ಹೊನ್ನಾಳಿ ಪಟ್ಟಣದ ಪ್ರಸಿದ್ಧ ಹಿರೇಕಲ್ಮಠದಲ್ಲಿ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವ ಕಾರ್ಯಕ್ರಮಗಳು ಹಿರೇಕಲ್ಮಠದ ಶ್ರೀ ಜಗದ್ಗುರು ಪಂಚಾಚಾರ್ಯ ಸಮುದಾಯ ಭವನದಲ್ಲಿ ಜರುಗಲಿವೆ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದ್ದಾರೆ.
- ಶ್ರೀ ಜಗದ್ಗುರು ಪಂಚಾಚಾರ್ಯ ಸಮುದಾಯ ಭವನದಲ್ಲಿ ಆಯೋಜನೆ: ಶ್ರೀ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಪ್ರಸಿದ್ಧ ಹಿರೇಕಲ್ಮಠದಲ್ಲಿ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವ ಕಾರ್ಯಕ್ರಮಗಳು ಹಿರೇಕಲ್ಮಠದ ಶ್ರೀ ಜಗದ್ಗುರು ಪಂಚಾಚಾರ್ಯ ಸಮುದಾಯ ಭವನದಲ್ಲಿ ಜರುಗಲಿವೆ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದ್ದಾರೆ.ಪ್ರತಿ ದಿನ ಬೆಳಗ್ಗೆ 8 ಗಂಟೆಯಿಂದ ಶ್ರೀ ಮಠದ ಕರ್ತೃಗದ್ದುಗೆಗಳಿಗೆ ಮಹಾರುದ್ರಾಭಿಷೇಕ ಹಾಗೂ ಶ್ರೀಗಳ ಇಷ್ಟಲಿಂಗ ಮಹಾಪೂಜೆ, ಮಹಾಮಂಗಳಾರತಿ ಮುಂತಾದ ಧಾರ್ಮಿಕ ಕೈಂಕರ್ಯಗಳು ಲೋಕಕಲ್ಯಾಣಾರ್ಥ ನಡೆಯಲಿವೆ. ನಿತ್ಯ ಸಂಜೆ 7 ಗಂಟೆಯಿಂದ ಶ್ರೀಮಠದಲ್ಲಿ ಮಂಜುನಾಥ ದೇವರು ಅವರಿಂದ ಶ್ರೀ ದೇವಿಪುರಾಣ ಪ್ರವಚನ ನಡೆಯಲಿದೆ. ಧರ್ಮ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ, ಉಪನ್ಯಾಸ, ಗಣ್ಯರ ಭಾಷಣ ಕಾರ್ಯಕ್ರಮಗಳು ನಡೆಯಲಿವೆ.
ಶರನ್ನವರಾತ್ರಿ ಹಾಗೂ ದಸರಾ ಮಹೋತ್ಸವದ ಮೊದಲ ದಿನವಾದ ಅ.11ರಂದು ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾ ಸ್ವಾಮೀಜಿ ನೈತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ರಾಜ್ಯ ಗಣಿ, ಭೂವಿಜ್ಞಾನ,ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ಚನ್ನಪ್ಪ ಸ್ವಾಮಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚನ್ನಯ್ಯ ಬೆನ್ನೂರ ಮಠ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್,ಶಾಸಕ ಡಿ.ಜಿ. ಶಾಂತನಗೌಡ, ಬಯಲುಸೀಮೆ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ. ಉಪನ್ಯಾಸಕ ಗೊಲ್ಲರಹಳ್ಳಿ ಮಂಜುನಾಥ ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಓಂಕಾರೇಶ್ವರ ಮಠ ಮುಸ್ಟೂರು ಶ್ರಿ ರುದ್ರಮುನಿ ಶಿವಾಚಾರ್ಯ ಮಹಾ ಸ್ವಾಮೀಜಿ ವಹಿಸಿದ್ದಾರೆ ಎಂದಿದ್ದಾರೆ.ಅ.11ರಿಂದ ಪ್ರತಿದಿನ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅ.21ರ ಬುಧವಾರ ವಿಜಯದಶಮಿ ಮಹೋತ್ಸವದ ನಿಮಿತ್ತ ಸ್ವಾಮಿಜಿಗಳ ಪಲ್ಲಕ್ಕಿ ಮಹೋತ್ಸವ ವಿವಿಧ ವಾದ್ಯ ಮೇಳಗಳೊಂದಿಗೆ ಸಂಜೆ 4 ಗಂಟೆಗೆ ಶ್ರೀಮಠದಿಂದ ಹೊರಟು ಬನ್ನಿಮಂಟಪಕ್ಕೆ ಆಗಮಿಸಿ ಸ್ವಾಮೀಜಿಯವರು ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಿ ಸೀಮೋಲ್ಲಂಘನಗೈಯುವರು. ಅನಂತರ ಎಲ್ಲರಿಗೆ ಅಶೀರ್ವಾದ ರೂಪದಲ್ಲಿ ಬನ್ನಿಯನ್ನು ವಿತರಿಸುವರು. ಅನಂತರ ಪಲ್ಲಕ್ಕಿ ಮೆರವಣಿಗೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತರಿಂದ ಪೂಜೆ ಸ್ವೀಕರಿಸುತ್ತ, ಶ್ರೀ ಮಠಕ್ಕೆ ಆಗಮಿಸಿ ಧರ್ಮಸಭೆಯಲ್ಲಿ ಭಾಗವಹಿಸುವರು.
- - --10ಎಚ್.ಎಲ್.ಐ2: ಹಿರೇಕಲ್ಮಠ ಶ್ರೀಗಳು