ಒಗ್ಗಟ್ಟಾಗಿ ನಾಡು ಕಟ್ಟಿದಾಗ ಶರಣರ ಚಿಂತನೆಗಳು ಫಲಪ್ರದ: ಸಚಿವ ಎಂ.ಬಿ.ಪಾಟೀಲ್‌

| Published : Aug 14 2024, 12:58 AM IST

ಒಗ್ಗಟ್ಟಾಗಿ ನಾಡು ಕಟ್ಟಿದಾಗ ಶರಣರ ಚಿಂತನೆಗಳು ಫಲಪ್ರದ: ಸಚಿವ ಎಂ.ಬಿ.ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾವತಿ ಗೋಣೀಬೀಡಿನ ಶೀಲಸಂಪಾದನಾ ಮಠದಲ್ಲಿ ನಡೆದ ೧೦೦ನೇ ಅನುಭಾವ ಸಂಗಮ ಶತಮಾಸೋತ್ಸವ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಜೊತೆಗೆ ಮಧ್ಯ ಕರ್ನಾಟಕ ಸಹ ಸಂಗಮವಾಗಬೇಕು. ಎಲ್ಲಾ ಸಮುದಾಯದ ಜನರು ಒಂದಾಗಿ ಒಗ್ಗಟ್ಟಿನಿಂದ ಮುಂದುವರೆಯಬೇಕಾಗಿದೆ. ಆಗ ಮಾತ್ರ ಬಸವಾದಿ ಶಿವಶರಣರ ಚಿಂತನೆಗಳು ಫಲಪ್ರದವಾಗುತ್ತವೆ ಎಂದು ರಾಜ್ಯ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಅವರು ತಾಲೂಕಿನ ಗೋಣೀಬೀಡು ಶೀಲಸಂಪಾದನಾ ಮಠದಲ್ಲಿ ಸ್ಪಿರಿಚ್ಯುಯಲ್ ಪೌಂಡೇಶನ್ ವತಿಯಿಂದ ೨ ದಿನಗಳ ಕಾಲ ಆಯೋಜಿಸಲಾಗಿದ್ದ ೧೦೦ನೇ ಅನುಭಾವ ಸಂಗಮ ಶತಮಾಸೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳ ಹಿಂದೆ ಸ್ಥಾಪಿತವಾದ ಲಿಂಗಾಯತ ಮಠಗಳು ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ನೈತಿಕತೆ ಮೂಲಕ ನಾಡುಕಟ್ಟುವ ಮಹತ್ತರವಾದ ಪಾತ್ರ ವನ್ನು ವಹಿಸಿದ್ದವು. ಈ ನಿಟ್ಟಿನಲ್ಲಿ ನಿರಂತರವಾಗಿ ಸಾಗುತ್ತಾ ಬರುತ್ತಿವೆಯಾದರೂ ಇಂದಿಗೆ ಜಾತಿ, ಉಪಜಾತಿಗಳನ್ನು ಮಾಡಿಕೊಂಡು ಒಗ್ಗಟ್ಟಿನ ಕೊರತೆಯನ್ನು ನಾವುಗಳು ಕಾಣುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಾವಿರ ವರ್ಷಗಳ ಇತಿಹಾಸವಿರುವ ಶೀಲ ಸಂಪಾದನಾ ಮಠಕ್ಕೂ ೧೨ನೇ ಶತಮಾನದ ನಂಟಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಅಕ್ಕಮಹಾದೇವಿ, ನುಲಿಯ ಚನ್ನಯ್ಯ ಸೇರಿದಂತೆ ಹಲವು ಶಿವಶರಣರನ್ನು ಕಂಡಂತಹ ಶ್ರೀ ಮಠವು ಶರಣ ಸಂಸ್ಕೃತಿಯ ಮಹತ್ವವನ್ನು ಸಾರುತ್ತಿದೆ. ನಮ್ಮಲ್ಲಿ ನೆಮ್ಮದಿ ಇರಬೇಕೆಂದರೆ ಆಧ್ಯಾತ್ಮಿಕ ಕೇಂದ್ರಗಳಾಗಿರುವ ಇಂತಹ ಮಠಗಳಿಗೆ ಭೇಟಿ ನೀಡಬೇಕು ಎಂದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ವಚನ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ. ಕಾಯಕ, ದಾಸೋಹ ಸಮಾನತೆಯ ತಳಹದಿಯ ಮೇಲೆ ಸಮಾಜ ನಿರ್ಮಾಣ ಬಸವತತ್ವದ ಮೂಲ ಉದ್ದೇಶವಾಗಿದೆ. ನಮ್ಮ ಸರ್ಕಾರವೂ ಕೂಡ ಬಸವ ತತ್ವದ ಆಧಾರದ ಮೇಲೆಯೇ ನಡೆಯುತ್ತಿದೆ. ಮಠಗಳು ಅನ್ನ, ಆಶ್ರಯ, ಜ್ಞಾನವನ್ನು ಕೊಟ್ಟು ಸಮಾಜವನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯತ್ತಿವೆ ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಗೊ.ರು.ಚನ್ನಬಸಪ್ಪ ಉಪನ್ಯಾಸ ನೀಡಿ, ದೇಶದಲ್ಲಿ ಹಣ, ಆಸ್ತಿ, ಅಧಿಕಾರ, ರಾಜಕೀಯ ಪ್ರಭಾವ ಬಳಸಿ ಕೊಳ್ಳುವ ಸಾಕಷ್ಟು ಮಠಗಳಿರಬಹುದು. ಆದರೆ ಇದಕ್ಕೆ ವಿರುದ್ಧವಾಗಿರುವ ಗೋಣಿಬೀಡಿನ ಶೀಲಸಂಪಾದನಾ ಮಠ ಅನುಭಾವ ಕಾಣುವ ಮಠವಾಗಿದೆ. ಅನುಭಾವದ ಸ್ವಾಧ ಮೀನು ಈಜಿದಂತೆ ನಿಸರ್ಗದತ್ತವಾಗಿರಬೇಕೇ ಹೊರತು ಕೃತಕವಾಗಬಾರದು ಎಂದರು.

ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ತರೀಕೆರೆ ಶಾಸಕ ಜಿ.ಎಚ್ ಶ್ರೀನಿವಾಸ್, ಡಾ. ಅಂಶು ಮಂತ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ, ವಿಶ್ವಾಸ್, ದಯಾಶಂಕರ್, ಸಮನ್ವಯ ಕಾಶಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇನ್ನು, ಇಲ್ಲಿನ ಎಂಪಿಎಂ ಕಾರ್ಖಾನೆ ಪುನರ್ ಆರಂಭಿಸುವುದು ಕಷ್ಟವಲ್ಲ. ಆದರೆ ಅರಣ್ಯ ಇಲಾಖೆ ನೀಲಗಿರಿ ಬೆಳೆಯುವುದಕ್ಕೆ ನಿರ್ಬಂಧ ಏರಿದೆ. ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ೭೦ ಸಾವಿರ ಹೆಕ್ಟರ್ ಭೂಮಿಯಲ್ಲಿ ನೀಲಗಿರಿ ಬೆಳೆಯಲು ಜನರ ಒಪ್ಪಿಗೆ ಸಹ ಅಗತ್ಯವಿದೆ ಎಂದೂ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಬೀದರ್‌ ಅನುಭವ ಮಂಟಪ ಶೀಘ್ರ ಉದ್ಘಾಟನೆ: ಖಂಡ್ರೆ

ಬೀದರ್ ಬಸವ ಕಲ್ಯಾಣದಲ್ಲಿ ೬೦೦ ಕೋ. ರು.ಗಳ ವೆಚ್ಚದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಗೋ.ರೂ ಚನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ಪ್ರಜಾಪ್ರಭುತ್ವದ ಆಧಾರಸ್ಥಂಭವಾಗಿರುವ ನೂತನ ಅನುಭವ ಮಂಟಪ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ನಡೆಯುತ್ತಿದೆ. ಮುಂದಿನ ೧ ವರ್ಷದಲ್ಲಿ ಕಾಮಗಾರಿ ಮುಕ್ತಾಯಗೊಂಡು ಉದ್ಘಾಟನೆಗೊಳ್ಳಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.