ಶರಣರ ನುಡಿಗಳು ನಡೆ ಆಗಬೇಕು: ಮಂಜಮ್ಮ ಜೋಗತಿ

| Published : Oct 22 2023, 01:00 AM IST

ಸಾರಾಂಶ

ಮರ್ತ್ಯಲೋಕ ಎಂಬ ಮಹಾಮನೆ ಕಟ್ಟಿದ ಶರಣರು: ಸಮ್ಮೇಳನಾಧ್ಯಕ್ಷ ಅಂಬ್ರಯ್ಯಮಠ
ಕನ್ನಡಪ್ರಭ ವಾರ್ತೆ ಹೊಸನಗರ ಶಿವಶರಣರ ಆಶಯದಂತೆ ಸಮಾಜದಲ್ಲಿರುವ ಮೇಲು-ಕೀಳು ಎಂಬ ಭಾವನೆ ತೊಡೆಯುವ ಕೆಲಸ ಆಗಬೇಕು. ಎಲ್ಲರೂ ಸರ್ವಸಮಾನರು ಎಂಬ ಶರಣರ ನುಡಿ ಕಾರ್ಯರೂಪಕ್ಕೆ ಇಳಿಯಬೇಕಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಿ.ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು. ಪಟ್ಟಣದ ಕುವೆಂಪು ವಿದ್ಯಾಶಾಲೆ ಆವರಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಘಟಕ ಆಶ್ರಯದಲ್ಲಿ 6ನೇ ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರೌಢಶಾಲೆ ತನಕ ಕನ್ನಡ ಮಾಧ್ಯಮ ಕಡ್ಡಾಯವಾಗಲಿ. ವಚನ, ದಾಸರ ಪದಗಳು ಮಕ್ಕಳ ಬಾಯಲ್ಲಿ ಹಾಡಾಗಿ ಬರಲಿ. ನಮ್ಮ ಜಾನಪದ, ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು ಎಂದು ಹೇಳಿದರು. ಆನಂದಪುರ ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮನೆ ಮನೆಗಳಿಗೆ ಶರಣ ಸಾಹಿತ್ಯವನ್ನು ಕೊಂಡೊಯ್ಯುವ ಕೆಲಸ ಪರಿಷತ್ತಿನಿಂದ ಆಗಲಿ ಎಂದು ಹಾರೈಸಿದರು. ಮೂಲೆಗದ್ದೆ ಮಠದ ಅಭಿನವ ಚನ್ನಬಸವಸ್ವಾಮಿ ನೇತೃತ್ವ ವಹಿಸಿ ಮಾತನಾಡಿ, ಶರಣ ಸಾಹಿತ್ಯಕ್ಕೆ ದತ್ತಿದಾನಿಗಳ ಅವಶ್ಯಕತೆ ಇದೆ. ದತ್ತಿದಾನಿಗಳ ಸಂಖ್ಯೆ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಾಗಬೇಕಿದೆ ಎಂದರು. ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಮೊಬೈಲ್ ಗೀಳಿಗೆ ಬಿದ್ದ ಮಕ್ಕಳು, ದೊಡ್ಡವರು ಪುಸ್ತಕ ಓದುವ ಸಂಸ್ಕೃತಿ ಮರೆತಿದ್ದಾರೆ ಎಂದು ವಿಷಾದಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎನ್. ಮಹಾರುದ್ರ ಆಶಯ ನುಡಿ ಮಾತನಾಡಿದರು. ಕಾರ್ಯಾಧ್ಯಕ್ಷ ಬಿ.ಜಿ. ಚಂದ್ರಮೌಳಿಗೌಡ ಪ್ರಾಸ್ತಾವಿಕ ಮಾತನಾಡಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಸೊನಲೆ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ರೇವಣಪ್ಪ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ ಸ್ವಾಗತಿಸಿದರು. ಅನುಭವ ಮಂಟಪದಲ್ಲಿ ಗೋಷ್ಠಿ: ಸಮ್ಮೇಳನದಲ್ಲಿ ಮಲೆನಾಡು ಶರಣ ಪರಂಪರೆ, ಸಮ್ಮೇಳನಾಧ್ಯಕ್ಷರ ಬದುಕು ಬರಹ, ಅಕ್ಕ ಮಹಾದೇವಿ ಸಂದೇಶಸಾರ ಕುರಿತಂತೆ ವಿಚಾರ ಗೋಷ್ಠಿ ಹಾಗೂ ಸಂವಾದದಲ್ಲಿ ಡಾ.ಶ್ರೀಪತಿ ಹಳಗುಂದ, ವಸುಧಾ ಚೈತನ್ಯ ಹಾಗೂ ಜಯಂತಿ ಅಕ್ಕ ಭಾಗವಹಿಸಿದ್ದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಪ್ರಮುಖ ಬೀದಿಯಲ್ಲಿ ಸಮ್ಮೇಳನ ಅಧ್ಯಕ್ಷ ಹಿರಿಯ ಸಾಹಿತಿ ಅಂಬ್ರಯ್ಯಮಠ ಅವರ ಮೆರವಣಿಗೆಗೆ ಉದ್ಯಮಿ ಶ್ರೀನಿವಾಸ್‍ ಕಾಮತ್ ಮೆರವಣಿಗೆಗೆ ಚಾಲನೆ ನೀಡಿದರು. ಎನ್.ಆರ್. ದೇವಾನಂದ್, ಎಚ್.ಎನ್. ಶ್ರೀಪತಿ ರಾವ್ ವಚನಕಟ್ಟುಗಳಿಗೆ ಮತ್ತು ಬಸವಣ್ಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಇದಕ್ಕೂ ಮೊದಲು ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಅವರು ರಾಷ್ಟ್ರಧ್ವಜಾರೋಹಣ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ತ.ಮ. ನರಸಿಂಹ ನಾಡದ್ವಜ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎನ್. ಮಹಾರುದ್ರ ಪರಿಷತ್ತು ಧ್ವಜಾರೋಹಣ ನೆರವೇರಿಸಿದರು. ಪಿಕಾರ್ಡ್ ಅಧ್ಯಕ್ಷ ಎಂ.ವಿ. ಜಯರಾಮ್ ಕೆಳದಿ ಶಿವಪ್ಪ ನಾಯಕ ಜ್ಯೋತಿ ಸ್ವಾಗತಿಸಿದರು. - - - ಬಾಕ್ಸ್‌-1 ಮರ್ತ್ಯಲೋಕ ಎಂಬ ಮಹಾಮನೆ ಕಟ್ಟಿದ ಶರಣರು: ಅಂಬ್ರಯ್ಯಮಠ ಶಿವಶರಣರು ದೇವರನ್ನು ದೇವಾಲಯದಿಂದ ದೇಹಾಲಯಕ್ಕೆ ತಂದು ಸದಾ ಎಲ್ಲರಿಗೂ ಲಭ್ಯವಾಗುವಂತೆ ಮಾಡಿದರು ಎಂದು ಸಮ್ಮೇಳನಾಧ್ಯಕ್ಷ ಅಂಬ್ರಯ್ಯ ಮಠ ಹೇಳಿದರು. ಸಾಹಿತ್ಯ ಮತ್ತು ಇತಿಹಾಸಗಳು ಜೀವನಪ್ರೀತಿ ಹಾಗೂ ಜನರ ಪ್ರೀತಿಗಳನ್ನು ಕೊಡುತ್ತದೆ ಹೊರತು, ದ್ವೇಶ, ವೈರತ್ವ ಅಲ್ಲ. ಶರಣರು ಕಟ್ಟಿದ್ದು ಮರ್ತ್ಯಲೋಕ ಎಂಬ ಮಹಾಮನೆಯನ್ನು. ಅಲ್ಲಿರುವವರು ಎಲ್ಲರೂ ಒಂದೇ ಕುಟುಂಬದದವರು, ಅಲ್ಲಿ ವಿಶ್ವಭ್ರಾತೃತ್ವ, ವಿಶ್ವಕುಟುಂಬ, ಪ್ರೀತಿ, ಸಮಾನತೆ ತುಂಬಿದೆ ಎಂದು ಅಭಿಪ್ರಾಯಪಟ್ಟರು. ಶರಣರ ತತ್ವ ಅನುಷ್ಠಾನಕ್ಕೆ ಬರುವುದರೊಳಗೆ ಕ್ರಾಂತಿ ಆಯಿತು. ಅದು ಜಾರಿ ಬಂದಿದ್ದರೆ ನಮ್ಮ ಭಾರತ ದೇಶದ ಇತಿಹಾಸವೇ ಬದಲಾಗುತ್ತಿತ್ತು ಎಂದು ಅಭಿಪ್ರಾಯಿಸಿದರು. - - - -21ಎಚ್‍ಒಎಸ್1ಪಿ: ಹೊಸನಗರದಲ್ಲಿ ನಡೆದ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. - - - -21ಎಚ್‍ಒಎಸ್2ಪಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಬಿ.ಮಂಜಮ್ಮ ಜೋಗತಿ 6ನೇ ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದರು. ಆನಂದಪುರ ಮಠದ ಮುರುಘ ರಾಜೇಂದ್ರ ಶ್ರೀ, ಮೂಲೆಗದ್ದೆ ಮಠದ ಚನ್ನಬಸವ ಸ್ವಾಮೀಜಿ ಇನ್ನಿತರ ಗಣ್ಯರು ಇದ್ದರು. - - - -21ಎಚ್‍ಒಎಸ್3ಪಿ: 6ನೇ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಂಬ್ರಯ್ಯ ಮಠ ಮಾತನಾಡಿದರು.