ರಾಣಿಬೆನ್ನೂರು ನಗರದ ಅಶೋಕ ಸರ್ಕಲ್ ಬಳಿಯ ಶಿಶುವಿಹಾರ ಸಮಾಜ ಸಂಘದಲ್ಲಿ ಶಿಶು ವಿಹಾರ ಸಮಾಜ, ಕದಳಿ ವೇದಿಕೆ, ಶರಣ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಶರಣರ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು.
ರಾಣಿಬೆನ್ನೂರು: ವಚನ ಚಳವಳಿಯಲ್ಲಿ ಭಾಗವಹಿಸಿದ 12ನೇ ಶತಮಾನದ ಅನುಭಾವಿ ಶರಣೆ ಮತ್ತು ಶರಣೆಯರು ಮಾಡಿದ ಆ ಕ್ರಾಂತಿಯು ಪ್ರಸ್ತುತ ಸಮಸ್ತ ಮನುಕುಲದ ಉದ್ಧಾರಕ್ಕೆ ಪ್ರೇರಣೆಯಾಗಿದೆ ಎಂದು ಪ್ರೊ. ವೀಣಾ ಮಾಜಿಗೌಡ್ರ ಹೇಳಿದರು.ನಗರದ ಅಶೋಕ ಸರ್ಕಲ್ ಬಳಿಯ ಶಿಶುವಿಹಾರ ಸಮಾಜ ಸಂಘದಲ್ಲಿ ಶಿಶು ವಿಹಾರ ಸಮಾಜ, ಕದಳಿ ವೇದಿಕೆ, ಶರಣ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶರಣರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಗಾಯಿತ್ರಮ್ಮ ಕುರವತ್ತಿ ಮಾತನಾಡಿ, ಅಂದಿನ ಶರಣೆ, ಶರಣೆಯರು ಸಾಮಾಜಿಕ ಸಮಾನತೆ, ವೈಚಾರಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು ಹಾಗೂ ವಚನಗಳ ಮೂಲಕ ಕ್ರಾಂತಿಕಾರಿ ಸಂದೇಶ ನೀಡಿದರು. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಫ.ಗು. ಹಳಕಟ್ಟಿ ಮುಂತಾದವರ ಆದರ್ಶಗಳನ್ನು ಇಂದಿನ ಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಫ.ಗು. ಹಳಕಟ್ಟೆಯವರ ವಚನಗಳನ್ನು ಸಂಗ್ರಹಿಸಿ ಮುದ್ರಣಗೊಳಿಸುವುದರ ಮೂಲಕ ಪುಸ್ತಕವನ್ನು ರಚಿಸಿದ್ದರಿಂದ ಅವರುಗಳ ಸಾವಿರಾರು ವಚನಗಳು ದೊರಕಿವೆ. ಅವುಗಳನ್ನು ತಾವುಗಳೆಲ್ಲರೂ ಸ್ಮರಿಸಿ ಪಾಲಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಅನ್ನಪೂರ್ಣಮ್ಮ ದಾನಪ್ಪನವರ ಮಾತನಾಡಿ, ಶರಣ, ಶರಣೆಯರ ಕೊಡುಗೆಯಿಂದ ''ಶರಣ ಧರ್ಮ''ವು ಸಾಮಾಜಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಅಗಾಧವಾಗಿ ಬೆಳೆದು ನಿಂತಿದೆ. ಅವರು ತಮ್ಮ ಅನುಭವಗಳನ್ನು ವಚನಗಳ ರೂಪದಲ್ಲಿ ಬರೆದು ಸಮಾಜ ಸುಧಾರಕರಾದರು. ಜಾತಿ, ಲಿಂಗ ತಾರತಮ್ಯಗಳಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಂಡವರಾಗಿದ್ದರು ಎಂದರು.ಸುನಂದಮ್ಮ ತಿಳವಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರಾಜೇಶ್ವರಿ ಪಾಟೀಲ ಮಾತನಾಡಿದರು.
ಗೀತಾ ಜಂಬಗಿ, ಕಸ್ತೂರಿ ಪಾಟೀಲ, ಜಯಶ್ರೀ ಮುರಡಪ್ಪನವರ, ಶಕುಂತಲಮ್ಮ ಜಂಬಗಿ, ಗಿರಿಜಾ ಎಡಿಯಾಪುರ, ಚಂದ್ರಾ ದಾನಪ್ಪನವರ, ಶ್ರೀದೇವಿ ಭಟ್, ಲಕ್ಷ್ಮಿ ದೇವಗಿರಿ, ಕೆ.ಎಸ್. ಪುಷ್ಪಾ, ವಿದ್ಯಾ ಕುರುವತ್ತಿ ದ್ರಾಕ್ಷಾಯಣಮ್ಮ ಹರಪನಹಳ್ಳಿ, ಮಂಜುಳಾ ಪಾಟೀಲ ಮತ್ತಿತರರಿದ್ದರು.