ಸಾರಾಂಶ
ಕ್ರಿಯಾತ್ಮಕ, ಸತ್ಯಶೀಲ, ಸಂಸ್ಕಾರ ನೀಡಲು ವಚನಗಳನ್ನು ಶಿಕ್ಷಕರು ತಪ್ಪದೆ ಓದಬೇಕು. ಹೊರ ಪ್ರಪಂಚದ ಅನುಭವಕ್ಕೆ ಅಂತರಂಗದ ಶುದ್ಧಿಯ ಆನಂದದ ಅನುಭವಕ್ಕೆ ಮುಖ್ಯ. ಹೇಳಲಾಗದ ಗುರು, ಕೇಳಲಾಗದ ಶಿಷ್ಯರ ಪಡೆ ಇದೆ
ಕನ್ನಡಪ್ರಭ ವಾರ್ತೆ ಮೈಸೂರು
ವೃತ್ತಿ ಮಾಧ್ಯಮದಲ್ಲಿ ಅಮಾನವೀಯತೆ, ಭ್ರಷ್ಟಾಚಾರ, ಅನೀತಿ, ತಾರತಮ್ಯ ಹೋಗಲಾಡಿಸಲು ವಚನಗಳ ಓದು ಮತ್ತು ಅಧ್ಯಯನ ಅಗತ್ಯ ಎಂದು ಮೈಸೂರು ವಿವಿ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಡಿ.ಎಸ್. ಗುರು ಅಭಿಪ್ರಾಯಪಟ್ಟರು.ಶರಣ ಸಾಹಿತ್ಯ ಪರಿಷತ್ ನಗರ ಘಟಕ ಶಿಕ್ಷಣ ಮಹಾವಿದ್ಯಾಲಯ ಆಲೂರು ವೆಂಕಟರಾವ್ ಭಾಷಾ ಕೌಶಲ ಸಂಸ್ಥೆಯಲ್ಲಿ ಏರ್ಪಡಿಸಿದ್ದ ವಚನ ವಾಚನ ವ್ಯಾಖ್ಯಾನ ಪ್ರಬಂಧ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರಿಯಾತ್ಮಕ, ಸತ್ಯಶೀಲ, ಸಂಸ್ಕಾರ ನೀಡಲು ವಚನಗಳನ್ನು ಶಿಕ್ಷಕರು ತಪ್ಪದೆ ಓದಬೇಕು. ಹೊರ ಪ್ರಪಂಚದ ಅನುಭವಕ್ಕೆ ಅಂತರಂಗದ ಶುದ್ಧಿಯ ಆನಂದದ ಅನುಭವಕ್ಕೆ ಮುಖ್ಯ. ಹೇಳಲಾಗದ ಗುರು, ಕೇಳಲಾಗದ ಶಿಷ್ಯರ ಪಡೆ ಇದೆ ಎಂದರು.ಬಹುಮಾನ ವಿತರಿಸಿದ ಸಂಸ್ಥೆಯ ಪ್ರಾಂಶುಪಾಲೆ ಎಚ್.ಎನ್. ಗೀತಾಂಭ ಅವರು ಕಾಯಕವೇ ಕೈಲಾಸ ಎಂಬುದನ್ನು ಅರಿಯಬೇಕು. ಯಾವ ವೃತ್ತಿಯಲ್ಲಿದ್ದಿವೋ, ಆ ವೃತ್ತಿಗೆ ದ್ರೋಹ ಬಗೆಯದೆ ಮಾಡುವ ಕಾರ್ಯವೇ ಧರ್ಮ ಎಂದರು.
ಶಿಕ್ಷಕರಾದವರು ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಕಂಡು, ನಡೆದಂತೆ ನುಡಿದರೆ ಅದೇ ಸಾರ್ಥಕ ಎಂದರು.ಪರಿಷತ್ತಿನ ಅಧ್ಯಕ್ಷ ಮ.ಗು. ಸದಾನಂದಯ್ಯ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿಗಳಾದ ಪುಟ್ಟರಾಜಪ್ಪ, ಡಾ.ಎಸ್.ಬಿ. ಸೌಮ್ಯಾ ಇದ್ದರು.
ದತ್ತಿ ದಾನಿಗಳನ್ನು ಕುಮಾರಸ್ವಾಮಿ ಪರಿಚಯಿಸಿ, ಸ್ವಾಗತಿಸಿದರು. ಉದಯ ಕುಮಾರ್ ವಂದಿಸಿದರು. ಬಿ. ಜಗದೀಶ್, ನಂದಿನಿ ಕಾರ್ಯಕ್ರಮ ನಿರೂಪಿಸಿದರು.