ಶರಣಬಸವೇಶ್ವರ ಜಾತ್ರಾಮಹೋತ್ಸವ ಸಂಪನ್ನ

| Published : Dec 28 2023, 01:45 AM IST

ಸಾರಾಂಶ

ಪುರಾಣ ಮಂಗಲೋತ್ಸವದ ನಿಮಿತ್ತ ಬೆಳಗ್ಗೆ ದೇವಸ್ಥಾನದಲ್ಲಿ ಆಂಜನೇಯ, ಈಶ್ವರ ಹಾಗೂ ಶ್ರೀ ಶರಣಬಸವೇಶ್ವರ ದೇವರಿಗೆ ಪೂಜೆ, ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಪೂಜೆಗಳು ನಡೆದವು.

ಕಾರಟಗಿ: ತಾಲೂಕಿನ ತ್ರಿವಳಿ ಗ್ರಾಮಗಳಾದ ಬೂದುಗುಂಪಾ, ತಿಮ್ಮಾಪುರ ಮತ್ತು ಹಾಲಸಮುದ್ರದಲ್ಲಿ ಆರಾಧ್ಯ ದೈವ ಶ್ರೀಶರಣ ಬಸವೇಶ್ವರ ೪೫ ವರ್ಷದ ಪುರಾಣ ಮಂಗಲೋತ್ಸವ ನಿಮಿತ್ತ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಅತ್ಯಂತ ವೈಭವದಿಂದ ನಡೆದವು.

ಸೋಮವಾರದಿಂದ ಬುಧವಾರ ಸಂಜೆಯವರೆಗೆ ಇಡೀ ತ್ರಿವಳಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಜಾತ್ರಾಮಹೋತ್ಸವದಲ್ಲಿ ಸಾಮೂಹಿಕವಾಗಿ ಭಾಗವಹಿಸಿ ಅದ್ಧೂರಿಯಿಂದ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಬೂದುಗುಂಪಾ ಕಲಬುರಗಿಯ ಶ್ರೀಶರಣ ಬಸವೇಶ್ವರ ೪೫ನೇ ವರ್ಷದ ಪುರಾಣ ಮಂಗಲೋತ್ಸವ ಹಾಗೂ ಆಂಜನೇಯಸ್ವಾಮಿ ಹಾಗೂ ಶ್ರೀಕಾಶಿ ವಿಶ್ವನಾಥೇಶ್ವರ ಕಾರ್ತಿಕೋತ್ಸವ ಮತ್ತು ರಥೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಮಂಗಳವಾರ ೧೩ ಜೋಡಿ ಸಾಮೂಹಿಕ ವಿವಾಹ ಹಾಗೂ ವಟುಗಳಿಗೆ ಅಯ್ಯಚಾರ ದೀಕ್ಷಾ ಕಾರ್ಯಕ್ರಮಗಳು ಜರುಗಿದವು.

ಬುಕ್ಕಸಾಗರದ ಸಂಸ್ಥಾನಮಠ ಗುರುಕರಿಸಿದ್ದೇಶ್ವರ ವಿಶ್ವಾರಾಧ್ಯಸ್ವಾಮಿಗಳು ಮತ್ತು ಗ್ರಾಮದ ಕೊಟ್ಟೂರೇಶ್ವರ ಶಾಖಾ ವಿರಕ್ತಮಠದ ಸಿದ್ದೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು.ನೂತನ ವಧುವರರಿಗೆ ಬುಕ್ಕಸಾಗರದ ಗುರುಕರಿಸಿದ್ದೇಶ್ವರ ವಿಶ್ವಾರಾಧ್ಯಸ್ವಾಮಿ ಆಶೀರ್ವಚನ ನೀಡಿದರು. ಸಾಮೂಹಿಕ ಮದುವೆ ಹಾಗೂ ಅಯ್ಯಾಚಾರ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡು ನೂತನ ದಂಪತಿಗೆ ಅಕ್ಷತೆ ಹಾಕಿ ಶುಭ ಹಾರೈಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಬುದುಗುಂಪಾ, ತಿಮ್ಮಾಪುರ, ಹಾಲಸಮುದ್ರಾ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಪುರಾಣ ಮಂಗಲೋತ್ಸವದ ನಿಮಿತ್ತ ಬೆಳಗ್ಗೆ ದೇವಸ್ಥಾನದಲ್ಲಿ ಆಂಜನೇಯ, ಈಶ್ವರ ಹಾಗೂ ಶ್ರೀ ಶರಣಬಸವೇಶ್ವರ ದೇವರಿಗೆ ಪೂಜೆ, ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಪೂಜೆಗಳು ನಡೆದವು.

ಸೋಮವಾರದಂದು ಕಳಸ ಕನ್ನಡ ಕುಂಭ ಮೇಳದೊಂದಿಗೆ ಶರಣಯ್ಯಸ್ವಾಮಿ ಮತ್ತು ಶರಭಯ್ಯಸ್ವಾಮಿ ನೇತೃತ್ವದಲ್ಲಿ ವೀರಗಾಸೆ ಧಾರಣೆ, ಪುರವಂತರರೊಂದಿಗೆ ಕುಂಭೋತ್ಸವ ಅತ್ಯಂತ ವೈಭವದಿಂದ ನಡೆಯಿತು.

ಬುಧವಾರ ಶ್ರೀಶರಣಬಸವೇಶ್ವರ ಪಟದ ಸವಾಲು, ಕುಂಭ, ಕಳಸ ಕನ್ನಡಿಹೊತ್ತ ಸುಮಂಗಲೆಯರೊಂದಿಗೆ ಹಾಗೂ ಭಾಜಾ ಭಜಂತ್ರಿಯೊಂದಿಗೆ ಶ್ರೀ ಶರಣಬಸವೇಶ್ವರ ಬೆಳ್ಳಿಮೂರ್ತಿ ಮೆರವಣಿಗೆ ಜತೆಗೆ ಆಂಜನೇಯ ಸ್ವಾಮಿ ಉಚ್ಚಾಯ ಜರುಗಿತು. ಸಂಜೆ ದೇವಸ್ಥಾನದಲ್ಲಿ ವಿವಿಧ ಶ್ರೀಗಳಿಂದ ಆಶೀರ್ವಚನದೊಂದಿಗೆ ಮೂರು ದಿನಗಳ ಜಾತ್ರಾ ಮಹೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.