ಸಾರಾಂಶ
ಶ್ರೀ ಶರಣಬಸವೇಶ್ವರ ಫಾರ್ಮಸಿ ಕಾಲೇಜು ಶೈಕ್ಷಣಿಕ ಏಳಿಗೆಗಾಗಿ ಮತ್ತು ವೃತ್ತಿಪರ ಅಭಿವೃದ್ಧಿಗೆ ಸದಾ ಬದ್ಧವಾಗಿದೆ. ಔಷಧಿ ಕ್ಷೇತ್ರದಲ್ಲಿ ಭವಿಷ್ಯದ ನಾಯಕರನ್ನು ರೂಪಿಸಲು ಪ್ರಯತ್ನಿಸುತ್ತಿದೆ
ಕನ್ನಡಪ್ರಭ ವಾರ್ತೆ ವಿಜಯಪುರ
ಶ್ರೀ ಶರಣಬಸವೇಶ್ವರ ಫಾರ್ಮಸಿ ಕಾಲೇಜು ಶೈಕ್ಷಣಿಕ ಏಳಿಗೆಗಾಗಿ ಮತ್ತು ವೃತ್ತಿಪರ ಅಭಿವೃದ್ಧಿಗೆ ಸದಾ ಬದ್ಧವಾಗಿದೆ. ಔಷಧಿ ಕ್ಷೇತ್ರದಲ್ಲಿ ಭವಿಷ್ಯದ ನಾಯಕರನ್ನು ರೂಪಿಸಲು ಪ್ರಯತ್ನಿಸುತ್ತಿದೆ ಎಂದು ಎಸ್‌ಎಸ್‌ಬಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಸದಸ್ಯ ಸತ್ಯಜೀತ ಪಾಟೀಲ ಹೇಳಿದರು.ನಗರದ ಶ್ರೀ ಶರಣಬಸವೇಶ್ವರ ಫಾರ್ಮಸಿ ಕಾಲೇಜು ಪ್ರಥಮ ಪದವಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಂಸ್ಥೆಯ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ, ಬೋಧಕ ವರ್ಗ ಹಾಗೂ ಸಿಬ್ಬಂದಿ ಮಹತ್ತರ ಪಾತ್ರ ವಹಿಸಿದ್ದು, ಅವರ ಅನುಭವ ಸಂಪೂರ್ಣ ಮಾರ್ಗದರ್ಶನದ ಫಲವಾಗಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಎಲ್ಲರ ಸಹಕಾರದಿಂದಲೇ ಶ್ರೀ ಶರಣಬಸವೇಶ್ವರ ಫಾರ್ಮಸಿ ಕಾಲೇಜು ತನ್ನ 2020-2024 ಬ್ಯಾಚ್‌ನ ಬಿ.ಫಾರ್ಮಾ ವಿದ್ಯಾರ್ಥಿಗಳಿಗೆ ಪ್ರಥಮ ಪದವಿ ಪ್ರದಾನ ಮಾಡಲು ಸಾಧ್ಯವಾಯಿತು ಎಂದರು.
ಎಸ್‌ಎಸ್‌ಬಿಸಿಪಿ ಪ್ರಾಂಶುಪಾಲ ಡಾ.ಎಚ್.ಶಿವಕುಮಾರ ಮಾತನಾಡಿ, ನಿರಂತರ ಅಧ್ಯಯನ, ನೈತಿಕತೆ ಮತ್ತು ಆವಿಷ್ಕಾರಗಳ ಮಹತ್ವವನ್ನು ಮನದಟ್ಟು ಮಾಡಿದರು. ಪದವೀಧರರನ್ನು ಅಭಿನಂದಿಸಿ, ಕಾಲೇಜಿನಲ್ಲಿ ಕಲಿತ ಮೌಲ್ಯಗಳನ್ನು ಸದಾ ಅನುಸರಿಸುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಮುಖ್ಯ ಅತಿಥಿಗಳಾದ ಡಾ.ವಿ.ಜಿ.ಜಮಖಂಡಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ.ಸಂತೋಷ ಇಂಡಿ, ಡಾ.ಜಿ.ಎ.ಕಲ್ಯಾಣಿ, ಪ್ರೊ.ಎಸ್.ಕೆ.ಪಾಟೀಲ, ಎಸ್‌ಎಸ್‌ಬಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಈರಣ್ಣ ಶಿರಾಳಶೆಟ್ಟಿ, ಎಸ್‌ಎಸ್‌ಬಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಜ್ವಲ್ ಮಾತನಾಡಿ, ಪದವೀಧರರಿಗೆ ಶುಭಾಶಯ ತಿಳಿಸಿದರು. ಇದೇ ವೇಳೆ ಪಠ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪದವೀಧರರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪೋಷಕರು ಉಪಸ್ಥಿತರಿದ್ದರು.