ಜಿಲ್ಲಾದ್ಯಂತ ಭಾನುವಾರದಿಂದ ಆರಂಭವಾಗುವ ನವರಾತ್ರಿ ಹಬ್ಬದ ಸಂಭ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಅ. 11ರಿಂದ 9 ದಿನಗಳ ಕಾಲ ಶರನ್ನವರಾತ್ರಿ ಉತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಲು ಜಿಲ್ಲೆಯ ಜನತೆ ಸಜ್ಜಾಗಿದ್ದಾರೆ.

ಹಾವೇರಿ: ಜಿಲ್ಲಾದ್ಯಂತ ಭಾನುವಾರದಿಂದ ಆರಂಭವಾಗುವ ನವರಾತ್ರಿ ಹಬ್ಬದ ಸಂಭ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಅ. 11ರಿಂದ 9 ದಿನಗಳ ಕಾಲ ಶರನ್ನವರಾತ್ರಿ ಉತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಲು ಜಿಲ್ಲೆಯ ಜನತೆ ಸಜ್ಜಾಗಿದ್ದಾರೆ.

ಹಾವೇರಿ ನಗರ ಸೇರಿದಂತೆ ರಾಣಿಬೆನ್ನೂರು, ಹಿರೇಕೆರೂರ, ಹಾನಗಲ್ಲ, ಬ್ಯಾಡಗಿ, ರಟ್ಟಿಹಳ್ಳಿ, ಗುತ್ತಲ ಹಾಗೂ ಶಿಗ್ಗಾಂವಿ ತಾಲೂಕುಗಳ ವಿವಿಧ ದೇವಾಲಯಗಳಲ್ಲಿ ದುರ್ಗಾದೇವಿಯ ವಿವಿಧ ಅವತಾರಗಳನ್ನು ಆರಾಧಿಸಲು ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಕಳೆದ ಎರಡು ದಿನಗಳಿಂದ ದೇವಸ್ಥಾನಗಳ ಆವರಣದಲ್ಲಿ ಸ್ವಚ್ಛತಾ ಕಾರ್ಯ ಚುರುಕುಗೊಂಡಿದ್ದು, ದೇವಸ್ಥಾನ ಸಮಿತಿಗಳು ಹಾಗೂ ಗ್ರಾಮಸ್ಥರು ಒಗ್ಗೂಡಿ ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ದೇಗುಲಗಳಿಗೆ ತೆಂಗಿನ ಗರಿ ಕಟ್ಟುವುದು, ಹಂದರ ಹಾಕುವುದು, ಸುಣ್ಣ-ಬಣ್ಣ ಬಳಿಯುವುದು, ವಿದ್ಯುತ್ ದೀಪಾಲಂಕಾರ ಮಾಡುವುದು ಸೇರಿದಂತೆ ವಿವಿಧ ಸ್ವಚ್ಛತಾ ಕಾರ್ಯಗಳು ಭರದಿಂದ ನಡೆಯುತ್ತಿವೆ. ಹಬ್ಬದ ದಿನಗಳಲ್ಲಿ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಮನೆ, ದೇಗುಲಗಳಲ್ಲಿ ಸಡಗರ: ಪ್ರಸಕ್ತ ವರ್ಷ ಸಕಾಲಕ್ಕೆ ಮಳೆಯಾಗದ ಹಿನ್ನೆಲೆ ಮಳೆ ಕೊರತೆ ಹಾಗೂ ಬರದ ನಡುವೆಯೂ ಶರನ್ನವರಾತ್ರಿಯ ಹಿನ್ನೆಲೆಯಲ್ಲಿ ಜಿಲ್ಲೆಯ ಮನೆ-ಮನಗಳಲ್ಲಿಯೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧ ದೇವಾಲಯಗಳಲ್ಲಿ ಪ್ರತಿದಿನ ದೇವಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ದೇವಿ ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮುತ್ತೈದೆಯರಿಗೆ ಉಡಿತುಂಬುವ ಸಂಪ್ರದಾಯವೂ ಹಲವು ದೇಗುಲಗಳಲ್ಲಿ ನೆರವೇರಲಿದೆ.

ನವರಾತ್ರಿ ವಿಶಿಷ್ಟಾಚಾರಣೆ: ಹಾವೇರಿ ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಮೂಲ ಹಕ್ಕಲು ಮರಿಯಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಆಚರಣೆ ವಿಶೇಷವಾಗಿರಲಿದೆ. ಇಲ್ಲಿ ಪ್ರತಿಷ್ಠಾಪಿಸಲಾಗಿರುವ ನವದುರ್ಗೆಯರಿಗೆ ಒಂಬತ್ತು ದಿನಗಳ ಕಾಲ ವಿವಿಧ ಅವತಾರ ಸ್ವರೂಪದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮೊದಲ ದಿನ ಶೈಲಪುತ್ರಿ, ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರಘಂಟಾ, ನಾಲ್ಕನೇ ದಿನ ಕೂಷ್ಮಾಂಡಾ, ಐದನೇ ದಿನ ಸ್ಕಂದಮಾತಾ, ಆರನೇ ದಿನ ಕಾತ್ಯಾಯಿನಿ, ಏಳನೇ ದಿನ ಕಾಲರಾತ್ರಿ, ಎಂಟನೇ ದಿನ ಮಹಾಗೌರಿ ಹಾಗೂ ಒಂಬತ್ತನೇ ದಿನ ಸಿದ್ಧಿದಾತ್ರಿ ರೂಪದಲ್ಲಿ ದೇವಿಯನ್ನು ಆರಾಧಿಸಲಾಗುತ್ತದೆ.

ಒಂದೇ ಕಡೆ ನವದುರ್ಗೆಯರ ವಿಶೇಷತೆ: ಹಾವೇರಿಯ ಹಕ್ಕಲು ಮರಿಯಮ್ಮ ದೇವಿ ದೇವಸ್ಥಾನವು ರಾಜ್ಯದಲ್ಲಿಯೇ ಒಂದೇ ಸ್ಥಳದಲ್ಲಿ ನವದುರ್ಗೆಯರು ಪ್ರತಿಷ್ಠಾಪನೆಯಾಗಿರುವ ಅಪರೂಪದ ದೇಗುಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇವಸ್ಥಾನದ ನಾಲ್ಕು ದಿಕ್ಕುಗಳಲ್ಲಿ ಶಿವ, ವಿಷ್ಣು, ಸೂರ್ಯ ಹಾಗೂ ಗಣಪತಿ ದೇವರುಗಳನ್ನೊಳಗೊಂಡ ದೇವಿ ಪಂಚಾಯತ್ ನಿರ್ಮಿಸಲಾಗಿದೆ. ಇದರೊಂದಿಗೆ ನವಗ್ರಹ ಗುಡಿ, ನವಗ್ರಹ ವೃಕ್ಷ, ನಾಗದೇವತಾ ಗುಡಿ ಹಾಗೂ ಚತುರ್ಮುಖ ಗಣಪತಿ ಮೂರ್ತಿಯೂ ಇಲ್ಲಿ ಇರುವುದರಿಂದ ವಿಶೇಷತೆ ಎನಿಸಿದೆ.

ದಿನಂಪ್ರತಿ ಧಾರ್ಮಿಕ ಕಾರ್ಯಕ್ರಮ: ಪ್ರತಿದಿನ ಬೆಳಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾಹ್ನ 12ಕ್ಕೆ ಮಂಗಳಾರತಿ ಹಾಗೂ ರಾತ್ರಿ 8ಕ್ಕೆ ಮಹಾಮಂಗಳಾರತಿ ನೆರವೇರಲಿದೆ. ಈ ನಡುವೆ ಸಂಜೆ ವೇಳೆ ಭಕ್ತರಿಗಾಗಿ ವಿವಿಧ ಧಾರ್ಮಿಕ ಹಾಗೂ ಸಂಗೀತ ಸೇವಾ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. ಅ.19ರಂದು ಬೆಳಗ್ಗೆ 10ಕ್ಕೆ ದುರ್ಗಾಹೋಮ ನಡೆಯಲಿದ್ದು, ಅ.20ರಂದು ಆಯುಧ ಪೂಜೆ ಹಾಗೂ ಅ.21ರಂದು ವಿಜಯದಶಮಿ ದಿವಸ ಎಂದಿನಂತೆ ಬೆಳಗ್ಗೆ ಪೂಜೆ, ಅಭಿಷೇಕ ನಡೆಯಲಿದೆ. ಸಂಜೆ ಶಮೀ ವೃಕ್ಷಕ್ಕೆ ಭಜನೆ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ.

ನವದುರ್ಗೆಯರಿಗೆ ಪ್ರತಿದಿನ ಕುಂಕುಮಾರ್ಚನೆ, ಅಭಿಷೇಕ ಹಾಗೂ ಪಾರಾಯಣ ಸೇರಿದಂತೆ ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದೆ. ಅ. 19ರಂದು ಬೆಳಗ್ಗೆ 10ಕ್ಕೆ ದುರ್ಗಾಹೋಮ, ಮರುದಿನ ಆಯುಧ ಪೂಜೆ ಹಾಗೂ ವಿಜಯದಶಮಿಯಂದು ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ ಎಂದು ಹಾವೇರಿ, ಹಕ್ಕಲು ಮರಿಯಮ್ಮ ದೇವಸ್ಥಾನದ ಅಧ್ಯಕ್ಷ ವಿ.ಕೆ. ಕೇಳಕರ ಹೇಳಿದರು.