ನೆಲಜೇರಿ ಶರಣಬಸವೇಶ್ವರ ರಥೋತ್ಸವ ಸಂಪನ್ನ

| Published : Apr 01 2024, 12:47 AM IST

ಸಾರಾಂಶ

ತಾಲೂಕಿನ ನೆಲಜೇರಿ ಗ್ರಾಮದ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವ ನಿಮಿತ್ತ ಸಾಮೂಹಿಕ ವಿವಾಹ ಮತ್ತು ಮಹಾರಥೋತ್ಸವ ಶನಿವಾರ ಸಂಜೆ ಜರುಗಿದವು.

ಪುರಾಣ ಮಹಾಮಂಗಲೋತ್ಸವ ನಿಮಿತ್ತ ಸಾಮೂಹಿಕ ವಿವಾಹಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನ ನೆಲಜೇರಿ ಗ್ರಾಮದ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವ ನಿಮಿತ್ತ ಸಾಮೂಹಿಕ ವಿವಾಹ ಮತ್ತು ಮಹಾರಥೋತ್ಸವ ಶನಿವಾರ ಸಂಜೆ ಜರುಗಿದವು.

ಬೆಳಗ್ಗೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿ-ವಿಧಾನ ಜರುಗಿದವು. ಭಕ್ತರು ಮಡಿಯಿಂದ ಬಂದು ಪೂಜೆ ಸಲ್ಲಿಸಿದರು. ನೈವೇದ್ಯ ಸಮರ್ಪಿಸಿದರು. ಹರಕೆ ಹೊತ್ತ ಭಕ್ತರು ಹರಕೆ ತೀರಿಸಿದರು. ಅನ್ನಸಂತರ್ಪಣೆ ಜರುಗಿತು.

ಸಂಜೆ ಆಗುತ್ತಿದ್ದಂತೆ ಮಹಾರಥೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದರು. ಭಕ್ತರು ರಥ ಸಾಗುತ್ತಿದ್ದಂತೆ ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ಭಕ್ತಿ ಮೆರೆದರು. ಶ್ರೀ ಶರಣಬಸವೇಶ್ವರ ದೇವರ ಜಯಘೋಷ ಮುಗಿಲು ಮುಟ್ಟಿದ್ದವು. ಗ್ರಾಮ, ಸುತ್ತಮುತ್ತಲಿನ ಗ್ರಾಮ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು.

ರಥೋತ್ಸವಕ್ಕೆ ಮೈನಳ್ಳಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಕುಕನೂರಿನ ಶ್ರೀ ಮಹಾದೇವ ಸ್ವಾಮೀಜಿ, ಮಂಗಳೂರಿನ ಅರಳೇಲೆ ಹಿರೇಮಠದ ಸ್ವಾಮೀಜಿ ಚಾಲನೆ ನೀಡಿದರು.

ಆಶೀವರ್ಚನ ನೀಡಿದ ಮೈನಳ್ಳಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಬದುಕಿನ ಕ್ಷಣಗಳನ್ನು ಪ್ರತಿಯೊಬ್ಬರೂ ನಿತ್ಯ ಸವಿಯಬೇಕು. ರುಚಿಯಾದ ಹಣ್ಣನ್ನು ಮನುಷ್ಯ ಹೇಗೆ ಸವಿಯುತ್ತಾನೆಯೋ ಹಾಗೆ ಸುಂದರ ಕ್ಷಣ, ಸತ್ಯದ ಹಾದಿಯಲ್ಲಿ ನಡೆಯುವುದನ್ನು ರೂಢಿಸಿಕೊಳ್ಳಬೇಕು. ಕೆಟ್ಟತನ ಅನ್ನುವುದು ಕೆಟ್ಟ ಹಣ್ಣಿದ್ದಂತೆ. ಅದನ್ನು ತಿನ್ನಲು ಸಾದ್ಯವೇ? ದೂರ ಎಸೆಯುತ್ತೇವೆ. ಅದೇ ರೀತಿ ಮನುಷ್ಯದಲ್ಲಿ ಕೆಟ್ಟ ಗುಣ ಇರಬಾರದು. ಕೆಟ್ಟ ಗುಣಗಳನ್ನು ದೂರ ಎಸೆಯಬೇಕು ಎಂದು ಹೇಳಿದರು.

ಕುಕನೂರಿನ ಶ್ರೀ ಮಹಾದೇವ ಸ್ವಾಮೀಜಿ ಮಾತನಾಡಿ, ನೆಲಜೇರಿ ಪುಟ್ಟ ಗ್ರಾಮವಾದರು ಸಹ ಜನರು ಒಗ್ಗಟ್ಟಿನಿಂದ ಸೇರಿ ಸಂಭ್ರಮದಿಂದ ಜಾತ್ರೆ ಆಚರಿಸುತ್ತಿದ್ದಾರೆ. ಇದೊಂದು ಮಾದರಿ ಗ್ರಾಮ. ಗ್ರಾಮಸ್ಥರ ಒಗ್ಗಟ್ಟು ಸದಾ ಹೀಗೆ ಇರಬೇಕು. ರಥೋತ್ಸವಗಳು ಗ್ರಾಮದ ಹಿರಿಮೆ ಹೆಚ್ಚಿಸುತ್ತವೆ ಎಂದು ತಿಳಿಸಿದರು.