ಬೇವಿನಹಳ್ಳಿ ಗ್ರಾಮದ ಶ್ರೀಶರಣ ಬಸವೇಶ್ವರ ಸ್ವಾಮಿ ಮಹಾರಥೋತ್ಸವ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ರಥೋತ್ಸವ ಹಿನ್ನೆಲೆಯಲ್ಲಿ ಬೆಳಗಿನ ಜಾವ ಮಂಗಳವಾದ್ಯಗಳಿಂದ ಗಂಗಾ ಜಲ ತಂದು ದೇವರ ಮೂರ್ತಿಗೆ ಅಭಿಷೇಕ ಮಾಡಲಾಯಿತು.
ಬಳ್ಳಾರಿ: ತಾಲೂಕಿನ ಬೇವಿನಹಳ್ಳಿ ಗ್ರಾಮದ ಶ್ರೀಶರಣ ಬಸವೇಶ್ವರ ಸ್ವಾಮಿ ಮಹಾರಥೋತ್ಸವ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ರಥೋತ್ಸವ ಹಿನ್ನೆಲೆಯಲ್ಲಿ ಬೆಳಗಿನ ಜಾವ ಮಂಗಳವಾದ್ಯಗಳಿಂದ ಗಂಗಾ ಜಲ ತಂದು ದೇವರ ಮೂರ್ತಿಗೆ ಅಭಿಷೇಕ ಮಾಡಲಾಯಿತು.
ಬಳಿಕ ವಿವಿಧ ಪುಷ್ಪಗಳಿಂದ ಅಲಂಕರಿಸಲಾಯಿತು. ರಥೋತ್ಸವ ನಿಮಿತ್ತ ಸ್ವಾಮಿಯ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಪಂಚಕಳಸ ಪೂಜೆ ಹಾಗೂ ಶಕ್ತಿದೇವತೆಗಳ ಆರಾಧನೆ, ಗಣಪತಿ ಹೋಮ, ಉಮಾಮಹೇಶ್ವರ ಹೋಮ ಹಾಗೂ ವಿಶೇಷವಾಗಿ ಲಕ್ಷ್ಮೀಚಂಡಿ ಹೋಮಗಳು ಶಾಸ್ತ್ರೋಕ್ತವಾಗಿ ನಡೆದವು. ಜಗದ್ಗುರು ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಶ್ರೀಈಶ್ವರ, ಆಂಜನೇಯ, ಸುಂಕಮ್ಮ ದೇವಿ ಹಾಗೂ ಶರಣಬಸವೇಶ್ವರ ದೇವಸ್ಥಾನಗಳ ಗೋಪುರಗಳಿಗೆ ಕಳಸಾರೋಹಣ ಮತ್ತು ಪ್ರಾಣ ಪ್ರತಿಷ್ಠಾಪನೆ ನಡೆಯಿತು. ವೇದ ಮೂರ್ತಿ ಬಿ.ಎಂ. ಶಿವಪ್ಪಸ್ವಾಮಿ ಶಾಸ್ತ್ರಿ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.ಬಣ್ಣ ಬಣ್ಣದ ವಸ್ತ್ರಗಳಿಂದ ಅಲಂಕರಿಸಿದ ರಥಕ್ಕೆ ಭಕ್ತರು ಹೂ, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿ ಮೆರೆದರು. ಭಕ್ತರು ಜಾತಿ ಭೇದ ಭಾವ, ಪಂಥ ಮರೆತು ಶ್ರದ್ಧಾ ಭಕ್ತಿಯಿಂದ ಸರದಿ ಸಾಲಿನಲ್ಲಿನಿಂತು ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು. ಸುಖ, ಶಾಂತಿ, ಸಮೃದ್ಧಿ ಸೇರಿ ಇಷ್ಟಾರ್ಥ ಸಿದ್ಧಿಗೆ ಭಕ್ತರು ದೇವರಲ್ಲಿ ಪ್ರಾರ್ಥಿಸಿದರು.ಭಕ್ತರು ಮನೆಯಲ್ಲಿ ತಯಾರಿಸಿದ ಸಿಹಿ ಪದಾರ್ಥಗಳನ್ನು ದೇವರಿಗೆ ನೈವೇದ್ಯ ಮಾಡಿ ಪುನೀತಗೊಂಡರು. ದೇವಾಲಯದ ಆವರಣದಲ್ಲಿ ದೇವರ ನಾಮ ಜಪ, ಭಕ್ತಿ ಗೀತೆಗಳು ಮೊಳಗಿದವು. ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಯುವಕ-ಯುವತಿಯರು ಸಾಂಪ್ರದಾಯಿಕ ಉಡುಪಿನಲ್ಲಿ ಗಮನ ಸೆಳೆದರು. ದೇವಾಲಯ ಹಾಗೂ ಬೀದಿಗಳು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ಶ್ರೀಶರಣ ಬಸವೇಶ್ವರರ ಪುರಾಣ ಹಾಗೂ ಮಹಾರಥೋತ್ಸವ ನಡೆಯುತ್ತಿದ್ದು, ಬಳ್ಳಾರಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ರಥೋತ್ಸವಕ್ಕೆ ಆಗಮಿಸಿ ಭಕ್ತಿ ಸಮರ್ಪಿಸಿದರು.