ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕರ್ನಾಟಕದ ಇತಿಹಾಸ ಮತ್ತು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12 ನೇ ಶತಮಾನ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಸಮಾಜದಲ್ಲಿನ ಹಲವು ತಾರತಮ್ಯಗಳನ್ನು ಹೋಗಲಾಡಿಸಲು ಶಿವಶರಣರು ಕ್ರಾಂತಿಕಾರಿ ಹೋರಾಟಗಳನ್ನು ನಡೆಸಿದರು. 12 ನೇ ಶತಮಾನದ ಶಿವಶರಣರ ಚಿಂತನೆಗಳು ವಚನ ಸಾಹಿತ್ಯದ ಮೂಲಕ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯಲ್ಲಿ ಅವರು ಮಾತನಾಡಿದರು.
12 ಶತಮಾನದಲ್ಲಿ ಧಾರ್ಮಿಕ ಕ್ರಾಂತಿ12 ನೇ ಶತಮಾನದ ಶಿವ ಶರಣರು ಆಧ್ಯಾತ್ಮಿಕವಾಗಿ ಹೊಸ ಲೋಕವೊಂದನ್ನೇ ತೆರೆದಿಟ್ಟರು. ಹಲವು ತಾರತಮ್ಯಗಳ ವಿರುದ್ಧ ದನಿ ಎತ್ತುವ ಮೂಲಕ ಸಮಾಜದಲ್ಲಿನ ನಾನಾ ಅಂಕುಡೊಂಕುಗಳನ್ನು ತಿದ್ದಲು ಯತ್ನಿಸಿದರು. 800 ವರ್ಷಗಳ ಹಿಂದೆ ರಚನೆಯಾದ ಶಿವಶರಣರ ವಚನಗಳು ಸಾರ್ವಕಾಲಿಕ ಮತ್ತು ಸಾರ್ವತ್ರಿಕ. ಅಂಬಿಗರ ಚೌಡಯ್ಯನವರೂ ವಚನಸಾಹಿತ್ಯಕ್ಕೆ ತಮ್ಮದೇ ವಿಶಿಷ್ಟಕೊಡುಗೆ ನೀಡಿದ್ದಾರೆ. ಮನುಷ್ಯನ ಬದುಕಿನಲ್ಲಿ ಭಕ್ತಿ ಹೇಗಿರಬೇಕು ಹಾಗೂ ಮನುಷ್ಯ ಹೇಗೆ ಸಮಾಜದಲ್ಲಿ ಬದುಕಬೇಕು ಎಂಬುದನ್ನು ಅತ್ಯಂತ ಸರಳ,ಸುಂದರ ಭಾಷೆಯಲ್ಲಿ ಮನ ಮುಟ್ಟುವಂತೆ ಹೇಳಿದ್ದಾರೆ. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದರು
ಉಪನ್ಯಾಸಕ ಬಿ.ವಿ ಪ್ರಕಾಶ್ ಮಾತನಾಡಿ, ಜಗತ್ತು ಕಂಡ ಶ್ರೇಷ್ಠ ದೇಶ ಭಾರತ. ಭಾರತ ಕಂಡ ಶ್ರೇಷ್ಠ ನಾಡು ನಮ್ಮ ಕನ್ನಡ ನಾಡು. ಈ ಕನ್ನಡ ನಾಡಿನ ಇತಿಹಾಸದಲ್ಲಿ ಸುವರ್ಣಾಕ್ಷದಲ್ಲಿ ಬರೆದಿರುವ ಒಂದು ಯುಗವೆಂದರೆ ಅದು 12ನೇ ಶತಮಾನ. ಇವತ್ತಿನ ಈ ಸಮಾಜಕ್ಕೆ ದಾರಿದೀಪವಾಗಿ ಅನೇಕ ವಚನಕಾರರ ಆದರ್ಶಗಳು ಜೀವಂತವಾಗಿವೆ ಎಂದರು.ಕಾರ್ಯಕ್ರಮದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಜಿಲ್ಲಾ ಪಂಚಾಯತ್ ನ ಮುಖ್ಯ ಲೆಕ್ಕಾಧಿಕಾರಿ ಮುರುಗೇಶ್, ಸಮುದಾಯದ ಮುಖಂಡರಾದ ಕೆ.ಜಯರಾಮ್, ಆರ್.ಎ.ರವಿಕುಮಾರ್, ನರಸಿಂಹ, ಸುಬ್ರಮಣ್ಯಂ, ಜಿಲ್ಲಾ ಮಟ್ಟದ ಅಧಿಕಾರಿಗಳು, ಪದಾಧಿಕಾರಿಗಳು ಇದ್ದರು.