ಸಮ ಸಮಾಜ ಕಟ್ಟುವಲ್ಲಿ ಶರಣರ ಕೊಡುಗೆ ಅಪಾರ: ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು

| Published : Feb 11 2024, 01:45 AM IST

ಸಮ ಸಮಾಜ ಕಟ್ಟುವಲ್ಲಿ ಶರಣರ ಕೊಡುಗೆ ಅಪಾರ: ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು
Share this Article
  • FB
  • TW
  • Linkdin
  • Email

ಸಾರಾಂಶ

ಸರಳ ಜೀವನ, ಶುದ್ಧ ಧ್ಯಾನ, ನಿಷ್ಕಲ್ಮಶ ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯವೆಂದು ಸಾರಿದ ಕಾಯಕ ಶರಣರ ವಚನಗಳು ಇಂದಿಗೂ ಚಿರಪರಿಚಿತವಾಗಿವೆ ಎಂದು ಶಾಸಕರು ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮೂಢನಂಬಿಕೆಗಳು, ಜಾತಿ ಪದ್ಧತಿ, ಅಸಮಾನತೆ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಯಾದಗಿರಿ ಹಾಗೂ ಕಾಯಕ ಶರಣರ ಜಯಂತ್ಯುತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳು ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ನಡೆದ ಕಾಯಕ ಶರಣರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಸರಳ ಜೀವನ, ಶುದ್ಧ ಧ್ಯಾನ, ನಿಷ್ಕಲ್ಮಶ ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯವೆಂದು ಸಾರಿದ ಕಾಯಕ ಶರಣರ ವಚನಗಳು ಇಂದಿಗೂ ಚಿರಪರಿಚಿತವಾಗಿವೆ ಎಂದರು. ಶರಣರ ವಚನಗಳು ಇಂದಿನ ಆಧುನಿಕ ಯುಗದಲ್ಲಿ ಅತ್ಯವಶ್ಯಕವಾಗಿವೆ. ಯುವ ಪೀಳಿಗೆ ಅವರ ಆದರ್ಶ ಪಾಲಿಸಿ ಮುನ್ನಡೆಯಬೇಕಿದೆ ಎಂದರು.

ಪ್ರಾಂಶುಪಾಲ ಪ್ರೊ. ಸರ್ವೋದಯ ಎಸ್.ಎಸ್. ಮಾತನಾಡಿ, 12ನೇ ಶತಮಾನವು ಧಾರ್ಮಿಕ, ಸಾಮಾಜಿಕ, ರಾಜಕೀಯವಾಗಿ ಕ್ರಾಂತಿ ಉಂಟುಮಾಡಿದೆ. ಇವತ್ತಿನ ನಮ್ಮ ಸಂವಿಧಾನದ ಪಾರ್ಲಿಮೆಂಟ್ ಮಾದರಿಯಲ್ಲಿ ಅಂದಿನ ಅನುಭವ ಮಂಟಪ ಇತ್ತು. ಯಾರನ್ನೂ ಕೀಳಾಗಿ ಕಾಣಬಾರದು ಎಂಬುವುದು ಬಸವೇಶ್ವರರ ಸಮಾನತೆ ತತ್ವವಾಗಿದ್ದು, ಸಮ ಸಮಾಜಕ್ಕೆ ಶ್ರಮ ಪಟ್ಟು ಅವರ ಹಾದಿಯಲ್ಲಿ ನಡೆದ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿಯವರು ಶರಣ ಪಡೆಯ ಮಹನೀಯರಾಗಿದ್ದಾರೆ ಎಂದು ಹೇಳಿದರು.

ಯಾದಗಿರಿ ತಹಸೀಲ್ದಾರರಾದ ನಾಗಮ್ಮ ಕಟ್ಟಿಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಶರಣರ ಜಯಂತಿ ಸಮಿತಿಯ ಅಧ್ಯಕ್ಷರಾದ ಶಿವರಾಜ ದಾಸನಕೇರಿ, ಮಲ್ಲು ಬೆಳಿಗೇರಿ, ಅರುಣ್, ಮುತ್ತಣ್ಣ, ಗೋಪಾಲ ತಳಿಗೇರಿ , ಎಸ್.ಡಿ. ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಸಂಸ್ಥೆಯ ಅಧ್ಯಕ್ಷ ದುರ್ಗಪ್ಪ ಹೆಚ್. ಪೂಜಾರಿ, ಸಮಾಜದ ಮುಖಂಡರಾದ ಚಂದಪ್ಪ ಮುನಿಯಪ್ಪನ್ನೋರ್, ಮರೆಪ್ಪ ಚಟ್ಟೇರಕರ್, ಮಲ್ಲಿಕಾರ್ಜುನ ಈಟೇ, ಶಿವಕುಮಾರ ಗಿರೆಪ್ಪನ್ನೋರ್, ಸಾಬರೆಡ್ಡಿ ಮುಂಡ್ರಿಕೇರಿ , ಸಾಬಣ್ಣ ಹೋರುಂಚಿ ಇತರರಿದ್ದರು.