ಗದಲ್ಲಿ 2007ರಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ಆರಂಭವಾಯಿತು.

17 ವರ್ಷಗಳಿಂದ ಹಿಂದೂ ಮಹಾ ಗಣಪತಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದೇವೆ. ಒಂದು ತಿಂಗಳು ನಡೆಯುವ ಈ ಉತ್ಸವ ಇಡೀ ದೇಶಾದ್ಯಂತ ಪ್ರಸಿದ್ಧಿ ಪಡೆದಿದೆ. ಈ ಉತ್ಸವಕ್ಕೆ ಕೇವಲ ಚಿತ್ರದುರ್ಗದ ಜನತೆಗೆ ಅಷ್ಟೇ ಅಲ್ಲದೇ ದೇಶ ವಿದೇಶಗಳಿಂದ ಕಾರ್ಯಕರ್ತರು ಬಂದು ಭಾಗವಹಿಸುತ್ತಾರೆ. ಹಿಂದೂ ಮಹಾ ಗಣಪತಿ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದಲೂ ಸಾವಿರಾರು ಜನ ಉತ್ಸವ ನೋಡಲು ಬರುತ್ತಾರೆ. ಕೊನೆಯಲ್ಲಿ ನಡೆಯುವ ಶೋಭಾಯಾತ್ರೆಯು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಜನ ಸೇರುವ ಶೋಭಾಯಾತ್ರೆ ಎಂಬ ಖ್ಯಾತಿ ಪಡೆದಿದೆ ಎಂದರು.

ವಿಶ್ವ ಹಿಂದೂ ಪರಿಷತ್ ಜತೆಗೆ ಸಾರ್ವಜನಿಕರನ್ನು ಸೇರಿಸಿಕೊಂಡು ಸಮಿತಿ ಮಾಡಿಕೊಂಡು ಗಣೇಶೋತ್ಸವ ಆಚರಿಸುತ್ತ ಬಂದಿದ್ದೇವೆ. ಚಿತ್ರದುರ್ಗದಲ್ಲಿ ನಡೆಯುವಂತಹ ಗಣೇಶೋತ್ಸವ ಹಿಂದೂ ಮಹಾ ಗಣಪತಿ ಸಂಘ ಹಾಗೂ ವಿಶ್ವ ಹಿಂದೂ ಪರಿಷತ್‍ಗೆ ಹೆಚ್ಚು ಬಲ ತಂದಂತಹ ಕಾರ್ಯಕ್ರಮವಾಗಿದೆ. ನಾವು ದೇಶದ ವಿವಿದೆಡೆ ನಡೆಯುವ ಬೈಟೆಕ್ ಗಳಲ್ಲಿ ಚಿತ್ರದುರ್ಗ ಗಣೇಶ ಶೋಭಾಯಾತ್ರೆ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾಧ್ಯಕ್ಷ ಷಡಾಕ್ಷರಯ್ಯ, ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ಡಾ.ಮಂಜುನಾಥ್, ವಿಭಾಗ ಕಾರ್ಯದರ್ಶಿ ಚಂದ್ರಶೇಖರ್ ಚಿತ್ರದುರ್ಗ ಕಾರ್ಯದರ್ಶಿ ಕೇಶವ ಉಪಸ್ಥಿತರಿದ್ದರು.

ಲೆಕ್ಕಪತ್ರ ಬಹಿರಂಗ ಪಡಿಸುವ ಪದ್ಧತಿ ಇಲ್ಲ:

ಹಿಂದೂ ಮಹಾಗಣಪತಿ ಉತ್ಸವ ಮುಗಿದ ನಂತರ ನಡೆಯುವ ಸಭೆಯಲ್ಲಿ ಸಮಿತಿಯವರು ಲೆಕ್ಕಪತ್ರವನ್ನು ನೀಡುತ್ತಾರೆ. ಲೆಕ್ಕಪತ್ರವನ್ನು ಬಹಿರಂಗಪಡಿಸುವ ಪದ್ಧತಿ ವಿಶ್ವ ಹಿಂದೂ ಪರಿಷತ್‍ನಲ್ಲಿ ಇಲ್ಲ. ಯಾರಿಗಾದರೂ ಲೆಕ್ಕಪತ್ರದ ಬಗ್ಗೆ ಮಾಹಿತಿ ಬೇಕಾದರೆ ವಿಶ್ವ ಹಿಂದೂ ಪರಿಷತ್ತನ್ನು ಸಂಪರ್ಕಿಸಿದರೆ ಅವರಿಗೆ ವೈಯಕ್ತಿಕವಾಗಿ ಮಾಹಿತಿ ನೀಡಲಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್‍ನ ಪ್ರಾಂತ್ಯ ಕಾರ್ಯದರ್ಶಿಯಾದ ಶರಣ ಪಂಪವಲ್ ತಿಳಿಸಿದರು.