ದಿನನಿತ್ಯ ಬದುಕಿಗೆ ಶರಣರ ವಚನ ಸಾಹಿತ್ಯ ಅಗತ್ಯ: ನಿವೃತ್ತ ಶಿಕ್ಷಕ ನಿತ್ಯಾನಂದಮೂರ್ತಿ

| Published : Nov 18 2024, 12:08 AM IST

ದಿನನಿತ್ಯ ಬದುಕಿಗೆ ಶರಣರ ವಚನ ಸಾಹಿತ್ಯ ಅಗತ್ಯ: ನಿವೃತ್ತ ಶಿಕ್ಷಕ ನಿತ್ಯಾನಂದಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಯಾದ ಎಚ್.ಆರ್. ರಮೇಶ್‌ರವರನ್ನು ಅಭಿನಂದಿಸಲಾಯಿತು. ನಂತರ ಸಂಘದ ಸದಸ್ಯರಾಗಿದ್ದ ಪರಶುರಾಮ ನಾಯಕ್, ಮಲ್ಲಿಕಾರ್ಜುನಯ್ಯ, ಸಿದ್ದಲಿಂಗಾರಾಧ್ಯ ಇವರ ಅಗಲಿಕೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ತಿಪಟೂರು

ದಿನನಿತ್ಯ ಜೀವನದಲ್ಲಿ ನಮ್ಮ ಬದುಕು ಹಸನಾಗಬೇಕಾದರೆ ಶರಣರ ವಚನ ಸಾಹಿತ್ಯ ಅತಿಮುಖ್ಯವಾಗಿದ್ದು, ಪ್ರತಿಯೊಬ್ಬರು ಅವುಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ನಿತ್ಯಾನಂದಮೂರ್ತಿ ತಿಳಿಸಿದರು.

ನಗರದ ನಿವೃತ್ತ ನೌಕರರ ಸಭಾಂಗಣದಲ್ಲಿ ನಿವೃತ್ತ ನೌಕರರ ಸಂಘದ ಮಾಸಿಕ ಸಭೆ ಅಂಗವಾಗಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹನ್ನೆರಡನೇ ಶತಮಾನ ಕನ್ನಡ ಸಾಹಿತ್ಯ ಕ್ಷೇತ್ರದ ಸುವರ್ಣಯುಗವಾಗಿ ಅಂದಿನ ಶಿವ ಶರಣ ಬಸವಾದಿ ಪ್ರಥಮರು ಸರಳ ರೂಪದಲ್ಲಿ ವಚನಗಳನ್ನು ರಚಿಸಿ, ಎಲ್ಲಾ ವರ್ಗದ ಜನರಿಗೂ ಅರ್ಥವಾಗುವಂತೆ ತಿಳಿಸಿ ವಚನ ಸಾಹಿತ್ಯ ಎಂಬ ಒಂದು ಹೊಸ ಸಾಹಿತ್ಯ ಪ್ರಕಾರದ ಸೃಷ್ಟಿಗೆ ಕಾರಣರಾದರು. ಪಂಡಿತರ, ರಾಜರ ಆಸ್ಥಾನದ ಭಾಷೆಯಾಗಿದ್ದ ಸಾಹಿತ್ಯವನ್ನು ಬಸವಾದಿ ಪ್ರಥಮರು ಹೊಸ ರೂಪವನ್ನು ಕೊಟ್ಟು ಸಾಮಾನ್ಯ ಜನರು ಓದಲು, ಬರೆಯಲು ಮತ್ತು ತಮ್ಮ ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಪಡಿಸಿಕೊಳ್ಳಲು ವಚನ ಸಾಹಿತ್ಯದ ಮೂಲಕ ಅನುವು ಮಾಡಿಕೊಟ್ಟರು. ಒಂದು ಲಕ್ಷಕ್ಕೂ ಹೆಚ್ಚು ಶಿವ ಶರಣರು ಅನುಭವ ಮಂಟಪದ ಪ್ರಜಾಪ್ರಭುತ್ವದ ಪರಿಕಲ್ಪನೆಯೊಂದಿಗೆ ಅಕ್ಕಮಹಾದೇವಿಯಂತಹ ವಚನಗಾರ್ತಿಯನ್ನು ಅಧ್ಯಕ್ಷ ಪದವಿಯಲ್ಲಿ ಕೂರಿಸುವ ಮೂಲಕ ವರ್ಗ, ವರ್ಣ, ಸಮಾನತೆಯ ಸಮಾಜದ ಕಲ್ಪನೆಗೆ ವಚನ ಸಾಹಿತ್ಯ ಅವಕಾಶ ಮಾಡಿಕೊಟ್ಟಿತು ಎಂದು ತಿಳಿಸಿದರು.

ವಿದ್ಯಾರ್ಥಿನಿ ಚರಿತ ಎಸ್. ಸುಜ ಮಕ್ಕಳ ದಿನಾಚರಣೆ ಬಗ್ಗೆ ಮಾತನಾಡಿ, ಭಾರತದ ಮೊದಲ ಪ್ರಧಾನಿ ನೆಹರುರವರಿಗೆ ಮಕ್ಕಳೆಂದರೆ ಪಂಚಪ್ರಾಣ. ಅದಕ್ಕಾಗಿ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಇಂದು ಭಾರತ ವಿಶ್ವದ ಮುಂಚೂಣಿ ದೇಶವಾಗಲು ಅಂದು ನೆಹರುರವರ ದೂರದೃಷ್ಟಿಯ ಯೋಜನೆಗಳೇ ಕಾರಣ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಯಾದ ಎಚ್.ಆರ್. ರಮೇಶ್‌ರವರನ್ನು ಅಭಿನಂದಿಸಲಾಯಿತು. ನಂತರ ಸಂಘದ ಸದಸ್ಯರಾಗಿದ್ದ ಪರಶುರಾಮ ನಾಯಕ್, ಮಲ್ಲಿಕಾರ್ಜುನಯ್ಯ, ಸಿದ್ದಲಿಂಗಾರಾಧ್ಯ ಇವರ ಅಗಲಿಕೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜಿ.ಟಿ. ಶಂಕರೇಗೌಡ, ಪ್ರಧಾನ ಕಾರ್ಯದರ್ಶಿ ಪಿ.ಆರ್. ಗುರುಸ್ವಾಮಿ, ಸದಸ್ಯರಾದ ಮಂಜಪ್ಪ, ನಂ. ಶಿವಗಂಗಪ್ಪ, ಬಸವರಾಜು, ನರಸಿಂಹಮೂರ್ತಿ, ಮಲ್ಲಪ್ಪಾಚಾರ್, ಮರುಳಪ್ಪ, ವಿಶ್ವನಾಥಯ್ಯ, ಮಹದೇವಯ್ಯ, ದಾಸೋಹ ದಾನಿಗಳಾದ ಎಲ್. ಸಿದ್ದಯ್ಯ, ಪ್ರಸನ್ನಕುಮಾರ್, ಸಿದ್ದಲಿಂಗಯ್ಯ, ಆನಂದಮೂರ್ತಿ ಮತ್ತಿತರರಿದ್ದರು.