ಬಾಗಲಕೋಟೆ ನವನಗರದಲ್ಲಿರುವ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಆವರಣದಲ್ಲಿ ಜರುಗಿದ ಲಿಂ.ಶರಣಬಸವ ಶ್ರೀಗಳ 18ನೇ ಸಂಸ್ಮರೋಣತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದುಶ್ಚಟಗಳಿಂದ ಮುಕ್ತವಾದ ಬದುಕು, ಮೂಢನಂಬಿಕೆಗಳಿಂದ ದೂರವಾದ ಧರ್ಮಾಚರಣೆ, ಶಿಕ್ಷಣದ ಮೂಲಕ ಸಾಮಾಜಿಕ ಪ್ರಗತಿ ಹಾಗೂ ವಚನಗಳ ಮೂಲಕ ಮೌಲ್ಯಾಧಾರಿತ ಜೀವನ ಈ ನಾಲ್ಕು ಆಯಾಮಗಳು ಸಮಾಜದ ಸಮಗ್ರ ಪರಿವರ್ತನೆಗೆ ಪೂರಕವಾಗಿವೆ. ಇಂತಹ ಆಶಯಗಳ ಮೂಲಕ ಶರಣಬಸವ ಶ್ರೀಗಳು ಸಮಾಜಕ್ಕೆ ಹೊಸ ದಿಕ್ಕು ತೋರಿದ ಮಹನೀಯರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ನವನಗರದಲ್ಲಿರುವ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಆವರಣದಲ್ಲಿ ಜರುಗಿದ ಲಿಂ.ಶರಣಬಸವ ಶ್ರೀಗಳ 18ನೇ ಸಂಸ್ಮರೋಣತ್ಸವ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಾಮಾಜಿಕವಾಗಿ ಹಿಂದುಳಿದ, ಅನೇಕ ಕಂದಾಚಾರಗಳಿಗೆ ಒಳಗಾಗಿದ್ದ ಭೋವಿ ಸಮಾಜಕ್ಕೆ ಜಾಗೃತಿ, ಸಂಸ್ಕಾರ ಮತ್ತು ಪ್ರಗತಿಯ ಮಾರ್ಗ ತೋರಿದ ಅವರು, ಶಾಪಗ್ರಸ್ತ ಸಮಾಜಕ್ಕೆ ವರವಾಗಿ ಬಂದ ಮಹಾತ್ಮರೆನಿಸಿಕೊಂಡರು. ಶಾಪಗ್ರಸ್ತ ಸಮಾಜಕ್ಕೆ ವರವಾಗಿ ಬಂದ ಮಹಾತ್ಮರೆನಿಸಿಕೊಂಡರು.ದುಶ್ಚಟಮುಕ್ತ ಬದುಕಿಗೆ ಆದ್ಯತೆ ನೀಡುವಂತೆ ಕರೆ ನೀಡಿದರು. ವ್ಯಕ್ತಿಯ ಬದುಕಿನ ಉನ್ನತಿಗೆ ಸದಾಚಾರ ಮತ್ತು ಶಿಸ್ತು ಅತ್ಯಗತ್ಯ ಎಂಬ ಸಂದೇಶ ಸಾರಿ, ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ, ಸಂಸ್ಕಾರಯುತ ಜೀವನ ನಡೆಸುವಂತೆ ಸಮಾಜ ಪ್ರೇರೇಪಿಸಿದರು. ವ್ಯಕ್ತಿಯ ಪರಿವರ್ತನೆಯೇ ಕುಟುಂಬದ ಸುಧಾರಣೆಗೆ, ಕುಟುಂಬದ ಸುಧಾರಣೆಯೇ ಸಮಾಜದ ಏಳಿಗೆಗೆ ನಾಂದಿಯಾಗುತ್ತದೆ ಎಂಬ ಆಶಯ ಅವರ ಸಾಮಾಜಿಕ ಚಿಂತನೆಯ ಪ್ರಮುಖ ಭಾಗವಾಗಿತ್ತು ಎಂದರು.

ಧರ್ಮದ ಹೆಸರಿನಲ್ಲಿ ಬೆಳೆದುಬಂದ ಮೂಢನಂಬಿಕೆ ಮತ್ತು ಕಂದಾಚಾರಗಳಿಂದ ಸಮಾಜವನ್ನು ಮುಕ್ತಗೊಳಿಸಿ, ವಿವೇಕ, ಮಾನವೀಯತೆ ಹಾಗೂ ನೈತಿಕ ಮೌಲ್ಯಗಳಿಗೆ ಆದ್ಯತೆ ನೀಡುವ ಧಾರ್ಮಿಕ ಜಾಗೃತಿಯ ಅಗತ್ಯವನ್ನು ಶರಣಬಸವ ಶ್ರೀಗಳ ಕಾರ್ಯದ ಆಶಯವಾಗಿ ಗುರುತಿಸಬಹುದು ಎಂದು ಅಭಿಪ್ರಾಯಪಟ್ಟರು.

ಸಚಿವ ವಿಜಯಾನಂದ ಕಾಶಪ್ಪನವರು ಮಾತನಾಡಿ, ರಾಜ್ಯಾದ್ಯಂತ ಭೋವಿ ಸಮಾಜದ ಜನರು ಸಂಖ್ಯಾಬಲ ಹೊಂದಿದ್ದರೂ ಹಿಂದೆ ಸಂಘಟಿತ ಶಕ್ತಿಯಾಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಸಮಾಜವನ್ನು ಒಗ್ಗೂಡಿಸಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಕೀರ್ತಿ ಶರಣಬಸವ ಸ್ವಾಮೀಜಿಗಳಿಗೆ ಸಲ್ಲುತ್ತದೆ ಎಂದು ಹೇಳಿದರು.

ಸಮಾಜ ಸಂಘಟನೆಯ ಕಾರ್ಯಕ್ಕೆ ಚಾಲನೆ ನೀಡಿ, ರಾಜ್ಯಾದ್ಯಂತ ಸಮಾಜವನ್ನು ಒಗ್ಗೂಡಿಸಲು ಶ್ರಮಿಸಿದ್ದರು. ಅವರು ಹಾಕಿಕೊಟ್ಟ ಅಡಿಪಾಯ ಗಟ್ಟಿಗೊಳಿಸಿ, ಸಮಾಜದ ಸಂಘಟನೆಯನ್ನು ಮತ್ತಷ್ಟು ವಿಸ್ತರಿಸುವ ಕಾರ್ಯವನ್ನು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳು ಮುಂದುವರಿಸಿದ್ದಾರೆ ಎಂದು ಸ್ಮರಿಸಿದರು.

ಭಾಜಪ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿದರು. ಯಾದವ ಗುರುಪೀಠದ ಜಗದ್ಗುರು ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಕುಂಬಾರ ಗುರುಪೀಠದ ಜಗದ್ಗುರು ಬಸವ ಗುಂಡಯ್ಯ ಸ್ವಾಮೀಜಿ, ಹಡಪದ ಗುರುಪೀಠದ ಜಗದ್ಗುರು ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಶಿಕಾರಿಪುರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಅವರುಗಳು ಸಾನ್ನಿಧ್ಯ ವಹಿಸಿದ್ದರು.

ಶಾಸಕರಾದ ಉಮೇಶ ಎಚ್ ಮೇಟಿ, ಅಶೋಕ ಲಿಂಬಾವಳಿ, ಸಿದ್ದು ಬಂಡಿ, ಪರಸಪ್ಪ ಅಮರಾವತಿ, ರವಿ ಗುಂಜಿಕರ್, ತಿಪ್ಪಣ್ಣ ಒಡೆಯರಾಜು, ಪ್ರೊ. ಕರಿದುರ್ಗಣ್ಣನವರ ಮಾತನಾಡಿದರು.

ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ದಿಲೀಪ ರಾಠೋಡ, ಅನಿಲ ಮಮದಪುರ, ರಾಮು ಹೊಸಪೇಟೆ, ಬಸವರಾಜ ಬಳ್ಳಾರಿ, ನರೇಶ ಮಲ್ನಾಡು, ಸಿದ್ರಾಮು ದಂಡಲ್ಕೂರು ಸೇರಿ ಸಮುದಾಯದ ಪ್ರಮುಖ ಮುಂಖಡರು ಉಪಸ್ಥಿತರಿದ್ದರು.

ಶ್ರೀಕಾಂತ ದೇವರು ವಚನಾಭೀಷೇಕ ನಡೆಸಿದರು. ಮುತ್ತು ಮೂರಡಿ ನಿರೂಪಿಸುದರು. ಸಂಜಯ ಪ್ರಭಾಕರ ಸ್ವಾಗತಿಸಿದರು. ಆನಂದ ವಡ್ಡರ ಪ್ರಾರ್ಥನೆ ವಚನ ಗಾಯನ ಮಾಡಿದರು.