ಸಾರಾಂಶ
ಸಂಜೆ ಅಲಂಕೃತ ರಥವನ್ನು ದೇವಸ್ಥಾನದ ಆವರಣ ದಿಂದ ಎದುರುಬಸವಣ್ಣ ಕಟ್ಟೆವರೆಗೆ ಎಳೆದು ಪುನಃ ಸ್ವಸ್ಥಳಕ್ಕೆ ಎಳೆದು ತಂದರು. ರಥ ಸಾಗಿದ ದಾರಿಯುದ್ದಕ್ಕೂ ಭಕ್ತರು ಶರಣಬಸವೇಶ್ವರ ಸ್ವಾಮಿಗೆ ಜಯಕಾರ ಕೂಗಿದರು.
ಕುರುಗೋಡು: ತಾಲೂಕಿನ ಎಚ್.ವೀರಾಪುರ ಗ್ರಾಮದಲ್ಲಿ ೧೮ನೇ ವರ್ಷದ ಶರಣಬಸವೇಶ್ವರ ರಥೋತ್ಸವ ಶನಿವಾರ ಅದ್ಧೂರಿಯಾಗಿ ಜರುಗಿತು.
ರಥೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಶರಣ ಬಸವೇಶ್ವರರ ದರ್ಶನ ಪಡೆದು ಹೂ ಹಣ್ಣು ಮತ್ತು ಕಾಯಿ ಸಮರ್ಪಿಸಿದರು.ಸಂಜೆ ಅಲಂಕೃತ ರಥವನ್ನು ದೇವಸ್ಥಾನದ ಆವರಣ ದಿಂದ ಎದುರುಬಸವಣ್ಣ ಕಟ್ಟೆವರೆಗೆ ಎಳೆದು ಪುನಃ ಸ್ವಸ್ಥಳಕ್ಕೆ ಎಳೆದು ತಂದರು. ರಥ ಸಾಗಿದ ದಾರಿಯುದ್ದಕ್ಕೂ ಭಕ್ತರು ಶರಣಬಸವೇಶ್ವರ ಸ್ವಾಮಿಗೆ ಜಯಕಾರ ಕೂಗಿದರು. ರಥಕ್ಕೆ ಹೂ ಹಣ್ಣು ಎಸೆದು ಮನದ ಹರಕೆ ತೀರಿಸಿದರು.ಎಚ್.ವೀರಾಪುರ ಸೇರಿದಂತೆ ಸುತ್ತಮುತ್ತಲಿನ ಮುಷ್ಟಗಟ್ಟೆ, ಕೆರೆಕೆರೆ, ಸೋಮಲಾಪುರ, ಕಲ್ಲುಕಂಭ, ಚಿಟಗಿನಹಾಳು, ಹಾವಿನಹಾಳು, ಎಮ್ಮಿಗನೂರು, ರ್ವಾಯಿ, ಗುತ್ತಿಗನೂರು ಗ್ರಾಮಗಳ ಸಾವಿರಾರು ಜನರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ದೇವಸ್ಥಾನದಲ್ಲಿ ಒಂದು ತಿಂಗಳಿಂದ ಜರುಗಿದ ೪೮ನೇ ವರ್ಷದ ಶರಣಬಸವೇಶ್ವರ ಪುರಾಣ ಸಂಜೆ ಸಂಪನ್ನಗೊಂಡಿತು.ದೇವಣ್ಣ ಶಾಸ್ತ್ರೀ ಕಾನಿಹಾಳ್ ಪುರಾಣ ಪ್ರವಚನ ನೀಡಿದರು. ರಾಮಲಿಂಗಪ್ಪ ಹೂಗಾರ್ ಪುರಾಣ ಪಠಣ ಮಾಡಿದರು. ನಿಜಗುಣೇಶ ಹೂಗಾರ್ ಸಂಗೀತಸೇವೆ ಸಲ್ಲಿಸಿದರು. ಎಮ್ಮಿಗನೂರು ಹಂಪಿ ಸಾವಿರ ದೇವರು ಗುರುಮಹಾಂತರ ಮಠದ ವಾಮದೇವಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು.
ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪಿಎಸ್ಐ ಸುಪ್ರಿತ್ ಮತ್ತು ಸಿಬ್ಬಂದಿ ಬಿಗಿಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.