ಶರಣಬಸವ ವಿಶ್ವವಿದ್ಯಾಲಯದ ಬಿಬಿಎ ವಿಭಾಗದ ಅಂತಿಮ ವರ್ಷದ 11 ಪ್ರತಿಭಾವಂತ ವಿದ್ಯಾರ್ಥಿನಿಯರು ಬೆಂಗಳೂರಿನ ಪ್ರತಿಷ್ಠಿತ ಲಾಜಿಸ್ಟಿಕ್ಸ್ ಕಂಪನಿ ಗ್ಲೋಲಾಜಿಕ್ಸ್ ಸೊಲ್ಯೂಷನ್ಸ್ನಲ್ಲಿ ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಬಿಬಿಎ ವಿದ್ಯಾರ್ಥಿನಿಯರಿಗಾಗಿ ವಿಶೇಷವಾಗಿ ಆಯೋಜಿಸಲಾಗಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿ ಈ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದ ಬಿಬಿಎ (ಮಹಿಳೆಯರಿಗೆ ಮಾತ್ರ) ವಿಭಾಗದ ಅಂತಿಮ ವರ್ಷದ 11 ಪ್ರತಿಭಾವಂತ ವಿದ್ಯಾರ್ಥಿನಿಯರು ಬೆಂಗಳೂರಿನ ಪ್ರತಿಷ್ಠಿತ ಲಾಜಿಸ್ಟಿಕ್ಸ್ ಕಂಪನಿ ಗ್ಲೋಲಾಜಿಕ್ಸ್ ಸೊಲ್ಯೂಷನ್ಸ್ನಲ್ಲಿ ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಬಿಬಿಎ ವಿದ್ಯಾರ್ಥಿನಿಯರಿಗಾಗಿ ವಿಶೇಷವಾಗಿ ಆಯೋಜಿಸಲಾಗಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿ ಈ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.
ಮಂಗಳವಾರ ಕಲಬುರಗಿ ನಗರದಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಆಯ್ಕೆಯಾದ 11 ವಿದ್ಯಾರ್ಥಿನಿಯರಲ್ಲಿ ಏಳು ವಿದ್ಯಾರ್ಥಿನಿಯರು ವಾರ್ಷಿಕ 6.20 ಲಕ್ಷ ರು. ವೇತನದ ಪ್ಯಾಕೇಜ್ನೊಂದಿಗೆ “ಇನ್ಸೈಡ್ ಸೇಲ್ಸ್ ರೆಪ್ರೆಸೆಂಟೇಟಿವ್” ಹುದ್ದೆಗೆ ಆಯ್ಕೆಯಾಗಿದ್ದರೆ, ಉಳಿದ ನಾಲ್ವರು ವಾರ್ಷಿಕ 3.64 ಲಕ್ಷ ರೂ. ವೇತನದ ಪ್ಯಾಕೇಜ್ನೊಂದಿಗೆ ಮಾನವ ಸಂಪನ್ಮೂಲ ಮತ್ತು ಪ್ರತಿಭಾ ನೇಮಕಾತಿ (ಎಚ್ಆರ್/ಟ್ಯಾಲೆಂಟ್ ಅಕ್ವಿಸಿಷನ್) ವಿಭಾಗದ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.ಬಿಬಿಎ ವಿಭಾಗದ ಮುಖ್ಯಸ್ಥೆ ಪ್ರೊ. ಶಿಲ್ಪಾ ಕಂದಗೋಳ ಮಾಹಿತಿ ನೀಡಿ, ಸಹನಾ ತಡಕಲ್, ಪ್ರಿಯಾಂಕಾ, ಹಫ್ಸಾ ಶಿರೀನ್ ಶೇಕ್, ಸುಷ್ಮಿತಾ, ಬಾಬನ್ಬೀ, ಅಫ್ರೀನ್ ಕೌಸರ್ ಹಾಗೂ ಮಧುಮತಿ ಹಿರೇಮಠ ಅವರು ವಾರ್ಷಿಕ 6.20 ಲಕ್ಷ ರು. ವೇತನದ ಪ್ಯಾಕೇಜ್ನೊಂದಿಗೆ “ಇನ್ಸೈಡ್ ಸೇಲ್ಸ್ ರೆಪ್ರೆಸೆಂಟೇಟಿವ್” ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಅದೇ ರೀತಿ ಮುಸ್ಕಾನ್ ಅಂಜುಮ್, ಭವ್ಯಾ, ಮಹೇಶ್ವರಿ ಹಾಗೂ ಅಸ್ರಾ ನೌಸೀನ್ ಅವರು ವಾರ್ಷಿಕ 3.64 ಲಕ್ಷ ರು. ವೇತನದ ಪ್ಯಾಕೇಜ್ನೊಂದಿಗೆ ಮಾನವ ಸಂಪನ್ಮೂಲ ಮತ್ತು ಪ್ರತಿಭಾ ನೇಮಕಾತಿ ವಿಭಾಗದ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ಶಿಲ್ಪಾ ವಿವರಿಸಿದರು.ವಿದ್ಯಾರ್ಥಿನಿಯರ ಈ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರು ಆಶೀರ್ವದಿಸಿ ಶುಭ ಕೋರಿದ್ದಾರೆ. ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿಶ್ವವಿದ್ಯಾಲಯದ ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ ಮಾಕಾ, ಮೌಲ್ಯಮಾಪನ ಕುಲಸಚಿವ ಡಾ.ಎಸ್.ಎಚ್. ಹೊನ್ನಳ್ಳಿ ಹಾಗೂ ಡೀನ್ ಡಾ.ಶಿವಕುಮಾರ ಜವಳಿಗಿ ಅವರು ಹರ್ಷ ವ್ಯಕ್ತಪಡಿಸಿ ಆಯ್ಕೆಯಾದ ವಿದ್ಯಾರ್ಥಿನಿಯರು ಹಾಗೂ ಮಾರ್ಗದರ್ಶನ ನೀಡಿದ ಬೋಧಕ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.
ವಿದ್ಯಾರ್ಥಿನಿಯರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ವಿಶ್ವವಿದ್ಯಾಲಯದ ಬಿಬಿಎ ವಿಭಾಗದ ಈ ಸಾಧನೆ ಗಮನಾರ್ಹವಾಗಿದ್ದು, ವಿದ್ಯಾರ್ಥಿನಿಯರ ವೃತ್ತಿಪರ ಬೆಳವಣಿಗೆಗೆ ಮತ್ತು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಪ್ರೇರಣೆ ನೀಡಿದೆ.